ಕೊರೊನಾ ತಡೆಗೆ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ

ಕೊರಟಗೆರೆ, ಅ. ೨೯- ಮಹಾಮಾರಿ ಕೋವಿಡ್‌ನಿಂದ ರಕ್ಷಿಸಿಕೊಳ್ಳಬೇಕಾದರೆ ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಪಿಎಸ್‌ಐ ಮುತ್ತುರಾಜು ಹೇಳಿದರು.
ಪಟ್ಟಣದಲ್ಲಿ ಕೊರಟಗೆರೆ ಪೊಲೀಸ್ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಬೀದಿ ನಾಟಕದ ಮೂಲಕ ಕೋವಿಡ್-೧೯ ಬಗ್ಗೆ ಅರಿವು ಮೂಡಿಸಲು ನಡೆದ ಜನಜಾಗೃತಿ ಅಭಿಯಾನಕ್ಕೆ ತಮಟೆ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ ೮ ತಿಂಗಳಿನಿಂದ ಇಡೀ ದೇಶವೇ ಕೊರೊನಾ ಸೋಂಕಿಗೆ ತತ್ತರಿಸಿದ್ದು, ಈ ರೋಗವನ್ನು ತಡೆಗಟ್ಟುವಲ್ಲಿ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಕೊರೊನಾ ನಿಯಂತ್ರಣದಲ್ಲಿ ಸರ್ಕಾರದ ಜತೆ ಸಾರ್ವಜನಿಕರ ಪಾತ್ರವು ಸಾಕಷ್ಟಿದೆ. ಪ್ರತಿಯೊಬ್ಬರೂ ಕೊರೊನಾ ರೋಗದಿಂದ ದೂರ ಉಳಿಯಬೇಕಾದರೆ ಸರ್ಕಾರದ ಮಾರ್ಗಸೂಚಿಯಂತೆ ಸಾರ್ವಜನಿಕರು ಮನೆಯಿಂದ ಹೊರಗಡೆ ಬಂದಾಗ ಮಾಸ್ಕ್ ಧರಿಸಿ, ಸಾನಿಟೈಸರ್ ಬಳಕೆಯೊಂದಿಗೆ ಪರಸ್ಪರ ಅಂತರ ಕಾಪಾಡಿಕೊಳ್ಳವುದರೊಂದಿಗೆ ಸುರಕ್ಷತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಪ.ಪಂ. ಮುಖ್ಯಾಧಿಕಾರಿ ಲಕ್ಷ್ಮಣ್‌ಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ಅವಶ್ಯವಿದರೆ ಮಾತ್ರ ಹೊರಗೆ ಬನ್ನಿ. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು, ಬಿಸಿ ನೀರು ಹೆಚ್ಚು ಹೆಚ್ಚು ಕುಡಿಯಬೇಕು, ದೇಶದಿಂದ ಕೊರೊನಾ ರೋಗ ಹೋಗಲಾಡಿಸಲು ಕೊರೊನಾ ವಾರಿಯರ್ಸ್‌ಗಳೊಂದಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು ಪ್ರತಿಯೊಬ್ಬರೂ ಸರ್ಕಾರದ ಮಾರ್ಗಸೂಚಿ ಪಾಲಿಸುವಂತೆ ಮನವಿ ಮಾಡಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಬೀದಿ ನಾಟಕದ ತಂಡದ ಕಲಾವಿದರು ನಾಟಕ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ಪ.ಪಂ.ಸದಸ್ಯ ಕೆ.ಆರ್.ಓಬಳರಾಜು, ನಾಗರಾಜು, ಎಎಸೈಗಳಾದ ಯೋಗೀಶ್, ಮಂಜುನಾಥ್, ಪ.ಪಂ.ಆರೋಗ್ಯಾಧಿಕಾರಿ ರೈಸ್ ಮಹಮದ್, ಮುಖಂಡರುಗಳಾದ ಆಟೋಕುಮಾರ್, ರಾಘವೇಂದ್ರ, ದೊಡ್ಡಯ್ಯ, ನಾಗೇಂದ್ರ ಸೇರಿದಂತೆ ಬೀದಿ ನಾಟಕದ ತಂಡದ ಕಲಾವಿದರು ಉಪಸ್ಥಿತರಿದ್ದರು.