ಕೊರೊನಾ ತಡೆಗೆ ಪಂಚಸೂತ್ರ‌ ಪಾಲನೆ ಕಡ್ಡಾಯ: ಪ್ರಧಾನಿ‌ ಸೂಚನೆ

ನವದೆಹಲಿ, ಏ.4- ದೇಶದಲ್ಲಿ ನಿತ್ಯ ಕೋರೋನೋ ಸೋಂಕು ಹಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರ ತಡೆಗೆ ಪಂಚಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಪರೀಕ್ಷೆ, ಪತ್ತೆ, ಚಿಕಿತ್ಸೆ, ಕೋವಿಡ್ ಸೂಕ್ತ ವರ್ತನೆ ಪಾಲನೆ ಹಾಗೂ ಲಸಿಕೆ ಪಡೆಯುವ ಪಂಚಸೂತ್ರಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವ ಮೂಲಕ ಕೋವಿಡ್ ಸೋಂಕು ನಿಯಂತ್ರಣ ಮಾಡಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಕೊರೋನಾ ಲಸಿಕೆ ಕಾರ್ಯಕ್ರಮ, ಕೋವಿಡ್-19 ಸೋಂಕಿನ ಪರಿಸ್ಥಿತಿ ಕುರಿತು ಅವರಿಂದು ಉನ್ನತ ಮಟ್ಟದ ಪರಾಮರ್ಶೆ ಸಭೆ ನಡೆಸಿದ ಸಮಯದಲ್ಲಿ ಈ‌ ವಿಷಯ ತಿಳಿಸಿದ್ದಾರೆ.

ಕೋವಿಡ್ ಸೋಂಕು ತಡೆಗಟ್ಟಲು ಪಂಚ ಸೂತ್ರಗಳನ್ನು ಪ್ರತಿಯೊಬ್ಬರು ಕಟ್ಟುನಿಟ್ಟಾಗಿ ಪಾಲಿಸಬೇಕು, ದೇಶಾದ್ಯಂತ ಕೋವಿಡ್-19 ನಿರ್ವಹಣೆ, ಅದರ ಬಗ್ಗೆ ಅರಿವು ಸಮುದಾಯಗಳು ಮೂಡಿಸಬೇಕಾಗಿದೆ. ಕೋವಿಡ್-19 ನಿರ್ವಹಣೆಗಾಗಿ ಜನಭಾಗಿದಾರಿ ಮತ್ತು ಜನಾಂದೋಲನ ಆಗಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.

ಸೋಂಕು ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಶೇಕಡ 100ರಷ್ಟು ಮಾಸ್ಕ್ ಧರಿಸಬೇಕು, ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡಬೇಕು, ಸಾರ್ವಜನಿಕ ಮತ್ತು ಕೆಲಸದ ಸ್ಥಳಗಳಲ್ಲಿ ಆರೋಗ್ಯ ಸೌಲಭ್ಯವನ್ನು ಈ ತಿಂಗಳ 6 ರಿಂದ 14 ರವರೆಗೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಟ್ಟಿನಿಟ್ಟಿನ ಕ್ರಮ:

ಕಂಟೈನ್ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು, ಸಕ್ರಿಯ ಪ್ರಕರಣಗಳು ಹೆಚ್ಚುತ್ತಿರುವ ಕಡೆ ಸಮುದಾಯದ ಸ್ವಯಂಸೇವಕರನ್ನು ಬಳಸಿಕೊಂಡು ಜನರಲ್ಲಿ ಅರಿವು ಮೂಡಿಸಬೇಕು. ರಾಜ್ಯಗಳು ಸೋಂಕು ತಡೆಗಟ್ಟಲು ಸಮಗ್ರ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಅವರು ತಿಳಿಸಿದ್ದಾರೆ.

ಸೋಂಕು ತಡೆಯುವ ನಿಟ್ಟಿನಲ್ಲಿ ಕೋವಿಡ್ ಸೂಕ್ತ ವರ್ತನೆ ಪಾಲನೆ ಕಡ್ಡಾಯವಾಗಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆ, ಪರೀಕ್ಷಾ ಸೌಲಭ್ಯ, ಸಕಾಲಕ್ಕೆ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಮೂಲಸೌಕರ್ಯಕ್ಕೆ ಒತ್ತು:

ಆರೋಗ್ಯ ಕ್ಷೇತ್ರದಲ್ಲಿನ ಮೂಲ ಸೌಕರ್ಯಗಳಾದ ಆಕ್ಸಿಜನ್, ವೆಂಟೀಲೇಟರ್‍ಗಳನ್ನು ಹೆಚ್ಚಿಸುವ ಮೂಲಕ ಕೋವಿಡ್ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆಯನ್ನು ಕಡಿಮೆ ಮಾಡಬೇಕು, ಆಸ್ಪತ್ರೆ ಅಥವಾ ಮನೆಗಳಲ್ಲಿ ಚಿಕಿತ್ಸೆ ಪಡೆಯಲು ಬಯಸಿದರೆ ಅದಕ್ಕೆ ತಕ್ಕ ಸೌಲಭ್ಯ ಕಲ್ಪಿಸಬೇಕು ಎಂದು ಸಹ ಅವರು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ಪ್ರಕರಣ ನಿತ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ತಂಡವನ್ನು ಕಳುಹಿಸಿ, ಪರಿಶೀಲಿಸಲಾಗುವುದು. ಅದೇ ರೀತಿ ಪಂಜಾಬ್, ಚತ್ತೀಸ್‍ಗಢದಲ್ಲೂ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಆತಂಕಕಾರಿ ಬೆಳವಣಿಗೆ:

ದೇಶದ 10 ರಾಜ್ಯಗಳಲ್ಲಿ ಕೊರೋನಾ ಸೋಂಕು ನಿತ್ಯ ಗಣನೀಯವಾಗಿ ಏರಿಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ದಿನನಿತ್ಯ ದಾಖಲಾಗುತ್ತಿರುವ ಒಟ್ಟಾರೆ ಸೋಂಕಿನ ಪೈಕಿ ಶೇಕಡ 91 ರಷ್ಟು ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ವರದಿಯಾಗುತ್ತಿದೆ. ಈ ರಾಜ್ಯಗಳಲ್ಲಿ ಸೋಂಕು ತಡೆಗಟ್ಟಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಧಾನಿ‌ ನರೇಂದ್ರ ಮೋದಿ ತಿಳಿಸಿದ್ದಾರೆ.

ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯಗಳು ಮತ್ತು ಸೋಂಕು ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಸಮರೋಪಾದಿಯಲ್ಲಿ ಕೊರೋನಾ ತಡೆಗೆ ಕ್ರಮಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಸೋಂಕು ತಡೆಗಟ್ಟಲು ಕೈಗೊಂಡಿರುವ ಕ್ರಮಗಳು ಹಾಗೂ ಲಸಿಕೆ ನೀಡಿಕೆಯ ಕುರಿತು ಅಧಿಕಾರಿಗಳು ಪ್ರಧಾನಮಂತ್ರಿಯವರಿಗೆ ಪ್ರಾತ್ಯಕ್ಷಿಕೆ ನೀಡಿದರು. ಸಭೆಯಲ್ಲಿ ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ, ಕೇಂದ್ರ ಸಂಪುಟ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಸಬಲೀಕರಣ ಗುಂಪಿನ ಅಧ್ಯಕ್ಷರು, ಆರೋಗ್ಯ ಕಾರ್ಯದರ್ಶಿ ಸೇರಿದಂತೆ ಇನ್ನಿತರರು ಇದ್ದರು.