ಕೊರೊನಾ ತಡೆಗೆ ಕಠಿಣ ನಿಯಮ ಜಾರಿ

ಬೆಂಗಳೂರು, ಏ. ೨- ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗೆ ರಾಜ್ಯ ಸರ್ಕಾರ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡಲು ಮುಂದಾಗಿದ್ದು, ಈ ಹಿಂದೆ ಲಾಕ್‌ಡೌನ್ ನಂತರ ಜಾರಿ ಮಾಡಲಾಗಿದ್ದ ಕಠಿಣ ನಿಯಮಗಳ ಮತ್ತೆ ಜಾರಿಯಾಗೊಳಿಸುವ ಸಾಧ್ಯತೆಗಳಿವೆ.
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಕಠಿಣ ನಿಯಮ ಜಾರಿಗೊಳಿಸುವುದು ಅತಿ ಅವಶ್ಯ ಎಂಬುದನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಕಳೆದ ರಾತ್ರಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟಿದ್ದು, ಇಂದು ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪನವರು ಕೊರೊನಾ ತಡೆಗೆ ಕಠಿಣ ನಿಯಮಗಳನ್ನು ಒಳಗೊಂಡಂತೆ ನೂತನ ಮಾರ್ಗಸೂಚಿಗಳನ್ನು ಪ್ರಕಟಿಸಲಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಆರೋಗ್ಯ ಸಚಿವನಾಗಿ ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಕೊರೊನಾ ತಡೆಗೆ ಈ ಹಿಂದೆ ಜಾರಿ ಮಾಡಿದ್ದ ಬಿಗಿ ನಿಯಮಗಳನ್ನು ಜಾರಿ ಮಾಡಬೇಕು ಎಂಬುದನ್ನು ಹೇಳಿದ್ದೇನೆ. ಮುಖ್ಯಮಂತ್ರಿಗಳು ಎಲ್ಲರೊಡನೆ ಚರ್ಚಿಸಿ ಕಠಿಣ ನಿಯಮ ಜಾರಿ ಮಾಡುವುದಾಗಿ ಹೇಳಿದ್ದಾರೆ. ಯಾವುದೇ ಕ್ಷಣದಲ್ಲಿ ಮುಖ್ಯಮಂತ್ರಿಗಳು ಕೊರೊನಾ ತಡೆಯ ಕಠಿಣ ನಿಯಮಗಳನ್ನು ಪ್ರಕಟಿಸುತ್ತಾರೆ ಎಂದರು.
ಸಚಿವ ಸುಧಾಕರ್ ನೀಡಿರುವ ಸುಳಿವನ್ನು ಅವಲೋಕಿಸಿದರೆ ಈ ಹಿಂದೆ ಕೊರೊನಾ ತಡೆಗೆ ಲಾಕ್‌ಡೌನ್ ನಂತರ ಹೇರಿದ್ದ ಕಠಿಣ ನಿಯಮಗಳು ಮರು ಜಾರಿಯಾಗುವ ಸಾಧ್ಯತೆಗಳಿವೆ. ಥಿಯೇಟರ್‌ಗಳಲ್ಲಿ ಶೇ. ೫೦ ರಷ್ಟು ಪ್ರವೇಶಾವಕಾಶ, ಬಾರ್, ಪಬ್‌ಗಳ ಮೇಲೂ ನಿಯಂತ್ರಣ. ಸಭೆ, ಸಮಾರಂಭಗಳನ್ನು ಕೆಲ ದಿನ ನಿರ್ಬಂಧಿಸುವ ಕಠಿಣ ನಿಯಮಗಳು ಜಾರಿಯಾಗುವ ಸಾಧ್ಯತೆಗಳಿವೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಸಂಜೆಯೊಳಗೆ ಕೊರೊನಾ ತಡೆಯ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸುವರು.