ಕೊರೊನಾ ಜಾಗೃತಿ ಪ್ರಚಾರ ಆಂದೋಲನಕ್ಕೆ ಚಾಲನೆ

ಕೋಲಾರ,ನ,೧೮- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಎಲ್.ಇ.ಡಿ ವಾಹನಗಳ ಮೂಲಕ ಕೊರೊನಾ ಕುರಿತು ಹಮ್ಮಿಕೊಂಡಿದ್ದ ವಿಶೇಷ ಜಾಗೃತಿ ಅಭಿಯಾನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಹೆಚ್.ನಾಗೇಶ್ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರತಂದಿರುವ ಜನಪದ ಹಾಗೂ ಮಾರ್ಚ್ ಆಫ್ ಕರ್ನಾಟಕ ಮಾಸಿಕಗಳ ನವೆಂಬರ್ ತಿಂಗಳ ಕೋವಿಡ್ ವಿಶೇಷ ಸಂಚಿಕೆಗಳನ್ನು ಕೋಲಾರ ಸಂಸದರಾದ ಎಸ್.ಮುನಿಸ್ವಾಮಿ ಅವರು ಬಿಡುಗಡೆ ಮಾಡಿದರು.
ಅಭಿಯಾನದಲ್ಲಿ ಎರಡು ಪ್ರತ್ಯೇಕ ಎಲ್.ಇ.ಡಿ ಪ್ರದರ್ಶನ ವಾಹನಗಳು ಜಿಲ್ಲೆಯ ೬ ತಾಲ್ಲೂಕುಗಳ ೧೫೬ ಗ್ರಾಮ ಪಂಚಾಯತಿಗಳು ಸೇರಿದಂತೆ ಒಟ್ಟು ೧೮೦ ಗ್ರಾಮಗಳಲ್ಲಿ ಕರೋನಾ ಕುರಿತು ಜಾಗೃತಿ ಮೂಡಿಸುವ ವಿಡಿಯೋ ಪ್ರದರ್ಶಿಸಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪಲ್ಲವಿಹೊನ್ನಾಪುರ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ರಮೇಶ್ ಕುಮಾರ್, ವಿಧಾನ ಪರಿಷತ್ ಸದಸ್ಯರುಗಳಾದ ನಸೀರ್ ಅಹಮ್ಮದ್, ಗೋವಿಂದ ರಾಜು, ಕೋಲಾರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಓಂಶಕ್ತಿ ಚಲಪತಿ, ನಗರಸಭೆಯ ಸದಸ್ಯರುಗಳು, ಕೋಲಾರ ಉಪವಿಭಾಗ ಅಧಿಕಾರಿಗಳಾದ ಸೋಮಶೇಖರ್, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಮುನಿರಾಜು, ನಗರಸಭೆಯ ಪೌರಯುಕ್ತರಾದ ಶ್ರೀಕಾಂತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿಹೊನ್ನಾಪುರ, ಸಣ್ಣ ನೀರಾವರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿದಂತೆ ಮತ್ತಿತ್ತರು ಉಪಸ್ಥಿತರಿದ್ದರು.