ಕೊರೊನಾ ಚಿಕಿತ್ಸೆ : ಬಿಜೆಪಿ ಸರ್ಕಾರ ಸಂಪೂರ್ಣ ವಿಫಲ

ಬೋಯಿಂಗ್ ನೆರವಿನ ಆಸ್ಪತ್ರೆ ಜಿಲ್ಲೆಯಲ್ಲಿ ಸ್ಥಾಪಿಸಲು ಮನವಿ
ರಾಯಚೂರು.ಮೇ.೨೨- ರಾಜ್ಯ ಬಿಜೆಪಿ ಸರ್ಕಾರ ಕೊರೊನಾ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಸರ್ಕಾರ ಮತ್ತು ಸಚಿವರ ಚರ್ಮ ದಪ್ಪವಾಗಿದೆ. ಯಾರು ಏನು ಹೇಳಿದರೂ, ಕೇಳದ ಕಿವುಡುತನಕ್ಕೆ ಜಿಲ್ಲೆಯಲ್ಲಿ ವಿಶೇಷವಾಗಿ ಗ್ರಾಮಾಂತರ ಪ್ರದೇಶದಲ್ಲಿ ಅನೇಕರು ಕೊರೊನಾಕ್ಕೆ ಬಲಿಯಾಗುವಂತಹ ಪರಿಸ್ಥಿತಿಗೆ ಈ ಸರ್ಕಾರವೇ ಕಾರಣವೆಂದು ಶಾಸಕ ಬಸವನಗೌಡ ದದ್ದಲ್ ಅವರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಕಾಟಾಚಾರಕ್ಕೆ ಜಿಲ್ಲೆಗೆ ಭೇಟಿ ನೀಡುತ್ತಾರೆ. ಏಳು ಜನ ಶಾಸಕರೊಂದಿಗೆ ಮುಖಾಮುಖಿ, ಸಾಮಾಜಿಕ ಅಂತರದಲ್ಲಿ ಸಭೆ ನಿರ್ವಹಿಸದೇ, ಕೇವಲ ಪರಿಸ್ಥಿತಿಯಿಂದ ನುಣುಚಿಕೊಳ್ಳಲು ವಿಡಿಯೋ ಕಾನ್ಫ್‌ರೆನ್ಸ್‌ಗಳಲ್ಲಿ ಚರ್ಚೆ ನಡೆಸಿದ್ದಾರೆ. ಕೇವಲ ಗೊಂದಲದ ಹೇಳಿಕೆ ನೀಡುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಕೊರೊನಾ ಪರೀಕ್ಷೆ ನಿರ್ವಹಿಸುತ್ತಿಲ್ಲ. ಗ್ರಾಮಾಂತರ ಜನರಿಗೆ ಲಸಿಕೆ ಹಾಕುತ್ತಿಲ್ಲ. ಬ್ಲ್ಯಾಕ್ ಫಂಗಸ್ ಪ್ರಕರಣಗಳಿಗೆ ಔಷಧಿಯೂ ಒದಗಿಸುತ್ತಿಲ್ಲ.
ಸಾವಿನ ಸಂಖ್ಯೆಗಳನ್ನು ಸರ್ಕಾರ ಮತ್ತು ಜಿಲ್ಲಾಡಳಿತ ಮುಚ್ಚಿಡುತ್ತಿದೆ. ನನಗೆ ಮಾಹಿತಿಯಿದ್ದಂತೆ ಕಳೆದ ಒಂದು ತಿಂಗಳಲ್ಲಿ ೧೫೦ ಕ್ಕೂ ಅಧಿಕ ನನ್ನ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ನಿಧನರಾಗಿದ್ದಾರೆ. ಆದರೆ, ಜಿಲ್ಲಾಡಳಿತ ಮಾತ್ರ ಕೇವಲ ೨೭ ಜನ ಮಾತ್ರ ನಿಧನರಾಗಿದ್ದಾರೆಂದು ಹೇಳುತ್ತಾರೆ. ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಸತ್ತವರ ದಾಖಲೆಯೂ ನೀಡುತ್ತಿಲ್ಲ. ಈ ರೀತಿ ಮಾಡುವ ಮೂಲಕ ಕೊರೊನಾ ಹರಡುವಿಕೆ ಮತ್ತಷ್ಟು ಹೆಚ್ಚಿಸುವಲ್ಲಿ ಸ್ವತಃ ಅಧಿಕಾರಿಗಳೇ ಸಹಕರಿಸುತ್ತಿದ್ದಾರೆಂದು ಆರೋಪಿಸುವಂತಹ ಪ್ರಸಂಗಕ್ಕೆ ದಾರಿ ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಆರೋಗ್ಯ ಸೇವಾ ಸೌಕರ್ಯ ಸುಧಾರಿಸುವಲ್ಲಿ ಗಮನ ಹರಿಸುತ್ತಿಲ್ಲ. ಅಮೇರಿಕಾದ ಬೋಯಿಂಗ್ ಕಂಪನಿ ಕರ್ನಾಟಕಕ್ಕೆ ಎರಡು ಆಸ್ಪತ್ರೆಗಳನ್ನು ನೀಡಲು ಮುಂದಾಗಿದೆ. ಇದರಲ್ಲಿ ಒಂದು ಬೆಂಗಳೂರು ಮತ್ತೊಂದು ಗುಲ್ಬರ್ಗಾಕ್ಕೆ ಮಂಜೂರು ಮಾಡಿದ್ದರೇ, ಮಹತ್ವಕಾಂಕ್ಷಿ ಜಿಲ್ಲೆಯ ಗತಿಯೇನು?. ಇದನ್ನು ಕೇಳುವುದು ಉಸ್ತುವಾರಿ ಸಚಿವರ ಜವಾಬ್ದಾರಿಯಲ್ಲವೇ?. ಆದರೇ, ಉಸ್ತುವಾರಿ ಸಚಿವರು ಮಾತ್ರ ಸರ್ಕಾರದ ಮೇಲೆ ಒತ್ತಡವೇರಿ ಬೋಯಿಂಗ್ ಆಸ್ಪತ್ರೆ ಜಿಲ್ಲೆಯಲ್ಲಿ ಸ್ಥಾಪಿಸುವಂತೆ ಮಾಡುವಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ.
ಐಐಟಿ, ಏಮ್ಸ್ ನಂತಹ ಮಹತ್ವದ ಯೋಜನೆಗಳಿಂದ ನಾವು ಈಗಾಗಲೇ ವಂಚಿತಗೊಂಡಿದ್ದೇವೆ. ಕನಿಷ್ಟ ಇಂತಹ ಪರಿಸ್ಥಿತಿಯಲ್ಲಾದರೂ, ಆಸ್ಪತ್ರೆಗಳನ್ನು ಸ್ಥಾಪಿಸಿ, ಅನುಕೂಲ ಮಾಡಬಹುದು. ಕಲ್ಯಾಣ ಕರ್ನಾಟಕ ಯೋಜನೆಯ ಅನುದಾನವನ್ನು ಅಭಿವೃದ್ಧಿಗೆ ನೀಡದೇ, ಕೊರೊನಾ ಮಹಾಮಾರಿ ನಿಯಂತ್ರಣ ಮತ್ತು ಚಿಕಿತ್ಸೆಗೆ ಅನುಕೂಲವಾಗುವ ರೀತಿಯಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಮಂಜೂರು ಮಾಡುವಂತೆ ಹೇಳಿದರು. ಕೆಲ ದಿನ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡರೂ ತೊಂದರೆಯಿಲ್ಲ. ಜನರ ಜೀವನ ಪ್ರಮುಖವಾಗಿದೆ.
ಶಕ್ತಿನಗರ, ಗಂಜಳ್ಳಿ, ಮೀರಾಪೂರು ಮತ್ತಿತರ ಕಡೆ ಕೊರೊನಾ ತೀವ್ರವಾಗಿದೆ. ಜನ ತಪಾಸಣೆಗೆ ಮುಂದಾಗುತ್ತಿಲ್ಲ. ವೈದ್ಯರು ಬಂದರೇ ಓಡಿ ಹೋಗುತ್ತಿದ್ದಾರೆ. ಸೋಂಕಿತರು ರಿಮ್ಸ್ ಮತ್ತು ಓಪೆಕ್ ಆಸ್ಪತ್ರೆಗೆ ಹೋಗಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯ ಇಲಾಖೆ ನೀಡುವ ಮಾಹಿತಿಯಂತೆ ಏಪ್ರೀಲ್ ತಿಂಗಳಲ್ಲಿ ೧೪೪೩, ಮೇ ತಿಂಗಳಲ್ಲಿ ೯೩೦ ಕೊರೊನಾ ಸೋಂಕಿತರು ಗ್ರಾಮಾಂತರ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆಂದು ಹೇಳುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಅನೇಕ ಸೋಂಕಿಗೆ ಗುರಿಯಾಗಿದ್ದಾರೆ. ಕೆಲವರಲ್ಲಿ ಉತ್ತಮ ರೋಗ ನಿರೋಧಕ ಶಕ್ತಿಯಿಂದ ಗುಣಮುಖರಾಗುತ್ತಿದ್ದರೇ, ಇನ್ನೂ ಕೆಲವರು ಕೊರೊನಾಕ್ಕೆ ಬಲಿಯಾಗುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ತಪಾಸಣೆ ಹೆಚ್ಚಿಸಬೇಕು, ಕ್ವಾರಂಟೈನ್ ಕೇಂದ್ರ ನಿರ್ಮಿಸಬೇಕೆಂದು ಆಗ್ರಹಿಸಿದ ಅವರು, ಗ್ರಾಮಾಂತರ ಜನರಿಗೆ ಧೈರ್ಯ ತುಂಬಿ, ತಪಾಸಣೆ ಮತ್ತು ಚಿಕಿತ್ಸೆಗೆ ಮುಂದಾಗುವಂತೆ ಮಾಡಲಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ನಾನು ಖುದ್ಧಾಗಿ ನನ್ನ ಸ್ವಂತ ಖರ್ಚು ವೆಚ್ಚಿನಲ್ಲಿ ಎಲ್ಲಾ ಪ್ರಾಥಮಿಕ ಕೇಂದ್ರ ಊಟದ ವ್ಯವಸ್ಥೆ ಮಾಡುವ ಮೂಲಕ ತಪಾಸಣೆ ಮತ್ತು ಚಿಕಿತ್ಸೆಗೆ ಬಂದವರ ನೆರವಿಗೆ ಮುಂದಾಗಿದ್ದೇನೆ. ಪ್ರತಿ ನಿತ್ಯ ೧೫೦೦ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಒಟ್ಟಾರೆಯಾಗಿ ಉಸ್ತುವಾರಿ ಸಚಿವರು ರಾಜ್ಯ ಸರ್ಕಾರ ಹಿಂದುಳಿದ ಜಿಲ್ಲೆಯ ಆರೋಗ್ಯ ಸುಧಾರಣೆಗೆ ಹೆಚ್ಚಿನ ಗಮನ ಹರಿಸುವಂತೆ ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ನರಸನಗೌಡ, ನಾಗೇಂದ್ರಪ್ಪ ಮಟಮಾರಿ, ರಾಜಶೇಖರ ರಂಗಾ, ಬಷೀರ್ ಅಹ್ಮದ್, ಜಾವೀದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.