ಕೊರೊನಾ ಚಿಕಿತ್ಸೆ ನಿರ್ಲಕ್ಷ್ಯಿಸಿದರೇ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ

ಕೊರೊನಾ ಪ್ರಕರಣ : ಉಸ್ತುವಾರಿ ಸಚಿವರಿಂದ ವಿಡಿಯೋ ಕಾನ್ಫ್‌ರೆನ್ಸ್ ಪರಿಶೀಲನೆ
ರಾಯಚೂರು.ಏ.೨೩- ಕೊರೊನಾ ಸೋಂಕಿತ ವ್ಯಕ್ತಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡುವ ಮೂಲಕ ಜೀವ ರಕ್ಷಿಸುವ ಜವಾಬ್ದಾರಿ ನಮ್ಮದ್ದಾಗಿದ್ದು, ಯಾರಾದರೂ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯೆ ವಹಿಸಿದರೇ, ಅವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಬೇಕಾಗುತ್ತದೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಅವರಿಂದು ಬೆಂಗಳೂರಿನಿಂದ ತಮ್ಮ ಕಛೇರಿಯಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಶಾಸಕರೊಂದಿಗೆ ಕೊರೊನಾ ಸ್ಥಿತಿಗತಿ ಸಮಾಲೋಚನೆ ನಡೆಸಿದರು. ಕೊರೊನಾ ಸೋಂಕು ಈ ಸಲ ತೀವ್ರವಾಗಿದೆ. ಕಳೆದ ಸಲಕ್ಕಿಂತ ಮೂರು ಪಟ್ಟು ಅಧಿಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಮಂದವಾಗಿರುವ ಜಿಲ್ಲಾಡಳಿತ ಕೆಲಸ ತೀವ್ರಗೊಳಿಸಬೇಕು. ತಾಲೂಕು ಸೇರಿದಂತೆ ಎಲ್ಲೆಡೆ ಇರುವ ಮೋರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಇದಕ್ಕೆ ಬಳಸಿಕೊಂಡು ಅಲ್ಲಿ ಹಾಸಿಗೆಗಳ ವ್ಯವಸ್ಥೆ ಮಾಡಬೇಕು.
ಸರ್ಕಾರದಿಂದ ಯಾವುದೇ ಅಗತ್ಯತೆಗಳಿದ್ದರೂ, ತ್ವರಿತಗತಿಯಲ್ಲಿ ವ್ಯವಸ್ಥೆ ಮಾಡುವೇ. ಸೋಮವಾರ ಕ್ಯಾಬಿನೆಟ್ ಸಭೆಯಿದ್ದು, ಈ ಸಭೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಹೇಳಿದ ಅವರು, ಅಗತ್ಯ ಸೌಲಭ್ಯ ನೀಡಲು ಕ್ರಮ ಕೈಗೊಳ್ಳುತ್ತೇನೆ. ಓಪೆಕ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಸಮರ್ಪಕವಾದ ಚಿಕಿತ್ಸೆ ದೊರೆಯದಿರುವ ಬಗ್ಗೆ ಶಾಸಕರ ದೂರಿನ ಹಿನ್ನೆಲೆಯಲ್ಲಿ ಡೀನ್ ಅವರನ್ನು ತರಾಟೆಗೆ ತೆಗೆದುಕೊಂಡು ಬಡವರು, ಬಲ್ಲೀದರು ಎನ್ನದೇ ಏಕರೂಪದ ಚಿಕಿತ್ಸೆ ನೀಡುವಂತೆ ಆದೇಶಿಸಿದರು.
ದೇವದುರ್ಗ ಕೊರೊನಾ ಸೋಂಕಿತರೊಬ್ಬರಿಗೆ ಎರಡು ದಿನಗಳಿಂದ ಓಪೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ ಎನ್ನುವ ದೂರು ಶಾಸಕ ಕೆ.ಶಿವನಗೌಡ ನಾಯಕ ಅವರು ಹೇಳಿದ್ದರು. ಇದರಿಂದ ತೀವ್ರ ಅಸಮಾಧಾನಗೊಂಡ ಅವರು ಈ ರೀತಿಯ ಅಸ್ತವ್ಯಸ್ತತೆಯನ್ನು ಸಹಿಸಲಾಗುವುದೆಂದು ಚಾಟಿ ಬೀಸಿದರು.
ಶಾಸಕ ಡಾ.ಶಿವರಾಜ ಪಾಟೀಲ್ ಅವರು, ಮಾತನಾಡುತ್ತಾ, ಕೊರೊನಾ ತಪಾಸಣೆ ವರದಿ ನೀಡಲು ನಾಲ್ಕರಿಂದ ಐದು ದಿನಗಳು ಕಾಲಾವಧಿ ಬೇಕಾಗುತ್ತದೆ. ಈ ಅವಧಿಯಲ್ಲಿ ಮಾದರಿ ತಪಾಸಣೆ ನೀಡಿದ ವ್ಯಕ್ತಿ ಸಾರ್ವಜನಿಕರೊಂದಿಗೆ ಓಡಾಡುವುದು ಸೋಂಕು ಹರಡುವುದಕ್ಕೆ ಕಾರಣವಾಗುತ್ತದೆ. ಮಾದರಿ ಸಂಗ್ರಹಿಸಿದ ವ್ಯಕ್ತಿಗೆ ಮುದ್ರೆ ಹಾಕುವುದು ಇಲ್ಲವೇ ಕ್ವಾರಂಟೈನ್‌ನಲ್ಲಿ ಉಳಿಯುವಂತಹ ವ್ಯವಸ್ಥೆ ಮಾಡಬೇಕೆಂದು ಸಲಹೆ ನೀಡಿದರು.
ಸಿಂಧನೂರು ತಾಲೂಕಿನ ಕೊರೊನಾ ಪ್ರಕರಣ ಸಂಖ್ಯೆ ಹೆಚ್ಚುತ್ತಿವೆ. ವೆಂಟಿಲೇಟರ್ ಸಮಸ್ಯೆ ಇದೆ. ಏನೆ ಸಮಸ್ಯೆಯಾದರೂ ವೈದ್ಯರು ನನ್ನನ್ನು ಸಂಪರ್ಕಿಸುತ್ತಾರೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಗಮನ ಹರಿಸಬೇಕೆಂದು ಸಚಿವರ ಗಮನಕ್ಕೆ ತಂದರು. ಉದ್ಯೋಗ ಖಾತ್ರಿ ಯೋಜನೆ ಆರಂಭಗೊಂಡಿದ್ದು, ಒಂದು ಹಳ್ಳಿಯಿಂದ ನೂರಾರು ಜನ ಸೇರುವಂತಹ ಸಂದರ್ಭ ಕೊರೊನಾ ಹರಡುವುದಕ್ಕೆ ದಾರಿ ಮಾಡುತ್ತದೆ. ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರು, ಮಾಹಿತಿ ನೀಡುತ್ತಾ, ಕಳೆದ ಎರಡು ದಿನಗಳಿಂದ ಪ್ರಕರಣ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ.
೫೦೦ ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ. ಇಂದು ೫೨೨ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಶೇ.೮೦ ರಷ್ಟು ಸಾಮಾನ್ಯ ರೋಗ ಲಕ್ಷಣಗಳಿವೆ. ಓಪೆಕ್ ಮತ್ತು ರಿಮ್ಸ್ ಆಸ್ಪತ್ರೆಯಲ್ಲಿ ಸುಮಾರು ೨೭೦ ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ, ಯರಮರಸ್, ಸಿಂಧನೂರು, ಮಾನ್ವಿ, ಲಿಂಗಸೂಗೂರು ಮತ್ತಿತರ ಪ್ರದೇಶದ ಕ್ವಾರಂಟೈನ್ ಕೇಂದ್ರಗಳಲ್ಲಿ ೨೫೦ ಹಾಸಿಗೆಗಳನ್ನು ಮಾಡಲಾಗಿದೆ. ನಾಲ್ಕು ತಾಲೂಕು ಆಸ್ಪತ್ರೆಯ ಐಸಿಯುನಲ್ಲಿ ೧೦ ವೆಂಟಿಲೇಟರ್ ಒದಗಿಸಲಾಗಿದ್ದು, ನಗರದ ರಿಮ್ಸ್ ಮತ್ತು ಓಪೆಕ್ ಆಸ್ಪತ್ರೆಯಲ್ಲಿ ೧೦೦ ವೆಂಟಿಲೇಟರ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಕಳೆದ ಸಲ ನಾಲ್ಕು ಆಸ್ಪತ್ರೆಗಳಲ್ಲಿ ಮಾತ್ರ ಕೋವಿಡ್ ಚಿಕಿತ್ಸೆ ನಿರ್ವಹಿಸುತ್ತಿದ್ದವು. ಈಗ ೧೪ ಆಸ್ಪತ್ರೆಗಳು ಕಾರ್ಯ ನಿರ್ವಹಿಸಿದ್ದು, ಜಿಲ್ಲಾಡಳಿತ ೩೦ ವೆಂಟಿಲೇಟರ್ ನೀಡಲಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಸಂಖ್ಯೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡಿದರು. ಕೊರೊನಾ ಪ್ರಕರಣಗಳು ಹೆಚ್ಚಳವಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಐಎಂಎ ಕಾರ್ಯದರ್ಶಿ ಡಾ.ನಾಗರಾಜ ಭಾಲ್ಕಿ ಅವರು ಮಾತನಾಡುತ್ತಾ, ಕೊರೊನಾ ಚಿಕಿತ್ಸೆಯಲ್ಲಿ ವೈದ್ಯರು ನಿರ್ಭಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾಡಳಿತದೊಂದಿಗೆ ಎಲ್ಲಾ ಸಹಕಾರದೊಂದಿಗೆ ಕಾರ್ಯ ನಿರ್ವಹಿಸಲಾಗುತ್ತಿದೆ. ರೆಮ್‌ಡಿಸಿವಿರ್ ಔಷಧಿಗಳನ್ನು ಪೂರೈಸುವಂತೆ ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ ಹಾಗೂ ಕೊಪ್ಪಳ ಸಂಸದ ಕರಡಿ ಸಂಗಣ್ಣ, ಶಾಸಕ ರಾಜಾ ವೆಂಕಟಪ್ಪ ನಾಯಕ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಎಸ್ಪಿ ಪ್ರಕಾಶ ನಿಕಂ, ಎಡಿಸಿ ದುರ್ಗೇಶ, ಡಿಹೆಚ್‌ಓ ಡಾ.ರಾಮಕೃಷ್ಣ, ತಹಶೀಲ್ದಾರ್ ಹಾಗೂ ಇಲಾಖೆಯ ಮುಖ್ಯಸ್ಥರು ಉಪಸ್ಥಿತರಿದ್ದರು.