ಕೊರೊನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಮೀಸಲು


ಬೆಂಗಳೂರು, ಏ.೧೯- ಬೆಂಗಳೂರಿನ ಎಲ್ಲೆಡೆ ಕೋವಿಡ್ ಸೋಂಕು ಪ್ರಕರಣಗಳು ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿರುವ ಕಾರಣದಿಂದಾಗಿ ಕೆಲ ಖಾಸಗಿ ಆಸ್ಪತ್ರೆಗಳನ್ನು ಕೊರೋನಾ ಚಿಕಿತ್ಸೆಗೆ ಮೀಸಲಿಡಲು ಬಿಬಿಎಂಪಿ ಗಂಭೀರ ಚಿಂತನೆ ನಡೆಸಿದೆ.
ಇತ್ತೀಚೆಗೆ ಆರೋಗ್ಯ ಸಚಿವರೊಂದಿಗೆ ಬಿಬಿಎಂಪಿ ಅಧಿಕಾರಿಗಳು ಚರ್ಚೆ ನಡೆಸಿದ್ದು,ಒಂದು ವೇಳೆ ಬೆಂಗಳೂರಿನಲ್ಲಿ ಪರಿಸ್ಥಿತಿ ಕೈಮೀರಿ ಹೋದರೆ ಪಟ್ಟಿ ಮಾಡಿರುವ ೧೧೮ ಆಸ್ಪತ್ರೆಗಳನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು ಮಾಡಿ ಚಿಕಿತ್ಸೆ ನೀಡಲು ಎಲ್ಲ ಸಿದ್ಧತೆ ನಡೆದಿದೆ.
ಅಲ್ಲದೆ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ಸುಮಾರು ೧೧೮ ಆಸ್ಪತ್ರೆಗಳನ್ನು ಈಗಾಗಲೇ ಗುರುತಿಸಿದ್ದು ಕೋವಿಡ್ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ ಎಂದು ಪಾಲಿಕೆಯ ಅಧಿಕಾರಿವೊಬ್ಬರು ತಿಳಿಸಿದ್ದಾರೆ.
ನೋಟಿಸ್ ಜಾರಿ: ಕೋವಿಡ್-೧೯ ಸೋಂಕಿತರಿಗೆ ಬೆಡ್ ಮೀಸಲು ವಿಚಾರವಾಗಿ ಪಾಲಿಕೆ ಬೆಂಗಳೂರಿನ ಐದು ಪ್ರಮುಖ ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಿದೆ.
ಸರ್ಕಾರಿ ಆದೇಶದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಶೇ. ೫೦ರಷ್ಟು ಹಾಸಿಗೆ ಮೀಸಲಿರಿಸಿರುವ ಸಂಬಂಧ ಮುಖ್ಯ ಆಯುಕ್ತ ಗೌರವ್‌ಗುಪ್ತ ಅವರು ನಿನ್ನೆ ಸಂಜೆ ಪ್ರಮುಖ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ಕ್ರಮೇಣ ಏರಿಕೆಯಾಗುತ್ತಿದ್ದು, ಸರ್ಕಾರದ ಆದೇಶದಂತೆ ಸೋಂಕಿತರ ಚಿಕಿತ್ಸೆಗಾಗಿ ಶೇ. ೫೦ ರಷ್ಟು ಹಾಸಿಗೆಗಳನ್ನು ಮೀಸಲಿಡಲಾಗಿದೆಯೇ, ಇಲ್ಲವೇ ಎಂಬುದನ್ನು ತಿಳಿಯಲು ಆಯುಕ್ತರು ರವರು ಇಂದು ವಿಕ್ರಂ, ಪೋರ್ಟಿಸ್, ಆಸ್ಟರ್ ಸಿಎಂಐ, ಕೊಲಂಬಿಯಾ ಏಷಿಯಾ ಹಾಗೂ ಬ್ಯಾಪ್ಟಿಸ್ಟ್ ಆಸ್ಪತ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಯಾವ ಆಸ್ಪತ್ರೆಯಲ್ಲೂ ಶೇ. ೫೦ ಹಾಸಿಗೆಗಳನ್ನು ಮೀಸಲಿಡದ ಕಾರಣ ೫ ಆಸ್ಪತ್ರೆಗಳಿಗೆ ಕಾರಣ ಕೇಳಿ ನೋಟೀಸ್ ನೀಡಿ ೨೪ ಗಂಟೆಯೊಳಗಾಗಿ ಉತ್ತರ ನೀಡುವಂತೆ ತಿಳಿಸಲಾಗಿದೆ. ಅಂತೆಯೇ ಹಾಸಿಗೆ ನೀಡದಿದ್ದರೆ ಕೆಪಿಎಂಇ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಸೂಚನೆ ನೀಡಲಾಗಿದೆ.