ಕೊರೊನಾ ಗೆದ್ದ ಯೋಗಿ

ಲಕ್ನೋ,ಏ.೩೦- ಇತ್ತೀಚೆಗೆ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಸ್ವಯಂ ಐಸೋಲೇಷನ್ ವ್ಯವಸ್ಥೆಯಲ್ಲಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್’ರವರು ಶುಕ್ರವಾರ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಕೊರೊನಾ ಪರೀಕ್ಷೆಯಲ್ಲಿ ಅವರ ವರದಿ ನೆಗೆಟಿವ್ ಬಂದಿದೆ. ಈ ವಿಷಯವನ್ನು ಯೋಗಿ ಆದಿತ್ಯನಾಥ್’ರವರು ಟ್ವೀಟರ್ ಸಂದೇಶದ ಮೂಲಕ ತಿಳಿಸಿದ್ದಾರೆ. ’ತಾವು ಕೊರೊನಾ ಸೋಂಕಿನಿಂದ ಗುಣಮುಖರಾಗಿರುವುದಾಗಿ’ ಹೇಳಿದ್ದಾರೆ.
’ವೈದ್ಯರ ಸಹಕಾರ ಹಾಗೂ ಆರೈಕೆಯಿಂದ ತಾವು ಕೋವಿಡ್-೧೯ ರಿಂದ ಗುಣಮುಖನಾಗಿದ್ದೆನೆ. ತಮ್ಮ ಆರೋಗ್ಯಕ್ಕೆ ಪ್ರಾರ್ಥಿಸಿದ ಪ್ರತಿಯೋರ್ವರಿಗೂ ಧನ್ಯವಾದ ಅರ್ಪಿಸುವುದಾಗಿ’ ಸಂದೇಶದಲ್ಲಿ ತಿಳಿಸಿದ್ದಾರೆ.
ಕಳೆದ ಏಪ್ರಿಲ್ ೧೪ ರಂದು ಯೋಗಿ ಆದಿತ್ಯನಾಥ್ ರವರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ತದನಂತರ ಅವರು ಸ್ವಯಂ ಐಸೋಲೇಷನ್ ವ್ಯವಸ್ಥೆಯಲ್ಲಿದ್ದರು. ಇವರ ಸಂಪರ್ಕದಲ್ಲಿದ್ದ ಕೆಲ ಅಧಿಕಾರಿಗಳಲ್ಲಿಯೂ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.
ವ್ಯಾಕ್ಸಿನ್ ಪಡೆದಿದ್ದರು: ಯೋಗಿ ಆದಿತ್ಯನಾಥ್ ರವರು ಕಳೆದ ಏಪ್ರಿಲ್ ೫ ರಂದು ಮೊದಲ ಹಂತದ ಕೊರೊನಾ ವ್ಯಾಕ್ಸಿನ್ ಪಡೆದುಕೊಂಡಿದ್ದರು. ಸದ್ಯ ಉತ್ತರ ಪ್ರದೇಶ ರಾಜ್ಯದಲ್ಲಿಯೂ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ.