ಕೊರೊನಾ ಗಂಭೀರ ಆದರೆ, ಆತಂಕ ಬೇಡ : ಡಬ್ಲ್ಯುಹೆಚ್‌ಒ

ಜಿನೇವಾ ಸ್ವಿಟ್ಜರ್ಲೆಂಡ್, ಡಿ. ೨೯- ಮಾರಣಾಂತಿಕ ಕೊರೊನಾ ಸಾಂಕ್ರಾಮಿಕ ರೋಗ ಜಗತ್ತಿನಾದ್ಯಂತ ಭೀಕರ ಪರಿಣಾಮ ಬೀರಿದೆಯಾದರೂ ಮುಂದೆ ಎದುರಾಗಬಹುದಾದ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಈಗಿನಿಂದಲೇ ಗಂಭೀರವಾಗಿ ಸಿದ್ಧತೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಘಟನೆ ಜನರಿಗೆ ಕರೆ ನೀಡಿದೆ.
ಇದು ಎಚ್ಚರಿಕೆಯ ಗಂಟೆಯಾಗಬೇಕು ಎಂದು ವಿಶ್ವ ಆರೋಗ್ಯ ಸಂಘಟನೆಯ ತುರ್ತು ವಿಭಾಗದ ಮುಖ್ಯಸ್ಥ ಮೈಕೆಲ್ ರಿ ಯಾನ್ ಅವರು ನಿನ್ನೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಚೈನಾದಲ್ಲಿ ಕಳೆದ ವರ್ಷ ಮೊದಲ ಬಾರಿಗೆ ಕಾಣಿಸಿಕೊಂಡ ವಿನೂತನ ವೈರಾಣು ತನ್ನ ಭೀಕರ ಪರಿಣಾಮವನ್ನು ಇಡೀ ಜಗತ್ತಿನ ಮೇಲೆ ಬೀರುವುದರ ಬಗ್ಗೆ ವಿವರಿಸಿ ಅವರು ಮಾತನಾಡುತ್ತಿದ್ದರು.
ಚೀನಾದಲ್ಲಿ ಮೊದಲ ಬಾರಿಗೆ ಸಾಂಕ್ರಾಮಕ ರೋಗ ಕಾಣಿಸಿಕೊಂಡ ನಂತರ ಇದುವರೆಗೂ ವಿಶ್ವದಾದ್ಯಂತ ಸುಮಾರು
೧.೮ ದಶಲಕ್ಷ ಜನರನ್ನು ಬಲಿತೆಗೆದುಕೊಂಡಿದೆ. ವಿಶ್ವದ ಒಟ್ಟು ಜನಸಂಖ್ಯೆಯ ಸುಮಾರು ೮೦ ದಶಲಕ್ಷದಷ್ಟು ಜನರಿಗೆ ಸೋಂಕು ತಗಲಿದೆ ಎಂದು ಅವರು ಹೇಳಿದರು.
ಈ ಸಾಂಕ್ರಾಮಿಕ ರೋಗ ಅತ್ಯಂತ ಗಂಭೀರವಾಗಿದೆ ಎಂದು ಹೇಳಿದ ಅವರು ಜಗತ್ತಿನಾದ್ಯಂತ ಈ ರೋಗ ಅತ್ಯಂತ ವೇಗದಿಂದ ಹರಡಿದೆ. ಭೂಖಂಡದ ಮೂಲೆಮೂಲೆಗೂ ಹರಡಿದೆ ಆದರೆ ಇದು ಅತಿ ದೊಡ್ಡ ಸಾಂಕ್ರಾಮಿಕ ರೋಗವೇ ಅಲ್ಲ ಎಂದು ಅವರು ಜನತೆಗೆ ಧೈರ್ಯ ತುಂಬಿದ್ದಾರೆ.
ಈ ಸಾಂಕ್ರಾಮಿಕ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಅತ್ಯಂತ ವೇಗದಲ್ಲಿ ಹರಡುವುದರ ಜೊತೆಗೆ ಜನರನ್ನು ಬಲಿತೆಗೆದುಕೊಳ್ಳುತ್ತದೆ. ಸಾವಿನ ಪ್ರಮಾಣವು ಹೆಚ್ಚಾಗಿದ್ದು ಇತ್ತೀಚಿನ ದಿನಗಳಲ್ಲಿ ಈ ಪ್ರಮಾಣ ಕಡಿಮೆಯಾಗಿದೆ ಎಂದು ರಿಯಾನ್ ಹೇಳಿದರು.
ಭವಿಷ್ಯದಲ್ಲಿ ಇದಕ್ಕಿಂತ ಇನ್ನೂ ಹೆಚ್ಚು ಗಂಭೀರವಾದಂತಹ ಸಾಂಕ್ರಾಮಿಕ ರೋಗಗಳು ಎದುರಾಗಬಹುದು. ಅದಕ್ಕಾಗಿ ಈಗಿನಿಂದಲೇ ನಾವು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ ಎಂದು ಅವರು ಕರೆ ನೀಡಿದ್ದಾರೆ.
ಈ ವೈರಸ್ ಅನ್ನು ನಿಗ್ರಹಿಸಲು ಜಗತ್ತಿನಾದ್ಯಂತ ದೊಡ್ಡ ಪ್ರಮಾಣದಲ್ಲಿ ವೈಜ್ಞಾನಿಕ ಪ್ರಗತಿ ಕಂಡುಬಂದಿದೆ ಎಂದು ಸಂಘಟನೆಯ ಹಿರಿಯ ಸಲಹೆಗಾರ ಬ್ರೂಸ್ ಆಯ್ಲ್ವರ್ಡ್ ಅವರು ಹೇಳಿದ್ದಾರೆ. ಈ ರೋಗದ ಎರಡನೇ ಮತ್ತು ಮೂರನೇ ಅಲೆ ಕಂಡುಬರುತ್ತಿದ್ದು, ಇದನ್ನು ನಿಭಾಯಿಸಲು ಸಿದ್ಧತೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.