ಕೊರೊನಾ ಕೊನೆಗಾಣಿಸಲು ಪದೆ ಪದೆ ಕೈ ತೊಳೆಯಿರಿ: ಬೆಳಕೋಟೆ

ಬೀದರ:ಜ.3: ಮಹಾಮಾರಿ ಕಿಲ್ಲರ್ ಕೊರೊನಾವನ್ನು ಒಂದು ಗತಿ ಕಾಣಿಸಲು ಪದೆ ಪದೆ ಸಾಬೂನು ಅಥವಾ ಸ್ಯಾನಿಟೈಸರ್ ಬಳಿಸಿ ಕೈ ತೊಳೆದುಕೊಳ್ಳಬೇಕೆಂದು ವೀರಭದ್ರೇಶ್ವರ ಏಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ ಬೆಳಕೋಟೆ ತಿಳಿಸಿದರು.

ತಾಲೂಕಿನ ಹೊಕ್ರಾಣಾ(ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೀರಭದ್ರೇಶ್ವರ ಏಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್, ನೆಹರು ಯುವ ಕೇಂದ್ರ ಹಾಗೂ ರೈಜಿಂಗ್ ಹ್ಯಾಂಡ್ ಯುತ್ ಸೂಸೈಟಿಗಳ ಸಂಯುಕ್ತಾಶ್ರಯದಲ್ಲಿ ‘ಮಹಾಮಾರಿ ಕೊರೊನಾ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳು’ ಕುರಿತು ಜಾಗೃತಿ ಕಾರ್ಯಕ್ರಮ ಮತ್ತು ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿ, ಕೋವಿಡ್ ಕುರಿತಾದ ಜಾಗೃತಿ ಭಿತ್ತಿ ಪತ್ರ ನೀಡಿ ಮಾತನಾಡಿದರು.

ಮಹಾಮಾರಿ ಕೊರೊನಾ ಈಗಾಗಲೇ ಜಗತ್ತಿನ ಹಲವಾರು ಜನರ ಪ್ರಾಣ ಹಿಂಡಿ ಹಿಪ್ಪೆಯಾಗಿಸಿದ್ದು, ಮತ್ತೆ ಎಲ್ಲೆಡೆ ಎರಡನೇ ಹಂತದ ಕೋವಿಡ್ ಆರಂಭವಾಗಿದೆ. ಇದು ಒಂದೆಡೆಯಾದರೆ ಮತ್ತೆ ಇಂಗ್ಲೆಂಡ್ ಸೇರಿದಂತೆ ಅನೇಕ ಐರೋಪ್ಯ ಹಾಗೂ ಎಷ್ಯಾ ಖಂಡಗಳ ಹಲಬಾರು ದೇಶಗಳಲ್ಲಿ ರೂಪಾಂತರ ಕೊರೊನಾ ಶುರುವಾಗಿ ಜನರಲ್ಲಿ ಮತ್ತೆ ಹೆಚ್ಚಿನ ಭಯ ಆವರಿಸಿದೆ. ಇದು ಭಾರತಿಯರ ಮೈಗೂ ಹೊಕ್ಕು ಹೈರಾಣಾಗಿಸುತ್ತಿದೆ. ಆದರೂ ಯುವಜನತೆ ಇದನ್ನು ಲೆಕ್ಕಿಸದೇ ಮೈ ಮರೆಯುತ್ತಿದ್ದು, ರೂಪಾಂತರಿ ಕೊರೊನಾ ಯುವಜನರಿಗೆ ಮಾರಕವಾಗಲಿದ್ದು ಇದನ್ನು ಮನಗಂಡು ಮುಖಗವನ ಹಾಗೂ ಸ್ಯಾನಿಟೈಸರ್ ಬಳಿಕೆ ಕಡ್ಡಾಯಗೊಳಿಸಬೇಕೆಂದು ಕಿವಿ ಮಾತು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಶಿಕ್ಷಣಾಧಿಕಾರಿ ಸಂಗಪ್ಪ ಕಾಂಬಳೆ ಮುಖ್ಯ ಅತಿಥಿಗಳಾಗಿ ಮಾತನಾಡಿ, ದೇಶದಲ್ಲಿ ಕೋವಿಡ್-19 ಸಂಖ್ಯೆ ಕಡಿಮೆಯಾದರೂ ಅದರ ಆತಂಕ ಮಾತ್ರ ಹೆಚ್ಚುತ್ತಲ್ಲೆ ಇದೆ. ಸರ್ಕಾರದ ಅನಲಾಕ್-5 ರ ನಿಯಮ ಪಾಲನೆ ಮಾಡದಿರುವುದೇ ಆತಂಕ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದ್ದು, ಇದರ ಗಂಭಿರತೆ ಅರಿತು ಯುವಜನರು ಜಾಗೃತರಾಗಿ ಕೋವಿಡ್ ವಾರಿಯರ್‍ಗಳಾಗಿ ಇತರರಿಗೆ ಜಾಗೃತಿ ಮೂಡಿಸುವ ಹಾಗೂ ಸರ್ಕಾರದ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಲು ಮುಂದೆ ಬರುವಂತೆ ತಿಳಿಸಿದರು.

ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಮಯೂರಕುಮಾರವ ಗೋರ್ಮೆ ಮಾತನಾಡಿ, ಮಾರ್ಚ್-2020ರಲ್ಲಿ ಭಾರತಕ್ಕೆ ತಬ್ಲಿಗಿಗಳ ಮೂಲಕ ಎಂಟ್ರಿ ಕೊಟ್ಟ ಈ ಕಿಲ್ಲರ್ ಕೋವಿಡ್-19 ತನ್ನ ರೌದ್ರ ನರ್ತನ ಮಾಡಿ ಸಾವಿರಾರು ಜನರ ಪ್ರಾಣ ತೆಗೆದಿದೆ. ಅದೆಷ್ಟೋ ಜನಗಳು ಅಸ್ಪ್ರಶ್ಯರಂತೆ ದೂರ ಉಳಿಯುವಂತೆ ಮಾಡಿತ್ತು. ಇದರಿಂದ ಮನುಷ್ಯನ ಮಾನಸಿಕ ಸ್ಥಿತಿ ದುರ್ಬಲಗೊಂಡು ಎಷ್ಟೋ ಜನರು ಭಯದಿಂದಲೇ ತಮ್ಮ ಪ್ರಾಣ ಕಳೆದುಕೊಂಡಿರುವರು. ಇಂಥ ಭೀಕರತೆ ಅರಿತು ನೆಹರು ಯುವ ಕೇಂದ್ರ ಜಿಲ್ಲೆಯ ಯುವ ಸಂಘ, ಸಂಸ್ಥೆಗಳ ಮೂಲಕ ಅನೇಕ ಕೋವಿಡ್ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ವಿವರಿಸಿದರು.

ಸ್ಥಳಿಯ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಯೋಹಾನ್ ಲಿಂಗಪ್ಪ, ಮಾಜಿ ಸೈನಿಕ ಸಂಗಪ್ಪ.ವಿ.ಗೊಂಡಾ, ಮುಖ್ಯ ಗುರು ರವಿಂದ್ರನಾಥ ಬಶೆಟ್ಟಿ, ಕಾಶಿನಾಥ ಕಾಡಿದೊಡ್ಡೆ ವೇದಿಕೆ ಮೇಲಿದ್ದರು.

ಶಾಲೆಯ ಶಿಕ್ಷಕಿ ಶೈಲಜಾ ಸ್ವಾಗತಿಸಿ, ದೈಹಿಕ ಶಿಕ್ಷಕ ಅನಿಲಕುಮಾರ ಕಾರ್ಯಕ್ರಮ ನಿರೂಪಿಸಿ, ಸಹ ಶಿಕ್ಷಕ ರಾಜಕುಮಾರ ವಂದಿಸಿದರು.

ಈ ಸಂದರ್ಭದಲ್ಲಿ ಶಾಲೆಗೆ ಆಗಮಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು.