ಕೊರೊನಾ : ಕೆನ್ನೆಗೆ ಏಟು – ದಂಡ, ಮಾಸ್ಕ್ ಜಾಗೃತಿ ಮಾಹಿತಿ

ಕೋವಿಡ್ ನಿಯಂತ್ರಣಕ್ಕೆ ಪೊಲೀಸ್ ಕಠಿಣ ಕ್ರಮ – ಜನ ಕಕ್ಕಾಬಿಕ್ಕಿ
ರಾಯಚೂರು.ಏ.05- ದೇಶ ಮತ್ತು ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಮಾಸ್ಕ್ ಕಡ್ಡಾಯ ಜಾಗೃತಿ ಈಗ ತೀವ್ರ ಸ್ವರೂಪಕ್ಕೆ ತಿರುಗಿ, ಪೊಲೀಸರು ಮಾಸ್ಕ್ ಧರಿಸದವರ ಕೆನ್ನೆಗೆ ಬಾರಿಸಿ, ದಂಡ ವಿಧಿಸಿ, ಮಾಸ್ಕ್ ಜಾಗೃತಿ ಮೂಡಿಸಲಾಯಿತು.
ಕಳೆದ ನಾಲ್ಕೈದು ದಿನಗಳಿಂದ ಮಾಸ್ಕ್ ಬಗ್ಗೆ ನಿಗಾವಹಿಸಲು ಪೊಲೀಸರಿಗೆ ಸೂಚಿಸಲಾಗಿತ್ತು. ಆರಂಭದಲ್ಲಿ ಕೇವಲ ಮಾಸ್ಕ್ ಧರಿಸುವಂತೆ ಮಾಹಿತಿ ನೀಡಿದ ಪೊಲೀಸ್ ಇಂದು ನಗರದ ಕೆಲವೆಡೆ ಕೆನ್ನೆಗೆ ಬಾರಿಸಿದಂತಹ ಘಟನೆಗಳು ನಡೆಯಿತು ರಣ ಬಿಸಿಲಿನಲ್ಲಿ ಮಾಸ್ಕ್ ಪರಿಶೀಲನೆಗೆ ನಿಂತ ಪೊಲೀಸರ ಕಣ್ಣು ತಪ್ಪಿಸಿ, ಯರ್ರಾಬಿರ್ರಿ ವಾಹನ ಓಡಿಸುವವರನ್ನು ತಡೆದು ಕೆನ್ನೆಗೆ ಬಿಸಿ ಮುಟ್ಟಿಸಿ, ಕೊರೊನಾ ಜಾಗೃತಿ ಮೂಡಿಸಲಾಯಿತು. ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಇಂದು ಮಾಸ್ಕ್ ಜಾಗೃತಿ ಆಂದೋಲನಾ ನಡೆಸಲಾಯಿತು.
ಅನೇಕರು ಮಾಸ್ಕ್ ರಹಿತವಾಗಿ ಸಂಚರಿಸುತ್ತಿದ್ದರು. ಇವರನ್ನು ತಡೆದು, ಅವರಿಗೆ ಮಾಸ್ಕ್ ಧರಿಸುವಂತೆ ದಂಡ ವಿಧಿಸಿದರು. ಇನ್ನಿತರರು ಅಲ್ಲಿಂದ ಓಡುವ ಪ್ರಸಂಗದಲ್ಲಿ ಅವರನ್ನು ಬಲವಂತವಾಗಿ ತಡೆದು ಕೆನ್ನೆಗೆ ಬಾರಿಸಿದ ಘಟನೆಯೂ ನಡೆಯಿತು. ಮಾಸ್ಕ್ ಧರಿಸಲು ಹಣವೇ ಇಲ್ಲದ ವ್ಯಕ್ತಿಗಳಿಗೆ ಪೊಲೀಸರಿಗೆ ಖುದ್ಧಾಗಿ ಮಾಸ್ಕ್ ನೀಡುವ ಮೂಲಕ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.
ಮುಂಜಾನೆಯಿಂದ ಸುಮಾರು 100 ಕ್ಕೂ ಅಧಿಕ ಜನರಿಗೆ ದಂಡ ವಿಧಿಸಿ ಮಾಸ್ಕ್ ಜಾಗೃತಿ ಮೂಡಿಸಲಾಯಿತು. ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಮಾಸ್ಕ್ ಕಡ್ಡಾಯ ಮಾಹಿತಿ ನೀಡಲಾಯಿತು. ಪಶ್ಚಿಮ ಪೊಲೀಸ್ ಠಾಣೆ ಮತ್ತು ಸಂಚಾರಿ ಪೊಲೀಸ್ ಠಾಣೆಯ ಸಿಪಿಐ ನ್ಯಾಮಗೌಡ, ಪಿಎಸ್ಐ ಮಂಜುನಾಥ, ಎ‌ಎಸ್ಐ ಗುರು ಸಂಗಪ್ಪ ಇವರ ನೇತೃತ್ವದಲ್ಲಿ ಜಾಗೃತಿ ಮೂಡಿಸಲಾಯಿತು.