ಕೊರೊನಾ ಕಾಲದಲ್ಲಿ ವೈದ್ಯರ ಸೇವೆಗೆ ಶಾಸಕರ ಮೆಚ್ಚುಗೆ

ಮಧುಗಿರಿ, ಜು. ೧೫- ಕೊರೊನಾ ೨ನೇ ಅಲೆಗೆ ಇಡೀ ವಿಶ್ವವೇ ತತ್ತರಿಸಿದ್ದು, ಇಂತಹ ಸಂದಿಗ್ಧ ಸಂದರ್ಭದಲ್ಲಿ ಕೊರೊನಾ ವಿರುದ್ದದ ಹೋರಾಟದಲ್ಲಿ ವೈದ್ಯರುಗಳು ಅತ್ಯುತ್ತಮ ಸೇವೆ ನೀಡಿದ್ದರು ಎಂದು ಶಾಸಕ ಎಂ.ವಿ. ವೀರಭದ್ರಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾಸಕರ ನಿಧಿಯಿಂದ ನೂತನ ಆಂಬ್ಯುಲೆನ್ಸ್ ಹಸ್ತಾಂತರ ಹಾಗೂ ದಾನಿಗಳ ನೆರವಿನಿಂದ ನೂತನ ಆಮ್ಲಜನಕ ಘಟಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಆಕ್ಸಿಜನ್ ಅವಶ್ಯಕತೆಯು ಎಷ್ಟರ ಮಟ್ಟಿಗೆ ಅಗತ್ಯ ಎಂಬುದನ್ನು ಎಲ್ಲರೂ ಮನಗಂಡಿದ್ದು, ಈ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಿಂದ ಬಹಳಷ್ಟು ಜನ ತೊಂದರೆ ಅನುಭವಿಸಿದ್ದರು. ಆಕ್ಸಿಜನ್ ಕೊರತೆ ನೀಗಿಸಲು ಇಂದು ಸಾರ್ವಜನಿಕ ಆಸ್ಪತ್ರೆ ಸದೃಢವಾಗಿದ್ದು, ದಾನಿಗಳಾದ ಎಂ.ಎಲ್. ಪ್ರಕಾಶ್ ಬಾಬು ಮತ್ತು ಎಂ.ಎಲ್. ಆದಿನಾರಾಯಣ್, ಪುರಸಭೆ ಸದಸ್ಯ ಎಂ.ಎಸ್ ಚಂದ್ರಶೇಖರ್, ವಿಪ್ರೋ ಮತ್ತು ಕಿಮ್‌ಕೆನ್ ಇವರ ನೆರವಿನಿಂದ ನೂತನ ಆಮ್ಲಜನಕ ಘಟಕವನ್ನು ಆರಂಭಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕೊರೊನಾ ೨ನೇ ಅಲೆಯ ನಂತರ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಮಹತ್ತರ ಬದಲಾವಣೆಗಳಾಗಿದ್ದು, ಇಂದು ಅತ್ಯುತ್ತಮ ವೈದ್ಯರು ಮತ್ತು ಸಿಬ್ಬಂದಿಗಳು ಸೇವೆಯಲ್ಲಿ ನಿರತರಾಗಿದ್ದಾರೆ ಎಂದರು.
ಸಾರ್ವಜನಿಕ ಆಸ್ಪತ್ರೆಗೆ ಆಂಬ್ಯುಲೆನ್ಸ್ ಸೇವೆಯ ಅಗತ್ಯತೆಯನ್ನು ಮನಗಂಡು ಇಂದು ವಿತರಣೆ ಮಾಡಲಾಗುತ್ತಿದ್ದು, ಆಂಬುಲೆನ್ಸ್‌ಗಾಗಿ ೬ ತಿಂಗಳ ಹಿಂದೆಯೇ ೧೮ ಲಕ್ಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದು, ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ಸೇವೆ ಸದುಪಯೋಗವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಡಿ.ಹೆಚ್.ಓ ಡಾ. ಮಂಜುನಾಥ್, ಟಿ.ಹೆಚ್.ಓ ಡಾ. ರಮೇಶ್‌ಬಾಬು, ಆಸ್ಪತ್ರೆ ವೈದ್ಯಾಧಿಕಾರಿ ಡಾ. ರತ್ನಾವತಿ, ವೈದ್ಯರಾದ ಡಾ. ಗಂಗಾಧರ್, ಡಾ. ಶ್ರೀರಾಮಯ್ಯ, ಡಾ. ಶ್ರೀನಿವಾಸಮೂರ್ತಿ, ಡಾ. ರಮೇಶ್, ಡಾ. ಪುರಷೋತ್ತಮ್, ಡಾ. ತನುಜಾ, ಡಾ. ಇಂದಿರಾ, ಪುರಸಭಾಧ್ಯಕ್ಷ ತಿಮ್ಮರಾಯಪ್ಪ, ಸದಸ್ಯರಾದ ಎಂ.ಆರ್. ಜಗನ್ನಾಥ್, ನಾರಾಯಣ್, ನರಸಿಂಹಮೂರ್ತಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಹೆಚ್. ವೆಂಕಟೇಶಯ್ಯ, ಮುಖಂಡ ತುಂಗೋಟಿ ರಾಮಣ್ಣ ಮತ್ತು ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಬೌದ್ಧ ಪೌರ್ಣಮಿ ಅಂಗವಾಗಿ ಪಟ್ಟಣದ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜೆಯಲ್ಲಿ ಶಾಸಕ ಎಂ.ವಿ. ವೀರಭದ್ರಯ್ಯ ಭಾಗವಹಿಸಿದ್ದರು. ಪುರಸಭಾ ಸದಸ್ಯ ಎಂ.ಆರ್. ಜಗನ್ನಾಥ್, ನರಸಿಂಹಮೂರ್ತಿ, ಮುಖಂಡರಾದ ತುಂಗೋಟಿ ರಾಮಣ್ಣ, ಆರ್.ಎಲ್.ಎಸ್ ರಮೇಶ್, ಬದರಿನಾಥ್, ಎಂ.ಎಲ್. ಪ್ರಕಾಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು.