ಕೊರೊನಾ ಕರ್ಫ್ಯೂ ನಗರದಲ್ಲಿ ಕಠಿಣ ಕ್ರಮ

ಬೆಂಗಳೂರು,ಏ.೧೧- ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ನಗರದಲ್ಲಿ ನಿನ್ನೆ ರಾತ್ರಿ ಕರ್ಫ್ಯೂ ಜಾರಿಯಾಗಿದ್ದು ಮೇಲುಸೇತುವೆಗಳನ್ನು ಬಂದ್ ಮಾಡಿದ್ದ ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಗಸ್ತು ತಿರುಗಿ ಅನಗತ್ಯವಾಗಿ ಸಂಚರಿಸುವವರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.
ಕರ್ಫ್ಯೂ ಜಾರಿಯಲ್ಲಿರುವ ಇಂದು ಬೆಳಿಗ್ಗೆ ೫.೩೦ರ ವರೆಗೆ ವಾಹನಗಳು ಸಂಚರಿಸದಂತೆ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿದ್ದು ಕಂಡುಬಂತು.
ರಾತ್ರಿ ಕರ್ಫ್ಯೂ ಜಾರಿ ಬಗ್ಗೆ ಮಾಹಿತಿ ಇದ್ದರೂ ಹಲವರು ರಾತ್ರಿ ೧೦ ಗಂಟೆ ನಂತರವೂ ನಗರದಲ್ಲಿ ಸಂಚರಿಸುತ್ತಿದ್ದರು. ಅವರನ್ನು ತಡೆದಿದ್ದ ಪೊಲೀಸರು, ಎಚ್ಚರಿಕೆ ನೀಡಿ ಕಳುಹಿಸಿದರು.
ಮಾಸ್ಕ್ ಧರಿಸದ ಕೆಲವರಿಗೆ ದಂಡವನ್ನೂ ವಿಧಿಸಿದರು. ಏಪ್ರಿಲ್ ೨೦ರವರೆಗೆ ರಾತ್ರಿ ೧೦ ಗಂಟೆಯಿಂದ ಮರುದಿನ ನಸುಕಿನ ೫ ಗಂಟೆಯವರೆಗೂ ಕರ್ಫ್ಯೂ ಜಾರಿಯಲ್ಲಿರಲಿದ್ದು ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಿದ್ದತೆಗಳನ್ನು ಪೊಲೀಸರು ಕೈಗೊಂಡಿದ್ದಾರೆ.
ಹೆಚ್ಚು ಜನ ಸೇರುವ ಮೆಜೆಸ್ಟಿಕ್, ತುಮಕೂರು ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಬಳ್ಳಾರಿ ರಸ್ತೆಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟೀಟ್, ಇಂದಿರಾನಗರ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿದ್ದ ಹೋಟೆಲ್‌ಗಳು, ಪಬ್, ಬಾರ್, ರೆಸ್ಟೋರೆಂಟ್‌ಗಳು ರಾತ್ರಿ ೧೦ ಗಂಟೆಗೆ ಬಂದ್ ಆಗಿದ್ದವು.
ಪೊಲೀಸರು ಈ ಪ್ರದೇಶಗಳಲ್ಲಿ ವಿಶೇಷವಾಗಿ ಪರಿಶೀಲನೆ ನಡೆಸಿದರು. ಅನಗತ್ಯವಾಗಿ ವಾಹನ ನಿಲ್ಲಿಸಿಕೊಂಡಿದ್ದ ವಾಹನ ಚಾಲಕರನ್ನು ಸ್ಥಳದಿಂದ ಕಳುಹಿಸಿದರು.
ಚಿಕ್ಕಪೇಟೆ, ಬಳೇಪೇಟೆ, ಉಪ್ಪಾರಪೇಟೆ, ಕಾಟನ್‌ಪೇಟೆ, ಕೆ.ಆರ್.ಮಾರುಕಟ್ಟೆ, ಎಸ್.ಪಿ. ರಸ್ತೆ ಹಾಗೂ ಸುತ್ತಮುತ್ತಲ ಸ್ಥಳಗಳಲ್ಲೂ ಪೊಲೀಸರು ವಿಶೇಷ ನಿಗಾ ವಹಿಸಿದ್ದರು. ಕಾರ್ಪೋರೇಷನ್ ವೃತ್ತ, ಹೆಬ್ಬಾಳ, ಇಂದಿರಾನಗರ, ಪಶ್ಚಿಮ ಕಾರ್ಡ್ ರಸ್ತೆ, ಮಾಗಡಿ ರಸ್ತೆ ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ನಿಲ್ಲಿಸಿ ಪೊಲೀಸರು ವಾಹನಗಳ ಪರಿಶೀಲನೆ ನಡೆಸಿದರು.
ತುರ್ತು ಸೇವೆ ಸಲ್ಲಿಸುವ ಹಾಗೂ ಕಚೇರಿಗೆ ಹೊರಟಿದ್ದ ವ್ಯಕ್ತಿಗಳ ಗುರುತಿನ ಚೀಟಿ ಪರಿಶೀಲಿಸಿ ಬಿಟ್ಟು ಕಳುಹಿಸಿದರು.
ಸಂಚಾರ ಬಂದ್:
ಮೆಜೆಸ್ಟಿಕ್ ಬಳಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ , ಮೈಸೂರು ರಸ್ತೆಯ ಬಿಜಿಎಸ್, ಹೆಬ್ಬಾಳ ಮೇಲ್ಸೇತುವೆ, ರಿಚ್ಮಂಡ್ ವೃತ್ತದ ಮೇಲ್ಸೇತುವೆ ಸೇರಿ ೧೭ ಮೇಲ್ಸೇತುವೆಗಳ ಸಂಚಾರ ನಿಷೇಧ ಮಾಡಲಾಗಿತ್ತು.
ತುಮಕೂರು ರಸ್ತೆಯ ಹಾಗೂ ಸುತ್ತಮುತ್ತಲ ಪ್ರಮುಖ ಮೇಲ್ಸೇತುವೆಗಳಲ್ಲಿ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿತ್ತು.
ಮೇಲ್ಸೇತುವೆ ಆರಂಭವಾಗುವ ಹಾಗೂ ಅಂತ್ಯಗೊಳ್ಳುವ ಸ್ಥಳಗಳಲ್ಲಿ ರಸ್ತೆಗೆ ಅಡ್ಡವಾಗಿ ಬ್ಯಾರಿಕೇಡ್‌ಗಳನ್ನು ನಿಲ್ಲಿಸಲಾಗಿತ್ತು. ಸಂಚಾರ ಪೊಲೀಸರು, ವಾಹನಗಳು ಹೋಗದಂತೆ ತಡೆದರು. ಕೆಲವರ ವಾಹನಗಳಲ್ಲಿ ಜಪ್ತಿ ಸಹ ಮಾಡಿದರು.
ಎರಡು ಬದಿಯ ಸಂಚಾರಕ್ಕೆ ಅವಕಾಶವಿದ್ದ ರಸ್ತೆಗಳಲ್ಲಿ, ಒಂದು ಬದಿಯಲ್ಲಿ ಮಾತ್ರ ತುರ್ತು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.