ಕೊರೊನಾ ಓಡಿಸಿ, ಹಳ್ಳಿಗಳು ಉಳಿಸಿ: ಜಾಗೃತಿ ಅಭಿಯಾನಕ್ಕೆ ಡಿಸಿ ಚಾಲನೆ

ಚಿತ್ರದುರ್ಗ,ಮೇ.21: ಕೋವಿಡ್-19ರ ಸಾಂಕ್ರಾಮಿಕ ರೋಗದ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಈ ರೋಗ ಹಳ್ಳಿಗಳಿಗೂ ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ವತಿಯಿಂದ ಹಮ್ಮಿಕೊಂಡಿರುವ ಕೊರೊನಾ ಓಡಿಸಿ, ಹಳ್ಳಿ ಉಳಿಸಿ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಚಾಲನೆ ನೀಡಿದರು.
ಕೆಮ್ಮು, ಶೀತ, ಜ್ವರ ಕಾಣಿಸಿದರೆ ಭಯ ಪಡದೇ ಕೋವಿಡ್ ಟೆಸ್ಟ್ ಮಾಡಿಸುವುದು, ಕೊರೊನಾ ಲಕ್ಷಣಗಳಿದ್ದಲ್ಲಿ 14 ದಿನ ಇತರರಿಂದ ದೂರ ಇರುವುದು, ಕೊರೊನಾ ಲಕ್ಷಣ ಇದ್ದವರಿಂದ ಇತರರು ಕೂಡ ದೂರ ಇರುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಕನಿಷ್ಟ ಆರು ಅಡಿ ಅಂತರ ಕಾಪಾಡುವುದು, ಪೇಟೆಗೆ ಹೋಗುವುದನ್ನು ಸಾಧ್ಯವಾದಷ್ಟು ನಿಲ್ಲಿಸುವುದು, ವಲಸೆ ಬಂದವರಿಂದ ದೂರ ಇರುವುದು, ಪಂಚಾಯಿತಿ, ಆರೋಗ್ಯ, ಆಶಾ ಕಾರ್ಯಕರ್ತರ ಸೂಚನೆಗಳಿಗೆ ಸ್ಪಂದಿಸುವುದು, ಗುಂಪು ಗುಂಪಾಗಿ ಸಂಚರಿಸದೇ ಇರುವುದು ಮತ್ತು ಕುಳಿತು ಕೊಳ್ಳದೇ ಇರುವುದು, ಮದುವೆ, ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದೂಡುವುದು, ಗದ್ದೆ, ಪಾರ್ಮ್ ಹೌಸ್‍ಗಳಲ್ಲಿ ಪಾರ್ಟಿಗಳನ್ನು ಮಾಡದೇ ಇರುವುದು, ಕಾಯಿಲೆ ಬಿದ್ದಾಗ ಮಂತ್ರ, ಯಂತ್ರ, ಬೂದಿ ಹಚ್ಚುವಂತಹ ಮೂಢನಂಬಿಕೆಗಳನ್ನು ದಯವಿಟ್ಟು ವೈದ್ಯರ ಬಳಿ ಹೋಗುವುದು. ಕಡ್ಡಾಯವಾಗಿ ಬಿಸಿನೀರು, ಬಿಸಿ ಆಹಾರವನ್ನು ಸೇವಿಸುವುದು, ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಹರಿಸುವುದು, ಯಾವುದೇ ಭ್ರಮೆ, ಭಯ, ಆತಂಕಕ್ಕೆ ಒಳಗಾಗದೇ ವ್ಯಾಕ್ಸಿನ್ ಹಾಕಿಸಿಕೊಳ್ಳುವುದು, ಲಸಿಕೆ ಹಾಕುವ ಮೊದಲು ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದು, ವ್ಯಾಟ್ಸಾಪ್, ಫೇಸ್‍ಬುಕ್‍ಗಳಲ್ಲಿನ ಸುಳ್ಳು ಸುದ್ದಿಯನ್ನು ನಂಬದೇ ಇತರರಿಗೆ ಕಳುಹಿಸದೇ ಇರುವುದು, ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಹಳ್ಳಿಯ ಜನರಿಗೆ ಮನವಿ ಮಾಡಲಾಗಿದೆ.
ಜಾಗೃತಿ ಅಭಿಯಾನದಲ್ಲಿ ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಶಾಖೆಯ ಕಾರ್ಯದರ್ಶಿ ಮಜುರುಲ್ಲಾ, ಖಜಾಂಚಿ ಅರುಣ್ ಕುಮಾರ್ ಇದ್ದರು.
ಫೋಟೋ ವಿವರ: ಚಿತ್ರದುರ್ಗದಲ್ಲಿ ಗುರುವಾರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಕೊರೊನಾ ಓಡಿಸಿ, ಹಳ್ಳಿಗಳು ಉಳಿಸಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು.