ಕೊರೊನಾ ಏರುಮುಖ ಹೆಚ್ಚಿದ ಆತಂಕ

ನವದೆಹಲಿ, ಅ. ೨೯- ದೇಶದಲ್ಲಿ ಮತ್ತೆ ಕೊರೊನಾ ಮಹಾಮಾರಿಯ ಉಪಟಳ ಹೆಚ್ಚಾಗುವ ನಿಟ್ಟಿನಲ್ಲಿ ಸಾಗಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸುಮಾರು ಐವತ್ತು ಸಾವಿರ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ ೮೦ ಲಕ್ಷ ದಾಟಿದೆ. ಸೋಂಕಿತರ ಸಂಖ್ಯೆ ಏರುಮುಖದಲ್ಲಿ ಸಾಗುತ್ತಿರುವುದು ಜನರಲ್ಲಿನ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಬೆಳಿಗ್ಗೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೪೯ ಸಾವಿರದ ೮೮೧ ಸೋಂಕು ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ. ಇದರೊಂದಿಗೆ ದೇಶದಲ್ಲಿ ದಾಖಲಾಗಿರುವ ಒಟ್ಟಾರೆ ಸೋಂಕಿತರ ಸಂಖ್ಯೆ ೮೦ ಲಕ್ಷದ ೪೦,೨೦೩ಕ್ಕೆ ಏರಿಕೆಯಾಗಿದೆ.
ಕಳೆದ ಎರಡು ದಿನಗಳಿಂದ ಕಡಿಮೆ ಪ್ರಮಾಣದಲ್ಲಿದ್ದ ಸೋಂಕಿತರ ಸಂಖ್ಯೆ ದಿಢೀರನೆ ಏರಿಕೆ ಕಂಡಿರುವುದು ವೈದ್ಯಕೀಯ ಸಮುದಾಯಕ್ಕೂ ಸವಾಲಾಗಿ ಪರಿಣಮಿಸಿದೆ. ಎರಡು ದಿನಗಳ ಹಿಂದೆ ೩೬, ೪೭೦ ಇದ್ದದ್ದು ಇದೀಗ ೪೯ ಸಾವಿರಕ್ಕೂ ಹೆಚ್ಚಾಗಿರುವುದು ಮಹಾಮಾರಿಯ ಅಬ್ಬರ ಇನ್ನೂ ಕಡಿಮೆಯಾದಂತಿಲ್ಲ ಎಂಬುದನ್ನು ಸೂಚಿಸುತ್ತಿದೆ.

ಈ ನಡುವೆ ಗುಣಮುಖರಾದ ಸಂಖ್ಯೆಯು ಏರಿಕೆಯಾಗುತ್ತಿದ್ದು ನಿನ್ನೆ ೫೬,೪೮೦ ಸೋಂಕಿತರು ಚೇತರಿಸಿಕೊಂಡು ಆಸ್ಪತ್ರೆಗಳಿದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಇದುವರೆಗೂ ಚೇತರಿಸಿಕೊಂಡ ವರ ಸಂಖ್ಯೆ ೭೩,೧೫,೯೮೯ಕ್ಕೆ ಏರಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇಕಡ ೯೦ . ೮೫ ರಷ್ಟಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ.. ನಿನ್ನೆ ಸಕ್ರಿಯ ಪ್ರಕರಣಗಳ ವಿಚಾರದಲ್ಲಿ ೭ ಸಾವಿರದ ೧೧೬ ಪ್ರಕರಣಗಳು ಕಡಿಮೆಯಾಗಿದ್ದು ಒಟ್ಟಾರೆ ದೇಶದಲ್ಲಿ ದಾಖಲಾಗಿರುವ ದಾಖಲಾಗಿರುವ ಸಕ್ರಿಯ ಸಕ್ರಿಯ ಪ್ರಕರಣಗಳ ಸಂಖ್ಯೆ ೬೦,೦೩,೬೮೭ಕ್ಕೆ ತಲುಪಿದೆ. ಈ ಪ್ರಮಾಣ ಶೇಕಡ ೭.೬೪ ಇದೆ ಎಂದು ಸಚಿವಾಲಯ ತಿಳಿಸಿದೆ.

ಈ ನಡುವೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೫೧೭ ಸೋಂಕಿತರು ಸಾವನ್ನಪ್ಪದ್ದು ಇದುವರೆಗೂ ಮೃತಪಟ್ಟವರ ಸಂಖ್ಯೆ ೧,೨೦,೫೨೭ಕ್ಕೆ ತಲುಪಿದೆ. ದೇಶದಲ್ಲಿ ಸಾವಿನ ಪ್ರಮಾಣ ಶೇಕಡ ೧.೫೦ ರ ಷ್ಟಿದೆ ಎಂಬುದು ದಾಖಲೆಗಳಿಂದ ತಿಳಿದುಬಂದಿದೆ.

ದೆಹಲಿಯಲ್ಲಿ ಇತ್ತೀಚಿನ ಕೆಲವು ದಿನಗಳಿಂದ ಸೋಂಕಿತರ ಸಂಖ್ಯೆ ಏರುಮುಖದಲ್ಲಿ ಸಾಗುತ್ತಿದೆ. ನಿನ್ನೆ ಒಂದೇ ದಿನ ಐದು ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ ೩ಲಕ್ಷ ದಾಟಿದೆ.

ಆರೋಗ್ಯ ಸಚಿವಾಲಯದ ಮೂಲಗಳ ಪ್ರಕಾರ ಕಳೆದ ಆರು ವಾರಗಳಲ್ಲಿ ಈಚೆಗೆ ದೇಶದಲ್ಲಿ ಸೋಂಕಿಗೆ ಬಲಿಯಾಗುತ್ತಿರುವ ಸಂಖ್ಯೆ ಕಡಿಮೆಯಾಗುತ್ತಿದೆ ಪ್ರತಿನಿತ್ಯ ಸರಾಸರಿ ೬೦೦ಕ್ಕೂ ಹೆಚ್ಚು ಸಾವು ಪ್ರಕರಣಗಳು ವರದಿಯಾಗುತ್ತಿವೆ. ಅಕ್ಟೋಬರ್ ೨೧ ರಿಂದ ೨೭ರ ವರೆಗಿನ ಅವಧಿಯಲ್ಲಿ ಅವಧಿಯಲ್ಲಿ ಸಾವಿನ ಪ್ರಮಾಣ ಇಳಿಮುಖವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಈ ನಡುವೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ವತಿಯಿಂದ ೧೦ಕೋಟಿಗೂ ಅಧಿಕ ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದೆ. ನಿನ್ನೆ ಒಂದೇ ದಿನ ೧೦ ಲಕ್ಷದ ೭೫ ಸಾವಿರಕ್ಕೂ ಹೆಚ್ಚು ಮಾದರಿ ಪರೀಕ್ಷೆಗಳನ್ನು ನಡೆಸುವ ಮೂಲಕ ದಾಖಲೆ ನಿರ್ಮಿಸಿದೆ.