ಕೊರೊನಾ ಎರಡನೇ ಅಲೆ:ಬಾಲಿವುಡ್ ಇಂಡಸ್ಟ್ರಿಗೆ ಮತ್ತೊಮ್ಮೆ ಸಂಕಷ್ಟ,

’ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯಿಸ್ ’(ಎಫ್ ಡಬ್ಲ್ಯೂ ಐ ಸಿ ಇ) ಪದಾಧಿಕಾರಿಗಳ ಅಳಲು ; ೨.೪೦ ಲಕ್ಷ ಕೋಟಿ ವಾರ್ಷಿಕ ಟರ್ನ್ ಓವರ್ ನ ಬಾಲಿವುಡ್ ಮತ್ತೊಮ್ಮೆ ಸ್ತಬ್ದ

ದೇಶದಲ್ಲಿ ಕೊರೊನಾ ಎರಡನೇ ಅಲೆಯು ಅಪಾಯಕಾರಿ ಹಂತಕ್ಕೆ ಬಂದು ತಲುಪುತ್ತಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ ವಿಜ್ರಂಭಿಸುತ್ತಲೇ ಇದೆ. ೨೦೨೦ ನ್ನು ನೆನಪಿಸುವಂತಹ ಪರೋಕ್ಷ ಲಾಕ್ಡೌನ್ ದೃಶ್ಯದ ಕಾರಣ ಮುಂಬೈಯಲ್ಲಿ ಬಾಲಿವುಡ್ ಫಿಲ್ಮ್ ಗಳ ಶೂಟಿಂಗ್ ಮೇ ತಿಂಗಳ ಮೊದಲ ವಾರದ ತನಕ ಸದ್ಯ ನಿಲ್ಲಿಸಲಾಗಿದೆ. ಮಹಾರಾಷ್ಟ್ರದಲ್ಲಿ ಎರಡು ವಾರಗಳ ಲಾಕ್ ಡೌನ್ ಕಾರಣ ಫಿಲ್ಮ್ ಮತ್ತು ಟಿವಿ ಸೀರಿಯಲ್ ಗಳ ಶೂಟಿಂಗ್ ಗಳೆಲ್ಲ ನಿಂತುಬಿಟ್ಟಿವೆ.


ಹಲವು ಮೇಕರ್ಸ್ ಗಳು ಮುಂಬಯಿ ಕತೆಯೇ ಬೇಡ ಎಂದು ಗೋವಾ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶಗಳಲ್ಲಿ ಶೂಟಿಂಗ್ ಆರಂಭಿಸಿದ್ದರು.ಆದರೆ ಅಲ್ಲೂ ಕೆಲವೆಡೆ ಕೊರೊನಾ ಅಲೆ ಕಾಣಿಸಿದ್ದು, ಬಾಲಿವುಡ್ ನ ಅನೇಕರಿಗೆ ಕೊರೊನಾ ಪಾಸಿಟಿವ್ ವರದಿಯ ನಂತರ ಹೆದರಿದ ತಂಡಗಳು ಅಲ್ಲಲ್ಲಿ ಶೂಟಿಂಗ್ ಗಳನ್ನು ಸ್ಥಗಿತ ಗೊಳಿಸುತ್ತಿವೆ.


ಈ ಎಲ್ಲ ದೃಶ್ಯಗಳ ನಂತರ ಫಿಲ್ಮ್ ಸೆಟ್ ನಲ್ಲಿ ಕೆಲಸ ಮಾಡುವ ಸುಮಾರು ಐದು ಲಕ್ಷದಷ್ಟು ಟೆಕ್ನಿಷಿಯನ್ ಗಳು ಮತ್ತು ಕ್ರೂ ಮೆಂಬರ್ಸ್ ಗಳ ಎದುರು ಮತ್ತೆ ಉದ್ಯೋಗದ ಸಂಕಷ್ಟ ಎದುರಾಗಿದೆ.ಸುಮಾರು ೨.೪೦ ಲಕ್ಷ ಕೋಟಿ ರೂಪಾಯಿಯ ವಾರ್ಷಿಕ ಟರ್ನ್ ಓವರ್ ಕಾಣಿಸುವ ಫಿಲ್ಮ್ ಇಂಡಸ್ಟ್ರಿಯಲ್ಲಿ ಟೆಕ್ನಿಷಿಯನ್ ಮತ್ತು ಕ್ರೂ ಮೆಂಬರ್ಸ್ ಗಳ ಕುಟುಂಬಗಳು ಅತಿಹೆಚ್ಚು ಪ್ರಭಾವಿತಗೊಂಡಿವೆ. ಯಾಕೆಂದರೆ ಇವರಲ್ಲಿ ಹೆಚ್ಚಿನವರು ಡೈಲಿ ವೇಜಸ್ ನ್ನು ಅವಲಂಬಿಸಿದವರು ಎನ್ನುವ ಮಾತನ್ನು ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯಿಸ್ (ಎಫ್ ಡಬ್ಲ್ಯೂ ಐ ಸಿ ಇ) ಪದಾಧಿಕಾರಿಗಳು ಹೇಳಿದ್ದಾರೆ.


ಈ ಫೆಡರೇಶನ್ ಸುಮಾರು ೬೪(೧೯೫೬) ವರ್ಷ ಹಳೆಯದು.ಇದರಲ್ಲಿ ೩೨ ಕ್ರಾಫ್ಟ್ ನ ಎಸೋಸಿಯೇಷನ್ ಗಳು ಒಳಗೊಂಡಿವೆ.ಹಾಗೂ ಒಟ್ಟು ೫ ಲಕ್ಷ ಜನರು ಇದರಲ್ಲಿದ್ದಾರೆ. ಆರ್ಟಿಸ್ಟ್,ವೀಡಿಯೋ ಎಡಿಟರ್ಸ್,ಆರ್ಟ್ ಡೈರೆಕ್ಟರ್ಸ್, ಕಾಸ್ಟ್ಯೂಮ್ ಡಿಸೈನರ್ಸ್, ಟಿವಿ ಡೈರೆಕ್ಟರ್,ಫೋಟೋಗ್ರಾಫೀ ಸ್ಟಿಲ್ ಔರ್ ಮೂವಿಂಗ್,ಸಿಂಗರ್ಸ್,ಕ್ಯಾಮರಾ ಟೆಕ್ನಿಶಿಯನ್ಸ್, ಡಬ್ಬಿಂಗ್ ಆರ್ಟಿಸ್ಟ್, ಜೂನಿಯರ್ ಆರ್ಟಿಸ್ಟ್, ಸ್ಟೇಟ್ ಮ್ಯಾನ್, ಮ್ಯೂಸಿಶಿಯನ್,ಸ್ಕ್ರೀನ್ ರೈಟರ್ಸ್,ಡ್ಯಾನ್ಸರ್ಸ್, ಮಾಡೆಲ್ಸ್ ಸಹಿತ ಕ್ರಾಫ್ಟ್ಸ್ ಎಸೋಸಿಯೇಶನ್ ಸದಸ್ಯರು ಸೇರಿರುತ್ತಾರೆ.


ಬಾಲಿವುಡ್ ನಲ್ಲಿ ಟೆಕ್ನಿಷಿಯನ್ ಮತ್ತು ಅನ್ಯ ಕ್ರೂ ಮೆಂಬರ್ಸ್ ಗಳ ಅತಿದೊಡ್ಡ ಎಸೋಸಿಯೇಶನ್ ಅಂದರೆ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯಿಸ್( ಎಫ್ ಡಬ್ಲ್ಯು ಐ ಸಿ ಇ) ಆಗಿದೆ. ಇದರ ಅಧ್ಯಕ್ಷರಾಗಿದ್ದಾರೆ ಬಿ ಎನ್ ತಿವಾರಿ. ಮತ್ತು ಜನರಲ್ ಸೆಕ್ರೆಟರಿ ಆಗಿದ್ದಾರೆ ಅಶೋಕ್ ದುಬೆ.
ಮಹಾರಾಷ್ಟ್ರ ಸರಕಾರವು ಬೇರೆ ಕೆಲವು ಕ್ಷೇತ್ರಗಳ ವರಿಗೆ ಆರ್ಥಿಕ ಪರಿಹಾರ ಸಹಾಯವನ್ನು ಘೋಷಿಸಿದೆ .ಅದರಲ್ಲಿ ಸಿನಿಮಾರಂಗಕ್ಕೆ ಸಂಬಂಧಿಸಿದವರನ್ನೂ ಸೇರಿಸಲು ಆಗ್ರಹಿಸಲಾಗಿದೆ.


ಅಧ್ಯಕ್ಷ ಬಿ.ಎನ್.ತಿವಾರಿ ಅವರ ಪ್ರಕಾರ ಫೆಡರೇಶನ್ ಕೇಂದ್ರದ ವಿತ್ತಮಂತ್ರಿ ನಿರ್ಮಲಾ ಸೀತಾರಾಮನ್ ಅವರಿಗೂ ಸಹಾಯಕ್ಕಾಗಿ ವಿನಂತಿಸಿದೆ. ಫಿಲ್ಮ್ ಉದ್ಯೋಗವು ೨.೪೦ ಲಕ್ಷ ಕೋಟಿ ರೂಪಾಯಿ ವಾರ್ಷಿಕ ಟರ್ನ್ ಓವರ್ ಮಾಡುತ್ತಿದೆ. ಅನೇಕ ಪ್ರಕಾರದ ತೆರಿಗೆಗಳನ್ನು ಸರಕಾರಕ್ಕೆ ಕಟ್ಟುತ್ತಿದೆ .ಈ ಇಂಡಸ್ಟ್ರಿ ಕೂಡ ದೇಶದ ಭಾಗವಾಗಿದೆ. ಸರಕಾರದ ಕಿಂಚಿತ್ತು ಸಹಾಯದಿಂದ ಯಾರ ಬದುಕೂ ಸಾಗದು. ಆದರೆ ಸರಕಾರ ನಮ್ಮ ಜೊತೆಗಿದೆ ಎನ್ನುವುದೇ ನಮಗೊಂದು ಮಾನಸಿಕ ಸಮಾಧಾನವಾಗುವುದು. ನಮ್ಮ ಬಳಿ ಎಲ್ಲ ವರ್ಕರ್ಸ್ ಗಳ ಬ್ಯಾಂಕ್ ಖಾತೆ ನಂಬರ್ ಗಳು ಇವೆ. ಸರಕಾರ ನಮ್ಮ ಜೊತೆಗೂಡಿದರೆ ಉಳಿದೆಲ್ಲ ನಾವು ಮಾಡುತ್ತೇವೆ ಎನ್ನುತ್ತಾರೆ.


ಫಿಲ್ಮ್ ಇಂಡಸ್ಟ್ರಿಯ ಗಾಡಿ ಬಹಳ ಕಷ್ಟದಿಂದ ೨೦೨೦ ರ ನಂತರ ಈ ವರ್ಷ ಜನವರಿಯಿಂದ ಹಳಿಗೆ ಬಂದದ್ದಷ್ಟೇ. ಕಳೆದ ವರ್ಷದ ಜೂನ್ ನಂತರ ನಟ ಸುಶಾಂತ್ ಸಿಂಗ್ ರಾಜಪೂತ್ ಅವರ ಸಂಶಯಾಸ್ಪದ ಸಾವಿನ ಕುರಿತಂತೆ ತನಿಖೆಯಿಂದ ಬಾಲಿವುಡ್ ವಿವಿಧ ಕಾರಣಗಳಿಗಾಗಿ ನೋವುಂಡಿದೆ. ಸದ್ಯ ಸಿಬಿಐ ತನಿಖೆ ನಡೆಸುತ್ತಿದ್ದು ಅನಂತರ ಬಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣ ಸಾಕಷ್ಟು ಚರ್ಚೆ ಹುಟ್ಟಿಸಿದ್ದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಹಲವರನ್ನು ಬಂಧಿಸಿ ವಿಚಾರಣೆ ಮುಂದುವರಿಸಿದೆ.
“ಇದುವರೆಗೆ ನಾವು ಆಶಾಭಾವನೆಯಿಂದ ಇದ್ದೆವು. ಏಪ್ರಿಲ್ ನಲ್ಲಿ ದಿಢೀರನೆ ಕೊರೊನಾ ಸೋಂಕು ರೋಗದ ಎರಡನೇ ಹಾವಳಿ ಕಂಗೆಡಿಸಿತ್ತು. ಸರಕಾರ ೧೫ ದಿನಗಳ ಒಂದು ರೀತಿಯ ಲಾಕ್ಡೌನ್ ಘೋಷಿಸಿದೆ. ಒಂದು ವೇಳೆ ೧೫ ದಿನಗಳ ಲಾಕ್ ಡೌನ್ ಆದರೆ ಒಂದಿಷ್ಟಾದರೂ ಅಡ್ಜಸ್ಟ್ ಮಾಡಬಹುದು. ಆದರೆ ಇದಕ್ಕಿಂತ ಮುಂದೆ ಹೋದರೆ ಇಂಡಸ್ಟ್ರಿಗೆ ಕನಿಷ್ಠ ಎಂದರೂ ಒಂದು ಸಾವಿರ ಕೋಟಿ ರೂಪಾಯಿ ನಷ್ಟವಾಗಲಿದೆ. ಇದು ಪ್ರಾಕೃತಿಕ ವಿಕೋಪ. ನಾವು ಸರಕಾರದ ಜೊತೆಗಿದ್ದೇವೆ. ಸರಕಾರ ಹೇಳಿದ ಮಾರ್ಗದರ್ಶನದಲ್ಲಿ ನಾವು ಶೂಟಿಂಗ್ ನಡೆಸಲು ಅನುಮತಿ ಕೊಡಬೇಕು ಎನ್ನುತ್ತಾರೆ ಇಂಡಸ್ಟ್ರಿಯವರು.
ಸರಕಾರ ಉಳಿದ ಕ್ಷೇತ್ರಗಳವರಿಗೆ ೫,೫೦೦ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದೆ. ಅದರಲ್ಲಿ ಸಿನೆ ಎಂಪ್ಲಾಯೀಸ್ ಇವರನ್ನೂ ಅದರಲ್ಲಿ ಶಾಮೀಲುಗೊಳಿಸಲು ನಾವು ಆಗ್ರಹಿಸುತ್ತಿದ್ದೇವೆ ಎನ್ನುತ್ತಿದೆ ಫೆಡರೇಷನ್.
ಕಳೆದ ವರ್ಷ ಅಮಿತಾಭ್ ಬಚ್ಚನ್ ಅವರಿಗೆ ಕೊರೊನಾ ಪಾಸಿಟಿವ್ ಆದಾಗ ಇಡೀ ನ್ಯೂಸ್ ಚಾನಲ್ ನವರು ಬೊಬ್ಬೆ ಹೊಡೆದರು .ಆದರೆ ಈ ವರ್ಷ ೨೦೨೧ ರಲ್ಲಿ ಬಾಲಿವುಡ್ ನ ಅನೇಕರು ಕೊರೊನಾ ಪಾಸಿಟಿವ್ ಆಗಿದ್ದಷ್ಟೇ ಅಲ್ಲ, ಕೆಲವರು ಪ್ರಾಣವನ್ನೂ ತ್ಯಜಿಸಿದ್ದಾರೆ.
ಫೆಡರೇಷನ್ ಅನುಸಾರ ದಿನವಿಡೀ ಇಲ್ಲಿನ ಕಾರ್ಮಿಕರಿಗೆ ವ್ಯಾಕ್ಸಿನೇಷನ್ ಸೆಂಟರ್ ನಲ್ಲಿ ಸಾಲು ನಿಲ್ಲಲು ಕಷ್ಟವಿದೆ. ಹಾಗಾಗಿ ಫಿಲ್ಮ್ ಸಿಟಿಯಲ್ಲಿ ವ್ಯಾಕ್ಸಿನೇಷನ್ ಗೆ ನಾವು ವಿನಂತಿಸುತ್ತೇವೆ .ಫಿಲ್ಮ್ ಸಿಟಿಯಲ್ಲಿ ಪ್ರತೀದಿನ ಎಂಟರಿಂದ ಹತ್ತು ಸಾವಿರ ಜನರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಫಿಲ್ಮ್ ಸಿಟಿಯಲ್ಲೇ ಇವರಿಗಾಗಿ ಒಂದು ವ್ಯಾಕ್ಸಿನೇಷನ್ ಸೆಂಟರ್ ತೆರೆಯಲಾಗುವ ಮಾತೂ ಹೇಳಿದ್ದಾರೆ.
ಯಶ್ ರಾಜ್ ಫಿಲ್ಮ್ಸ್ ನವರು ಹೇಳುವಂತೆ ಸರಕಾರವು ನಮ್ಮ ವರ್ಕರ್ಸ್ ನ್ನೂ ಸೆಟ್ ನಲ್ಲಿ ಇದ್ದು ಕೆಲಸ ಮಾಡಲು ಅನುಮತಿ ನೀಡಬೇಕು. ಕನ್ಸ್ಟ್ರಕ್ಷನ್ ಇಂಡಸ್ಟ್ರಿಯ ವರ್ಕರ್ ಗಳು ಸೈಟ್ ನಲ್ಲೇ ಇರುತ್ತಾರಲ್ಲ ,ಹಾಗೆ ನಮ್ಮ ವರ್ಕರ್ಸ್ ಗಳನ್ನೂ ಸೆಟ್ ನಲ್ಲಿ ಇರಲು ಅನುಮತಿ ನೀಡಬೇಕು ಎನ್ನುತ್ತಾರೆ.
ಈ ದಿನಗಳಲ್ಲಿ ಮತ್ತೆ ಓಟಿಟಿ ಪ್ಲ್ಯಾಟ್ ಫಾರ್ಮ್ ಗಳಲ್ಲಿ ಸಿನಿಮಾಗಳು ಬಿಡುಗಡೆ ಆಗುತ್ತಿವೆ.
ಕೊರೊನಾ ಮಹಾಮಾರಿಯ ಎರಡನೆಯ ಅಲೆಯ ಕಾರಣ ಟಾಕೀಸುಗಳ ಬದಲಿಗೆ ಮತ್ತೆ ಓಟಿಟಿ ಫ್ಲ್ಯಾಟ್ಫಾರ್ಮ್ ನಲ್ಲಿ ಬಾಲಿವುಡ್ ಫಿಲ್ಮ್ ಗಳು ಬಿಡುಗಡೆಯಾಗುತ್ತಿವೆ .ಕಾರ್ತಿಕ್ ಆರ್ಯನ್ ಅವರ ಫಿಲ್ಮ್ ’ಧಮಾಕಾ’ ಓಟಿಟಿ ಪ್ಲಾಟ್ಫಾರ್ಮ್ ನಲ್ಲಿ ಮಾರಾಟವಾಗಿರುವ ಅತಿ ದುಬಾರಿ ಬಾಲಿವುಡ್ ಫಿಲ್ಮ್‌ಎನಿಸಿಕೊಳ್ಳಲಿದೆ. ’ಧಮಾಕಾ’ದ ಡಿಜಿಟಲ್ ರೈಟ್ಸ್ ನ್ನು ನೆಟ್ ಫ್ಲಿಕ್ಸ್ ೧೩೫ ಕೋಟಿ ರೂಪಾಯಿಗೆ ಖರೀದಿಸಿದೆ . ಇದಕ್ಕಿಂತ ಮೊದಲು ’ಲಕ್ಮ್ಮೀ’ ೧೨೫ ಕೋಟಿ ರೂಪಾಯಿ, ಭುಜ್: ದ ಪ್ರೈಡ್ ಆಫ್ ಇಂಡಿಯಾ: ೧೧೦ ಕೋಟಿ ರೂಪಾಯಿ, ’ಕೂಲಿ ನಂ.೧’: ೯೦ ಕೋಟಿ ರೂಪಾಯಿ, ಸಡಕ್ ೨’: ೭೦ ಕೋಟಿ ರೂಪಾಯಿ ಹೀಗೆ ಮಾರಾಟವಾಗಿತ್ತು.
ಲಾಕ್ಡೌನ್ ಮತ್ತು ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಆತ್ಮಹತ್ಯೆ ವಿವಾದ ಪ್ರಕರಣ, ಬಾಲಿವುಡ್ ನಲ್ಲಿ ಅಂಡರ್ ವರ್ಲ್ಡ್ ನ ಹಣ ಇರುವುದಾಗಿ ಕೆಟ್ಟ ಇಮೇಜ್ ಸೃಷ್ಟಿ ಆಗುತ್ತಿರುವುದು ….ಇತ್ಯಾದಿಗಳಿಂದ ಕಳೆದ ವರ್ಷ ೨೦೨೦ ಎಂಟರ್ಟೇನ್ ಮೆಂಟ್ ಇಂಡಸ್ಟ್ರಿಗೆ ಹತ್ತು ಸಾವಿರ ಕೋಟಿ ರೂಪಾಯಿಯಷ್ಟು ನಷ್ಟ ಆಗಿದೆ ಎಂದು ಹೇಳಲಾಯಿತು.ಕೇವಲ ಬಾಕ್ಸ್ ಆಫೀಸ್ ಗೆ ಸುಮಾರು ನಾಲ್ಕು ಸಾವಿರ ಕೋಟಿ ರೂಪಾಯಿಯಷ್ಟು ನಷ್ಟ ಆಗಿತ್ತಂತೆ. ಸುಶಾಂತ್ ಪ್ರಕರಣದ ನಂತರ ಫಿಲ್ಮ್ ಇಂಡಸ್ಟ್ರಿಯ ವಿಷಯದಲ್ಲಿ ಅನೇಕ ತಪ್ಪುಗ್ರಹಿಕೆಗಳು ಹಲವರನ್ನು ಕಾಡುತ್ತಿವೆ. ಬಾಕ್ಸ್‌ಆಫೀಸ್ ಅರ್ಥಾತ್ ಟಾಕೀಸ್ ಗಳು ಬಂದ್ ಇದ್ದುದರಿಂದ ಕೇವಲ ಟಿಕೇಟ್ ಕಿಟಕಿಯಿಂದ ೨೦೨೦ ರಲ್ಲಿ ಸುಮಾರು ೪,೦೦೦ ಕೋಟಿ ರೂಪಾಯಿ ನಷ್ಟ ಆಗಿದೆ ಎಂದು ಅಕ್ಟೋಬರ್ ನಲ್ಲೇ ಹೇಳಿದ್ದರು.. ಇಂತಹ ಸ್ಥಿತಿಯಲ್ಲಿ ಸೆಟಲೈಟ್ ವಾಲರು ನಿರ್ಮಾಪಕರಿಗೆ ಕಡಿಮೆ ಹಣ ನೀಡಿದರೂ ಫಿಲ್ಮ್ ಗಳು ಡೈರೆಕ್ಟ್ ಓಟಿಟಿ ಪ್ಲ್ಯಾಟ್ ಫಾರ್ಮ್ ನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಒಂದು ವರ್ಷದಲ್ಲಿ ಬಾಕ್ಸಾಫೀಸ್ ನಿಂದ ಸುಮಾರು ಆರು ಸಾವಿರ ಕೋಟಿ ರೂಪಾಯಿ ಟರ್ನ್ ಓವರ್ ಇದೆ .ಸೆಟ್ಲೈಟ್ ಮತ್ತು ಓಟಿಟಿ ರೈಟ್ಸ್ ನಿಂದ ೯ ಸಾವಿರ ಕೋಟಿ ರೂಪಾಯಿಯಷ್ಟು ಸಿಗುವುದು. ೩೦೦– ೪೦೦ ಕೋಟಿ ರೂಪಾಯಿಯ ಪಾಲು ಮ್ಯೂಸಿಕ್ ವರ್ಲ್ಡ್ ನಲ್ಲಿ ಇರುತ್ತದೆ .ಆದರೆ ಇವೆಲ್ಲ ಕಳೆದ ವರ್ಷ ಕೊರೊನಾ ಮೊದಲ ಅಲೆಯ ಆರಂಭದ ಐದು ತಿಂಗಳಲ್ಲೇ ನಿಂತು ಬಿಟ್ಟಿತ್ತು.
ಹಾಗೆ ನೋಡಿದರೆ ಬಾಲಿವುಡ್ ತನ್ನ ಫಿಲ್ಮ್ ಗಳಲ್ಲಿ ನೂರಾರು ಸಂಕಷ್ಟಗಳ ಕಥೆಗಳನ್ನು ತೆರೆಯಮೇಲೆ ಕಾಣಿಸಿದ್ದಿದೆ. ಇದೀಗ ತಾವೇ ಆ ಕಥೆಗಳ ಭಾಗವಾಗುತ್ತಿದ್ದಾರೆ.
ಈ ವರ್ಷ ಹಬ್ಬದ ಸಂದರ್ಭಗಳಲ್ಲಿ ಟಾಕೀಸ್ ಗಳಲ್ಲಿ ಕೆಲವು ಫಿಲ್ಮ್ ಗಳ ಬಿಡುಗಡೆಯ ಘೋಷಣೆ ಆಗಿದ್ದರೂ ಅವೆಲ್ಲ ಮತ್ತೆ ಬಿಡುಗಡೆ ದಿನಾಂಕವನ್ನು ಮುಂದೂಡಿವೆ.
ಒಂದೊಮ್ಮೆ ವಾರದಲ್ಲಿ ಮೂರ್ನಾಲ್ಕು ಪ್ರಮುಖ ಫಿಲ್ಮ್ ಗಳು ಟಾಕೀಸುಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದ್ದರೆ ಬಾಕ್ಸ್ ಆಫೀಸ್ ಗೋತಾ ಹೊಡೆಯಬಹುದೇ ಎಂದು ಟೆನ್ಶನ್ ಮಾಡುತ್ತಿದ್ದ ಟಾಕೀಸ್ ಮಾಲಕರು ಮತ್ತು ಬಾಲಿವುಡ್ ನಿರ್ಮಾಪಕರು ಈಗ “ತೀಸ್ರಾ ಪರ್ದೆ” ಯಲ್ಲಿ ಒಂದೇ ವಾರದಲ್ಲಿ ೪ ಫಿಲ್ಮ್ ಗಳು ಬಿಡುಗಡೆಯಾದರೂ ಟೆನ್ಶನ್ ಇಲ್ಲ ಎನ್ನುತ್ತಿದ್ದಾರೆ . ವೀಕೆಂಡ್ ನಲ್ಲಿ ಅದರ ಯಶಸ್ಸು ನಿರ್ಧಾರವಾಗುವುದಿಲ್ಲ. ಮತ್ತೊಂದೆಡೆ ಪ್ರಸಿದ್ಧ ನಟರ ಫಿಲ್ಮ್ ಗಳ ಸ್ವಲ್ಪವೇ ಶೂಟಿಂಗ್ ಬಾಕಿಇದ್ದರೂ ಸದ್ಯ ಶೂಟಿಂಗ್ ನಿಂದ ದೂರ ಸರಿಯುತ್ತಿದ್ದಾರೆ.
ಕಲಾವಿದರು ಗ್ಲ್ಯಾಮರ್ ಜಗತ್ತಿನಲ್ಲಿರುವ ಕಾರಣ ಅವರಲ್ಲಿ ಯಾರಿಗಾದರೂ ಕೊರೊನಾ ಪೊಸಿಟಿವ್ ಬಂದರೆ ಹೆಚ್ಚು ಸುದ್ದಿಯಾಗುತ್ತಾರೆ . ಸೆಲೆಬ್ರಿಟಿಗಳು , ಟೆಕ್ನಿಶಿಯನ್ ಗಳು ಈಗಲೂ ಭಯಗೊಳ್ಳುತ್ತಿದ್ದಾರೆ. ಈ ಕಾರಣ ಅನೇಕ ಫಿಲ್ಮ್ ಗಳು, ಸೀರಿಯಲ್ ಗಳ ಶೂಟಿಂಗ್ ಆರಂಭ ಮಾಡಿದ್ದೂ ಮುಂದೂಡಲಾಗುತ್ತಿದೆ. ಫಿಲ್ಮ್ ಗಳಲ್ಲಿ ಮತ್ತು ಟಿವಿ ಸೀರಿಯಲ್ ಗಳಲ್ಲಿ ಕೊರೊನಾ ಮಹಾಮಾರಿಯ ನಂತರ ಕಥೆಗಳಲ್ಲಿ ಕೂಡಾ ರೈಟರ್ಸ್ ಗಳು ಬದಲಾವಣೆ ಮಾಡುತ್ತಿದ್ದಾರೆ .ಸಿನಿಮಾ ಸಮಾಜದ ಚಿತ್ರಣವನ್ನು ಮುಂದಿಡುತ್ತದೆ ಎನ್ನುತ್ತಾರೆ,ಆದರೆ ಈವಾಗ ಕೊರೊನಾ ಕೂಡ ಜನರ ಜೀವನ ಶೈಲಿಯನ್ನು ಬದಲಿಸುತ್ತಿದೆ ಅನ್ನಬೇಕಾಗಿದೆ. ( ಎಸ್.ಜೆ)