ಕೊರೊನಾ ಎರಡನೆಯ ಅಲೆಯ ಬಗ್ಗೆ ಗಂಭೀರವಾಗಿ ಪರಿಗಣಿಸಲು ದಸ್ತಿ ಒತ್ತಾಯ

ಕಲಬುರಗಿ :ಮಾ.28: ಕರೊನಾ ಎರಡನೆಯ ಅಲೆ ಆರಂಭವಾಗಿ ತೀವ್ರ ಗತಿಯಿಂದ ದಿನೆ ದಿನೆ ಹೆಚ್ಚಾಗುತ್ತಿದೆ. ಇದರಿಂದ ಸೊಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆಯೂ ಸಹ ಹೆಚ್ಚುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಮಹಾರಾಷ್ಟ್ರ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಕಲ್ಯಾಣ ಕರ್ನಾಟಕದ ಬೀದರ, ಕಲಬುರಗಿ ಜಿಲ್ಲೆಯ ಜನರು ಎಚ್ಚರ ವಹಿಸಬೇಕಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಾದೇಶಿಕ ಆಯುಕ್ತರು ಸೇರಿದಂತೆ ಆಯಾ ಜಿಲ್ಲೆಯ ಜಿಲ್ಲಾಡಳಿತ ಕೊರೊನಾ ಎರಡನೆಯ ಅಲೆ ತಡೆಗಟ್ಟುವ ವಿಷಯದಲ್ಲಿ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ, ಒತ್ತಾಯಿಸುತ್ತದೆ ಎಂದು ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ತಿಳಿಸಿದ್ದಾರೆ.
ಕೊರೊನಾ ಮೊದಲನೇ ಅಲೆಯ ಮಹಾಮಾರಿಯಿಂದ ಬಲಿಯಾಗಿರುವುದು ಇಡೀ ದೇಶ ದಲ್ಲಿಯೇ ಕಲಬುರಗಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಈ ಹಿಂದೆ ಕೊರೊನಾ ಮಹಾಮಾರಿಯ ತಡೆಗಟ್ಟಲು ಆರಂಭದಲ್ಲಿ ಏಕಮಾತ್ರ ಮಾರ್ಗ ಲಾಕ ಡೌನ ಎಂದು ಪರಿಗಣಿಸಿ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ಮಾಡಲಾಗಿತ್ತು. ಇದಕ್ಕೆ ದೇಶದ ಎಲ್ಲಾ ಜನರು ಸಹಕರಿಸಿದರು. 2020-2021ನೇ ಸಾಲಿನ ಒಂದುವರೆ ವರ್ಷದ ಅವಧಿಯಲ್ಲಿ ಕೊರೊನಾ ಹರಡುವಿಕೆ ಮತ್ತು ಇದನ್ನು ತಡೆಗಟ್ಟುವ ವಿಷಯಕ್ಕೆ ಸಂಬಂಧಿಸಿ ಸರಕಾರಕ್ಕೆ ಹಾಗೂ ಆರೋಗ್ಯ ಇಲಾಖೆಗೆ ಅಪಾರ ಪ್ರಮಾಣದ ಅನುಭವವು ಸಹ ಆಗಿದೆ, ಜನರಿಗೂ ಇದರ ಮನವರಿಕೆಯಾಗಿದೆ. ಈ ಮಧ್ಯೆ ಪ್ರಸ್ತುತ ದಿನಗಳಲ್ಲಿ ಕೊರೊನಾ ತಡೆಗಟ್ಟುವಿಕೆಗೆ ಸರಕಾರ ವೈಜ್ಞಾನಿಕ ಮಾದರಿಯ ಕ್ರಮಗಳನ್ನು ಅನುಸರಿಸುವ ಮುಖಾಂತರ ಜನರ ಜೀವನ ನಡೆಯುವುದರ ಜೊತೆಗೆ ಸಾಮಾಜಿಕ ಅಂತರ ಕಾಪಾಡುವದರ ಬಗ್ಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ 1) ಕಲ್ಯಾಣ ಕರ್ನಾಟಕ ಪ್ರದೇಶದ ಗಡಿ ಜಿಲ್ಲೆಗಳಲ್ಲಿ ಹೊರ ರಾಜ್ಯದಿಂದ ಬರುವ ಪ್ರವಾಸಿಗರನ್ನು, ವಾಹನಗಳನ್ನು ಕಟ್ಟುನಿಟ್ಟಾಗಿ ಗಮನಿಸಿ ಕಡ್ಡಾಯವಾಗಿ ತಪಾಸಣೆ ಮಾಡಬೇಕು. 2) ಕಡ್ಡಾಯವಾಗಿ ಮಾಸ್ಕ ಧರಿಸುವ ಮುಖಾಂತರ ಸಾಮಾಜಿಕ ಅಂತರ ಕಾಪಾಡಿ ಕೊಂಡು ದಿನವಹಿ ಆರ್ಥಿಕ ವ್ಯವಹಾರಗಳು, ಸಾಮಾಜಿಕ ಚಟುವಟಿಕೆಗಳು, ಕಚೇರಿ ವ್ಯವಹಾರಗಳು ಹಾಗೂ ಇನ್ನೀತರ ವ್ಯವಹಾರಗಳು ನಡೆಸುವಂತೆ ಕಠಿಣ ಆದೇಶ ಹೊರಡಿಸಬೇಕು. 3) ಎರಡನೆಯ ಅಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಎಚ್ಚರಿಕೆಯಿಂದಿರಲು ಧ್ವನಿವರ್ಧಕ ಮತ್ತು ಮಾಧ್ಯಮ ಹಾಗೂ ಇನ್ನೀತರೆ ಮಾರ್ಗಗಳಿಂದ ವ್ಯಾಪಕ ಪ್ರಚಾರ ಕಾರ್ಯ ಕೈಗೊಳ್ಳಬೇಕು. 4) ರಾತ್ರಿ 9 ರಿಂದ ಬೆಳಗಿನ ಜಾವ 5 ಗಂಟೆಯ ವರೆಗೆ ಕರ್ಫ್ಯೂ ಜಾರಿಗೆ ತರುವ ನಿಟ್ಟಿನಲ್ಲಿ ಯೋಚಿಸಬೇಕು. 5) ಕೊರೊನಾ ಲಸಿಕೆ ಕಡ್ಡಾಯವಾಗಿ ಎಲ್ಲರೂ ತೆಗೆದುಕೊಳ್ಳಲು ವ್ಯಾಪಕ ಪ್ರಚಾರ ಮಾಡಬೇಕು ಮತ್ತು ಈ ಬಗ್ಗೆ ಸಾರ್ವತ್ರಿಕವಾಗಿ ಸರಕಾರದಿಂದ ಎಲ್ಲ ಕಡೆ ವ್ಯವಸ್ಥೆ ಮಾಡಬೇಕು. 6) ವಯಸ್ಸಾದ ವೃದ್ಧರಿಗೆ ಮತ್ತು ಅಂಗವಿಕಲರಿಗೆ ಮತ್ತು ಕೆಲವೊಂದು ಕಾಯಿಲೆಯಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುವಂತಹ ವ್ಯಕ್ತಿಗಳನ್ನು ಗುರುತಿಸಿ ಅಂತವರ ಮನೆಗೆ ಹೋಗಿ ಕೊರೊನಾ ಲಸಿಕೆ ನೀಡುವ ಬಗ್ಗೆ ಆರೋಗ್ಯ ಇಲಾಖೆ ತಕ್ಷಣ ಸ್ಪಂಧಿಸಿ ಕ್ರಮ ಕೈಗೊಳ್ಳಬೇಕು. 7) ಕೊರೊನಾ ಸೊಂಕಿನ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಪರೀಕ್ಷೆ ಮಾಡಿಕೊಳ್ಳಲು ಸರಕಾರ ಆರೋಗ್ಯ ಇಲಾಖೆಯ ಮೂಲಕ, ಸರಕಾರಿ ಇಲಾಖೆಗೆ ಸಂಬಂಧಿಸಿದ ಆಸ್ಪತ್ರೆಗಳಲ್ಲಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ರೀತಿಯಲ್ಲಿ ವ್ಯವಸ್ಥೆ ಕಾರ್ಯಗಳು ಕೈಗೊಳ್ಳಬೇಕು.
ಒಟ್ಟಾರೆ ಕೊರೊನಾ ಎರಡನೆಯ ಅಲೆಯ ತಡೆಗಟ್ಟುವಲ್ಲಿ ಸರಕಾರ ಗಂಭೀರವಾದ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕು. ಇದಕ್ಕೆ ಜನ ಸಾಮಾನ್ಯರು ಎಲ್ಲಾ ರೀತಿಯಿಂದ ಸಹಕಾರ ನೀಡಿ ನಮ್ಮ ಜೀವ ಬದುಕಿಸಿಕೊಳ್ಳುವುದರ ಜೊತೆಗೆ ಬದುಕುವ ವ್ಯವಹಾರ ಮಾಡುತ್ತ ದಿನವಹಿ ಚಟುವಟಿಕೆಗಳು ಕೊರೊನಾ ತಡೆಗಟ್ಟುವ ಮಾರ್ಗಸೂಚಿಗಳಂತೆ ಎಲ್ಲರೂ ಬದ್ಧತೆ ಪ್ರದರ್ಶಿಸಲು ಸಮಿತಿ ಮನವರಿಕೆ ಮಾಡಿಕೊಳ್ಳುತ್ತದೆ.