ಕೊರೊನಾ : ಎಪಿಎಂಸಿ ಬಂದ್ – ರೈತರ ಕೃಷಿ ಉತ್ಪನ್ನ ಮಾರಾಟ ಸಮಸ್ಯೆ

ರಾಯಚೂರು.ಏ.೩೦- ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪಾರ ವಹಿವಾಟು ಸ್ಥಗಿತ ರೈತರಿಗೆ ತೀವ್ರ ತೊಂದರೆಯಾಗಿದೆ. ಭತ್ತದ ಬೆಲೆ ಸೇರಿದಂತೆ ಶೇಂಗಾ ಬೆಲೆಯಲ್ಲಿಯೂ ಭಾರೀ ಕುಸಿತಕ್ಕೆ ದಾರಿ ಮಾಡಿದೆ. ರಾಜ್ಯ ಸರ್ಕಾರ ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆಗೆ ಯಾವುದೇ ಅಡೆತಡೆಯಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದರೂ, ಕೊರೊನಾ ತೀವ್ರತೆ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿದೆ. ಮುಂಜಾನೆ ೬ ಗಂಟೆಯಿಂದ ೧೦ ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ೧೦ ಗಂಟೆ ನಂತರ ಎಲ್ಲಾ ವ್ಯಾಪಾರ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ತಾಲೂಕಿನಿಂದ ಬರುವ ಕೃಷಿ ಉತ್ಪನ್ನ ಮಾರಾಟಗಾರರು ಹಾಗೂ ನೆರೆ ಆಂಧ್ರ ಮತ್ತು ತೆಲಂಗಾಣದಿಂದ ಭಾರೀ ಪ್ರಮಾಣದ ಕೃಷಿ ಉತ್ಪನ್ನ ಮಾರಾಟಕ್ಕೆ ತರಲಾಗುತ್ತದೆ.
ಈ ಎಲ್ಲಾ ರೈತರು ಎಪಿಎಂಸಿಯ ಹೊರ ಭಾಗದಲ್ಲಿ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು, ಮೂರು ದಿನಗಳ ಹಿಂದೆ ೧೭೦೦ ರೂ. ಇದ್ದ ಭತ್ತದ ಬೆಲೆ ಈಗ ಸುಮಾರು ೧೦೦ ರಿಂದ ೨೦೦ ರೂ. ಕುಸಿತವಾಗಿದೆ. ಶೇಂಗಾಕ್ಕೂ ಬೆಲೆ ಇಲ್ಲದಂತಾಗಿದೆ. ದೂರದ ಊರಿಂದ ಬಂದ ರೈತರು ಎಪಿಎಂಸಿ ಬಂದ್ ವಿಷಯ ತಿಳಿಯದೇ ತೊಂದರೆಗೆ ಸಿಲುಕ್ಕಿದ್ದು, ಮತ್ತೇ ಕೃಷಿ ಉತ್ಪನ್ನವನ್ನು ಹಿಂದಕ್ಕೆ ಕೊಂಡೊಯ್ಯಲು ಸಾಧ್ಯವಾಗದೇ, ಬೇಕಾಬಿಟ್ಟಿ ವ್ಯಾಪಾರ ಮಾಡುವ ಖರೀದಿದಾರರಿಗೆ ಕಡಿಮೆ ದರದಲ್ಲಿ ಭತ್ತ ಮತ್ತಿತರ ಕೃಷಿ ಉತ್ಪನ್ನ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಎರಡು, ಮೂರು ದಿನಗಳ ಹಿಂದೆ ವ್ಯಾಪಾರವಾಗಿರುವ ಕೃಷಿ ಉತ್ಪನ್ನವನ್ನು ಒಂದೆಡೆ ರಾಶಿ ಮಾಡಿ, ಚೀಲ ತುಂಬುವ ಪ್ರಯತ್ನ ನಡೆಯುತ್ತಿದ್ದರೇ, ಮತ್ತೊಂದೆಡೆ ರೈತರು ಹೈದ್ರಾಬಾದ್ ರಸ್ತೆಯ ಅಕ್ಕಪಕ್ಕದಲ್ಲಿ ವ್ಯಾಪಾರಿಗಳಿಗೆ ಕೇಳಿದ ದರಕ್ಕೆ ತಮ್ಮ ಕೃಷಿ ಉತ್ಪನ್ನ ಮಾರಾಟ ಮಾಡುವ ಅನಿವಾರ್ಯತೆ ನಿರ್ಮಾಣವಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಭತ್ತ, ಶೇಂಗಾ, ಹತ್ತಿ ತಾರದಿರುವುದಂತೆ ಸೂಚಿಸಿದ್ದರೂ ರೈತರು ಮಾರಾಟಕ್ಕೆ ಬರುತ್ತಿರುವುದು ಸಮಸ್ಯೆ ಗಂಭೀರಗೊಳ್ಳುಂತೆ ಮಾಡಿದೆ.