ಕೊರೊನಾ ಉಲ್ಬಣ: ಊರುಗಳತ್ತ ಮುಖ ಮಾಡಿದ ಜನ

ಬೆಂಗಳೂರು, ಏ.೬-ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಕೊರೊನಾ ಸೋಂಕು ಉಲ್ಬಣ ಕಾರಣದಿಂದಾಗಿ ನಗರದಿಂದ ವಲಸೆ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ.
ಸಿಕ್ಕ ಸಿಕ್ಕ ವಾಹನಗಳಲ್ಲಿ ಮನೆ ಸಾಮಾನುಗಳು, ಪಾತ್ರೆಗಳು, ಬಟ್ಟೆಗಳನ್ನು ತುಂಬಿಕೊಂಡು ತಮ್ಮ ಮಕ್ಕಳ ಜತೆ ತಮ್ಮೂರಿನತ್ತ ಹೊರಟಿರುವ ದೃಶ್ಯಗಳು ನಗರದ ಟೋಲ್‌ಗೇಟ್‌ಗಳು ಹಾಗೂ ಹೆದ್ದಾರಿಗಳಲ್ಲಿ ಕಂಡುಬಂದವು.
ಕಳೆದ ೧೦ ದಿನಗಳಿಂದ ಬೆಂಗಳೂರಿನಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಬೆನ್ನಲ್ಲೇ ಜನರು ಭೀತಿಗೆ ಒಳಗಾಗಿದ್ದಾರೆ. ಹೀಗಾಗಿ ಮತ್ತೆ ಲಾಕ್‌ಡೌನ್ ಹೇರುವ ಭಯದಲ್ಲಿ ಕೆಲವರು ತಮ್ಮ ತಮ್ಮ ಊರುಗಳಿಗೆ ವಾಪಾಸಾಗುತ್ತಿದ್ದಾರೆ.
ಪ್ರಮುಖವಾಗಿ ಮಹದೇವಪುರ ಮತ್ತು ಕೆ.ಆರ್ ಪುರದಿಂದ ಕೋಲಾರ, ಆಂಧ್ರಪ್ರದೇಶ, ತಮಿಳು ನಾಡು ಕಡೆ ವಾಹನದಲ್ಲಿ ಮನೆ ವಸ್ತುಗಳನ್ನು ತುಂಬಿಕೊಂಡು ಹೋಗುತ್ತಿರುವ ದೃಶ್ಯ ಸರ್ವೇ ಸಾಮಾನ್ಯ ಎನ್ನುವಂತಾಗಿದೆ.
ಅಲ್ಲದೆ, ಈಗಾಗಲೇ ಕೆಲಸ ಕಳೆದುಕೊಂಡು ಬರಿಗೈಯಲ್ಲಿದ್ದೇವೆ. ಆದಾಯವಿಲ್ಲದೆ ಖಾಲಿ ಕೈಯಲ್ಲಿ ಕುಳಿತಿರುವ ನಮಗೆ ಮನೆ ಬಾಡಿಗೆ ಕಟ್ಟುವುದು, ಸಂಸಾರ ಸಾಗಿಸುವುದು ಕಷ್ಟವಾಗಿದೆ. ಹೀಗಾಗಿ ಬೆಂಗಳೂರು ತೊರೆಯುತ್ತಿದ್ದೇವೆ ಎಂದು ವಲಸಿಗರೊಬ್ಬರು ತಮ್ಮ ಅಳಲು ತೋಡಿಕೊಂಡರು.
ಕಳೆದ ವರ್ಷವೂ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್‌ಡೌನ್ ಘೋಷಣೆಯಾದ ಪರಿಣಾಮ ಸಾವಿರಾರು ಜನರು ರಾಜಧಾನಿ ತೊರೆದರು.
ನಗರದಲ್ಲಿ ನೆಲೆಸಿದ್ದ ಸಾವಿರಾರು ಮಂದಿ ಬೆಳಗಿನ ಜಾವದಿಂದಲೇ ತಮ್ಮ ಊರುಗಳಿಗೆ ಸೇರಲು ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಸ್ಯಾಟಲೈಟ್, ಜಾಲಹಳ್ಳಿ ಕ್ರಾಸ್ ಬಸ್ ನಿಲ್ದಾಣಗಳಲ್ಲಿ ಜಮಾವಣೆಗೊಳ್ಳುತ್ತಿದ್ದರು. ಆದರೆ,ಮತ್ತೊಮ್ಮೆ ಇಂತಹ ದೃಶ್ಯ ಮರಳಿ ಬರಬಹುದು ಎನ್ನುತ್ತಾರೆ ವಲಸೆ ಹೊರಟವರು.