ಕೊರೊನಾ ಉಲ್ಬಣಕ್ಕೆ ರಾಜಕೀಯ ಪಕ್ಷಗಳೇ ಹೊಣೆ

ಬೆಂಗಳೂರು, ಏ.೨೧- ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯು ಉಲ್ಬಣಾವಸ್ಥೆಗೆ ತಲುಪಲು ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷಗಳೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಜಗದೀಶ್ ವಿ. ಸದಂ ತಿಳಿಸಿದ್ದಾರೆ.
ನಗರದಲ್ಲಿಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಪರೇಷನ್ ಕಮಲದಿಂದ ತೆರವಾಗಿದ್ದ ಮಸ್ಕಿ, ಬಸವಕಲ್ಯಾಣ ಹಾಗೂ ಸಿಂದಗಿ, ಬೆಳಗಾವಿ ಲೋಕಸಭಾ ಉಪ ಚುನಾವಣೆಗಳನ್ನು ಕಳೆದ ಒಂದು ತಿಂಗಳಿನಿಂದ ಅತ್ಯಂತ ಪ್ರತಿಷ್ಠೆಯ ವಿಷಯವನ್ನಾಗಿ ತೆಗೆದುಕೊಂಡಿರುವ ಈ ಎಲ್ಲ ಪಕ್ಷಗಳ ಪ್ರಮುಖ ನಾಯಕರುಗಳು ಒಬ್ಬರಿಗೊಬ್ಬರು ಕೆಸರೆರೆಚಿಕೊಂಡು ಅಬ್ಬರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.ಇವರುಗಳ ಬೇಜವಬ್ದಾರಿ ನಡೆಯಿಂದಲೇ ರಾಜ್ಯದಲ್ಲಿ ಈಗ ಈ ರೀತಿಯ ಕೋವಿಡ್ ಎರಡನೇ ಅಲೆಯ ದುಸ್ಥಿತಿಗೆ ನೇರ ಕಾರಣ ಎಂದು ದೂರಿದರು.
ತಜ್ಞರ ಸಮಿತಿಯು ಹಲವಾರು ವರದಿಗಳನ್ನು ನೀಡಿದರೂ ಸಹ ರಾಜ್ಯವು ಮುಂದೆ ಎದುರಿಸಬೇಕಾಗಿದ್ದ, ಕೋವಿಡ್ ಮಹಾಮಾರಿಯ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಯಾರೂ ಅಂದಾಜಿಸಲಿಲ್ಲ. ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾರ್ಚ್‌ನಲ್ಲಿ ನಡೆದ ಎರಡೂ ಸದನಗಳ ಅಧಿವೇಶನದಲ್ಲಿ ಸಹ ಚರ್ಚಿಸದೆ ಸದನದ ಸಮಯವನ್ನು ಹಾಳುಗೆಡವುದರಲ್ಲಿ ನಿರತರಾಗಿದ್ದರು ಎಂದು ವಾಗ್ದಾಳಿ ನಡೆಸಿದರು.
ಆರೋಗ್ಯ ಸಚಿವ ಸುಧಾಕರ್ ವ್ಯತಿರಿಕ್ತವಾಗಿ ಈ ಎಲ್ಲ ದುರವಸ್ಥೆಗೆ ರಾಜ್ಯದ ಜನತೆಯೇ ಕಾರಣ ಎಂದು ಆಪಾದಿಸುತ್ತಿದ್ದಾರೆ. ಸಚಿವರ ಬೇಜವಾಬ್ದಾರಿ ಹೇಳಿಕೆ ಖಂಡನೀಯ ಎಂದ ಅವರು, ಇದೀಗ ಸರ್ವಪಕ್ಷಗಳ ಸಭೆ ಹಾಗೂ ರಾಜ್ಯಪಾಲರ ಮುಂದೆ ಒಬ್ಬರಿಗೊಬ್ಬರು ಕೆಸರೆರೆಚಿಕೊಂಡು ರಾಜ್ಯದ ಜನತೆಯನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಬೆಡ್ , ಆಕ್ಸಿಜನ್, ಐಸಿಯುಗಳು ಸಿಗದೆ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಧಾರುಣವಾಗಿ ಸಾವನ್ನಪ್ಪುತ್ತಿರುವ ಜನಸಾಮಾನ್ಯರು ಅಕ್ಷರಶಃ ಸರ್ಕಾರಿ ಪ್ರಾಯೋಜಿತ ಕೊಲೆಗೀಡಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮಹಿಳಾ ಮುಖಂಡರಾದ ಶ್ರುತಿ ಪಿ.ಎಂ. ಸೇರಿದಂತೆ ಪ್ರಮುಖರಿದ್ದರು.