ಕೊರೊನಾ ಉಪಟಳ ದಿನದಿನಕ್ಕೂ ಹೆಚ್ಚಳ

closeup of a caucasian doctor man holding a world globe with a protective mask with the word coronavirus written in it


ನವದೆಹಲಿ, ಜು. ೩೦- ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೇ ಏರುತ್ತಲೇ ಇದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ 50 ಸಾವಿರಕ್ಕೂ ಹೆಚ್ಚು ಹೊಸಸೋಂಕು ಪ್ರಕರಣಗಳು ದಾಖಲಾಗುವುದರೊಂದಿಗೆ ಜನರನ್ನು ಮತ್ತಷ್ಟು ಆತಂಕಕ್ಕೆ ಈಡುಮಾಡಿದೆ.
ಬುಧವಾರ ಬೆಳಗಿನಿಂದ ಇಂದು ಬೆಳಗಿನವರೆಗಿನ 24 ಗಂಟೆ ಅವಧಿಯಲ್ಲಿ ದೇಶದಲ್ಲಿ 52,123 ಹೊಸಸೋಂಕಿತರು ಪತ್ತೆಯಾಗಿದ್ದು, ಈ ಅವಧಿಯಲ್ಲಿ 775 ಮಂದಿ ಸಾವನ್ನಪ್ಪಿದ್ದಾರೆ. ಇದು ಮಹಾಮಾರಿ ಸೋಂಕಿನ ಭೀಕರತೆಯನ್ನು ಸೂಚಿಸುತ್ತದೆ.
24 ಗಂಟೆಗಳ ಅವಧಿಯಲ್ಲಿ 52 ಸಾವಿರಕ್ಕೂ ಅಧಿಕ ಹೊಸಪ್ರಕರಣಗಳು ದೃಢಪಡುವುದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 15,83,72ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದುವರೆಗೂ ದೇಶದಲ್ಲಿ 10,52,582 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಆದರೂ 5,28,242 ಮಂದಿ ಸೋಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ 775 ಮಂದಿ ಸಾವಿಗೀಡಾಗಿದ್ದು, ಇದುವರೆಗೂ ಮಹಾಮಾರಿಗೆ ಬಲಿಯಾದವರ ಸಂಖ್ಯೆ 34,968ಕ್ಕೇರಿದೆ. ಈ ನಡುವೆ ಗುಣಮುಖರ ಪ್ರಮಾಣ ದೇಶದಲ್ಲಿ ಶೇ. 64.43 ರಷ್ಟಿದ್ದು, ಪಾಸಿಟಿವಿಟಿ ದರ ಶೇ. 11.67 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ಇದುವರೆಗೂ 1,81,90,382 ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದ್ದು, ನಿನ್ನೆ ಒಂದೇ ದಿನ ಸುಮಾರು 4.5 ಲಕ್ಷ ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
ಕರ್ನಾಟಕ ಸೇರಿದಂತೆ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ ರಾಜ್ಯಗಳಲ್ಲಿ ಅತಿಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿವೆ. ಈ 5 ರಾಜ್ಯಗಳಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಶೇ. 66.41 ರಷ್ಟು ಪ್ರಮಾಣದಲ್ಲಿ ಪ್ರಕರಣಗಳು ದಾಖಲಾಗಿವೆ.
ಈ 5 ರಾಜ್ಯಗಳಲ್ಲಿ ಸಾವಿನ ಪ್ರಮಾಣವೂ ಹೆಚ್ಚಾಗಿದ್ದು, ಈ ಪ್ರಮಾಣ ಶೇ. 74.58 ರಷ್ಟಿದೆ.
ಶಾಸಕರಿಗೆ ಸೋಂಕು
ಮಧ್ಯಪ್ರದೇಶದ 9 ಶಾಸಕರಿಗೆ ಕೊರೊನಾ ಸೋಂಕಿರುವುದು ಪತ್ತೆಯಾಗಿದೆ. ಬಿಜೆಪಿಯ – 7 ಹಾಗೂ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರಲ್ಲಿ ಕೊರೊನಾ ಸೋಂಕಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ನಾಲ್ವರು ಬಿಜೆಪಿ ಮುಖಂಡರು ಇತ್ತೀಚೆಗೆ ನಿಧನರಾದ ರಾಜ್ಯಪಾಲ ಲಾಲ್ ಜಿ ಟಂಡನ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಲಕ್ನೋಗೆ ತೆರಳಿದ್ದರು.
ಈ ನಡುವೆ ಕೇಂದ್ರ ಗೃಹ ಸಚಿವಾಲಯ ಅನ್ ಲಾಕ್ – 3 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಆಗಸ್ಟ್ 31ರವರೆಗೆ ಶಾಲಾ – ಕಾಲೇಜುಗಳನ್ನು ತೆರೆಯಲು ಅವಕಾಶ ನೀಡಿಲ್ಲ. ಯೋಗ ಹಾಗೂ ಜಿಮ್ ಕೇಂದ್ರಗಳು ಆಗಸ್ಟ್ 5 ರಿಂದ ಪುನರಾರಂಭ ಮಾಡಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಮೊದಲು ಅನ್ ಲಾಕ್ – 2ರ ಸಂದರ್ಭದಲ್ಲಿ ಜಾರಿಯಲ್ಲಿದ್ದ ರಾತ್ರಿ ಕರ್ಫ್ಯೂವನ್ನು ತೆರವುಗೊಳಿಸಲಾಗಿದೆ.
ಎಂದಿನಂತೆ ಕಂಟೈನ್ಮೆಂಟ್ ವಲಯಗಳಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಮುಂದುವರೆಯಲಿದೆ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.