ಕೊರೊನಾ ಇಳಿಮುಖ ಜನ ತುಸು ನಿರಾಳ

ನವದೆಹಲಿ ಜನವರಿ ೨- ದೇಶಾದ್ಯಂತ ಕೊರೊನಾ ಸಾಂಕ್ರಾಮಿಕ ರೋಗದ ಅಬ್ಬರ ದಿನೇದಿನೇ ಇಳಿಮುಖವಾಗುತ್ತಿರುವುದು ಕಂಡುಬರುತ್ತಿದೆ. ಕೇವಲ ೧೯ ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿನ ತೀವ್ರತೆ ಕಡಿಮೆಯಾಗುತ್ತಿರುವುದು ದಾಖಲೆಗಳಿಂದ ತಿಳಿದುಬಂದಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಬೆಳಿಗ್ಗೆ ನೀಡಿರುವ ಅಂಕಿ ಅಂಶಗಳ ಪ್ರಕಾರ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೧೯ ಸಾವಿರದ ೭೯ ಸೋಂಕು ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು ಇದೇ ಅವಧಿಯಲ್ಲಿ ೨೨೪ ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಇದುವರೆಗೂ ದಾಖಲಾಗಿರುವ ಸೋಂಕಿತರ ಸಂಖ್ಯೆ ಒಂದು ಕೋಟಿ ೩ ಲಕ್ಷದ ೫ ಸಾವಿರದ ೭೮೮ ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಗಳಲ್ಲಿ ೨೨೪ ಸೋಂಕಿತರು ಸಾವನ್ನಪ್ಪುವ ಮೂಲಕ ಇದುವರೆಗೂ ದೇಶದಲ್ಲಿ ಮೃತಪಟ್ಟವರ ಸಂಖ್ಯೆ ಒಂದು ಲಕ್ಷದ ೪೯ ಸಾವಿರದ ೨೧೮ಕ್ಕೆ ತಲುಪಿದೆ.
ಹೊಸವರ್ಷದ ಆರಂಭದಲ್ಲಿ ಸೋಂಕಿತ ಪ್ರಕರಣಗಳು ೨೦ ಸಾವಿರಕ್ಕಿಂತ ಕಡಿಮೆ ಪ್ರಮಾಣದಲ್ಲಿ ದಾಖಲಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಈ ನಡುವೆ ಸೋಂಕಿನಿಂದ ಗುಣಮುಖ ಆಗುತ್ತಿರುವ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿದೆ.
ದೇಶದಲ್ಲಿ ಈಗ ಸಚಿವಾಲಯದ ಅಂಕಿ ಅಂಶಗಳ ಪ್ರಕಾರವೇ ೯೯ ಲಕ್ಷದ ಆರು ಸಾವಿರದ ೩೮೭ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಗುಣ ಮುಖ ಆದವ ರ ಪ್ರಮಾಣ ಶೇಕಡಾ ೯೬. ೧೨ ರಷ್ಟಿದೆ. ಇನ್ನೊಂದೆಡೆ ಸಾವಿನ ಪ್ರಮಾಣ ಶೇಕಡಾ ೧.೪೫ ರಷ್ಟು ಇದೆ ಎಂದು ಸಚಿವಾಲಯ ತಿಳಿಸಿದೆ.
ಕಳೆದ ೧೧ದಿನಗಳಿಂದ ಈಚೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಮೂರು ಲಕ್ಷಕ್ಕಿಂತ ಕಡಿಮೆ ಪ್ರಮಾಣದಲ್ಲಿ ದಾಖಲಾಗಿದ್ದು ಪ್ರಸ್ತುತ ದೇಶದಲ್ಲಿ ಎರಡು ಲಕ್ಷದ ೫೦ ೧೮೩ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ದೇಶದಲ್ಲಿ ಪತ್ತೆಯಾಗಿರುವ ಸೋಂಕಿತರ ಪ್ರಕರಣಗಳ ಪ್ರಮಾಣಕ್ಕೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಪ್ರಮಾಣ ಶೇಕಡ ೨.೪೩ ರಷ್ಟಿದೆಯೆಂದು ಸಚಿವಾಲಯ ಮಾಹಿತಿ ನೀಡಿದೆ.
ಈ ನಡುವೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-೧೯ ಲಸಿಕೆ ಆಂದೋಲನ ಕೈಗೆತ್ತಿಕೊಳ್ಳುವ ಕುರಿತಂತೆ ತಾಲೀಮು ಪ್ರಾರಂಭವಾಗಿದೆ.ಇಂದಿನಿಂದ ಈ ಪ್ರಕ್ರಿಯೆ ಆರಂಭವಾಗಿದ್ದು ಆಂದೋಲನದ ಅನುಷ್ಠಾನ ಕುರಿತ ಸವಾಲುಗಳನ್ನು ಎದುರಿಸಲು ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ.