ಕೊರೊನಾ ಇಳಿಮುಖ ಚೇತರಿಕೆ ಹೆಚ್ಚಳ


ನವದೆಹಲಿ, ಡಿ. ೨೬- ದೇಶಾದ್ಯಂತ ಕೊರೊನಾ ಸಾಂಕ್ರಾಮಿಕ ರೋಗದ ಉಪಟಳ ಮುಂದುವರೆದಿದ್ದು, ಕಳೆದ ೨೪ ಗಂಟೆಗಳ ಅವಧಿಯಲ್ಲಿ ೨೨ ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ ದಿನೇದಿನೇ ಕಡಿಮೆಯಾಗುತ್ತಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ೨೨,೨೭೩ ಸೋಂಕು ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಇದುವರೆಗೂ ದಾಖಲಾಗಿರುವ ಸೋಂಕಿತರ ಸಂಖ್ಯೆ ಒಂದು ಕೋಟಿ ೧ ಲಕ್ಷದ ೬೯ ಸಾವಿರದ ನೂರ ಹದಿನೆಂಟಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಬೆಳಗ್ಗೆ ತಿಳಿಸಿದೆ.
ಇದೇ ಅವಧಿಯಲ್ಲಿ ಮಹಾಮಾರಿಯ ಸೋಂಕಿಗೆ ೨೫೧ ದುರ್ದೈವಿ ಗಳು ಬಲಿಯಾಗಿದ್ದಾರೆ . ಇದರೊಂದಿಗೆ ಇದುವರೆಗೂ ಮೃತಪಟ್ಟವರ ಸಂಖ್ಯೆ ೧ ಲಕ್ಷದ ೪೭ ಸಾವಿರದ ೩೪೩ ಕ್ಕೆ ತಲುಪಿದೆ ಎಂದು ಸಚಿವಾಲಯ ತಿಳಿಸಿದೆ.
ಕಳೆದ ೨೪ ಗಂಟೆಗಳ ಅವಧಿಯಲ್ಲಿ ೨೨ ಸಾವಿರದ ೨೭೪ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಮನೆಗಳಿಗೆ ತೆರಳಿದ್ದಾರೆ. ಇದರೊಂದಿಗೆ ಇರುವರೆಗೂ ಗುಣಮುಖರಾದವರ ಸಂಖ್ಯೆ ೯೭ ಲಕ್ಷದ ೪೦ ಸಾವಿರದ ೧೦೮ಕ್ಕೆ ಏರಿಕೆಯಾಗಿದೆ. ಒಟ್ಟಾರೆ ದೇಶದಲ್ಲಿ ಚೇತರಿಕೆ ಪ್ರಮಾಣ ಶೇಕಡ ೯೫. ೭೮ ಕ್ಕೆ ಏರಿಕೆಯಾಗಿದೆ.
ಈ ನಡುವೆ ಮಹಾಮಾರಿ ಸೋಂಕಿಗೆ ಬಲಿಯಾಗುತ್ತಿರುವ ಜನರ ಪ್ರಮಾಣ ಕಡಿಮೆಯಾಗುತ್ತಿದ್ದು ಪ್ರಸ್ತುತ ಈ ಪ್ರಮಾಣ ಶೇಕಡ ೧.೪೫ ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಈ ನಡುವೆ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಪ್ರಸ್ತುತ ದೇಶದಲ್ಲಿ ೨ ಲಕ್ಷದ ೮೧೦೦೦ ಸಕ್ರಿಯ ಪ್ರಕರಣಗಳು ದಾಖಲಾಗಿವೆ.
ಆರೋಗ್ಯ ಸಚಿವಾಲಯದ ಮೂಲಗಳ ಪ್ರಕಾರ ೨ ಲಕ್ಷದ ೮೧ ಸಾವಿರದ ೬೬೭ ಸಕ್ರಿಯ ಪ್ರಕರಣಗಳು ದಾಖಲಾಗಿದ್ದು ಸಂಬಂಧಿತ ರೋಗಿಗಳಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಒಟ್ಟು ಸೋಂಕಿತರ ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇಕಡ ೨.೭೭ ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ. ಈ ನಡುವೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಿನ್ನೆ ೮ ಲಕ್ಷದ ೫೩ ಸಾವಿರದ ೫೨೭ ಮಾದರಿ ಪರೀಕ್ಷೆಗಳನ್ನು ನಡೆಸಿದೆ. ಇದರೊಂದಿಗೆ ಇದುವರೆಗೂ ದೇಶದಲ್ಲಿ ೧೬ ಕೋಟಿ ೭೧ಲಕ್ಷದ ೫೯ ಸಾವಿರದ ೨೮೯ ಪರೀಕ್ಷೆಗಳನ್ನು ನಡೆಸಿರುವುದಾಗಿ ಮಂಡಳಿ ತಿಳಿಸಿದೆ.
ಈ ನಡುವೆ ಮಹಾರಾಷ್ಟ್ರದಲ್ಲಿ ಸಾವಿನ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ ಕಳೆದ ೨೪ ಗಂಟೆಗಳಲ್ಲಿ ೭೧ ಮಂದಿ ಸಾವನ್ನಪ್ಪಿದ್ದಾರೆ ೩೦೦೦ಕ್ಕೂ ಅಧಿಕ ಸೋಂಕು ಪ್ರಕರಣಗಳು ದಾಖಲಾಗಿವೆ.