ಕೊರೊನಾ ಇಳಿಕೆ ಹೆಚ್ಚಿದ ಮದುವೆ ಸಂಭ್ರಮ ಚೇತರಿಕೆಯತ್ತ ಕಲ್ಯಾಣ ಮಂಟಪಗಳು

ಅರಸೀಕೆರೆ, ನ. ೧೦- ಕೋವಿಡ್-೧೯ನಿಂದ ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ಎಲ್ಲ ಕಡೆಗಳಲ್ಲೂ ಕಲ್ಯಾಣ ಮಂಟಪಗಳ ಬುಕ್ಕಿಂಗ್ ರದ್ದಾಗಿತ್ತು. ಕೆಲವು ಭಾಗದಲ್ಲಿ ಮದುವೆಗೆಂದು ಬುಕ್ಕಿಂಗ್ ಆಗಿದ್ದ ಕಲ್ಯಾಣ ಮಂಟಪಗಳು ಸದ್ಯಕ್ಕೆ ಬೇಡ ಎಂದು ಜನ ದೂರ ಉಳಿದಿದ್ದರು.
ಕಳೆದ ಕೆಲವು ದಿನಗಳಿಂದ ಕೋವಿಡ್-೧೯ ಸೋಂಕು ಇಳಿಮುಖವಾಗುತ್ತಿದೆ. ಹಾಗಾಗಿ ಮದುವೆ ಮತ್ತಿತರ ಕಾರ್ಯಕ್ರಮಗಳನ್ನು ನಡೆಸುವವರು ಸ್ವಲ್ಪ ವಿಜೃಂಭಣೆಯಿಂದ ನಡೆಸುವ ಕಡೆಗೆ ಮನಸ್ಸು ಮಾಡುತ್ತಿದ್ದಾರೆ.
ಸರ್ಕಾರದ ಮಾರ್ಗಸೂಚಕಗಳೊಂದಿಗೆ ಕಲ್ಯಾಣ ಮಂಟಪಗಳನ್ನು ಬಳಸಿಕೊಳ್ಳುವ ಅವಕಾಶ ಇರುವುದು ಕೂಡ ಇಂಥವರಿಗೆ ಅನುಕೂಲವಾಗಿದೆ. ಹಾಗಾಗಿ ಮಾರ್ಚ್‌ನಿಂದ ಮನೆಗಳಲ್ಲಿ ನಡೆದು ಹೋಗುತ್ತಿದ್ದ ವಿವಾಹ ಸಂಬಂಧಗಳನ್ನು ಈಗ ಕಲ್ಯಾಣ ಮಂಟಪಗಳಲ್ಲಿ ಸರ್ಕಾರ ನಿಗದಿಪಡಿಸಿದ ಅತಿಥಿಗಳ ಸಂಖ್ಯೆಯೊಂದಿಗೆ ನಡೆಸಲಾಗುತ್ತಿದೆ.
ಕೋವಿಡ್-೧೯ ನಂತರದ ದಿನಗಳಲ್ಲಿ ನಿಶ್ಚಿತಾರ್ಥ, ಮದುವೆ, ನಾಮಕರಣ, ಗೃಹ ಪ್ರವೇಶದಂತಹ ಶುಭ ಸಮಾರಂಭಗಳು ನಿಧಾನಕ್ಕೆ ವಿಜೃಂಭಣೆಯ ದಾರಿಗೆ ಬರುತ್ತಿರುವುದು ಇವುಗಳನ್ನೇ ನಂಬಿಕೊಂಡಿರುವ ಇತರರು ಅವರ ಮುಖದಲ್ಲಿ ನಗು ಅರಳುವಂತೆ ಮಾಡಿದೆ. ಫೋಟೋ ಗ್ರಾಫಱ್ಸ್, ಅಡುಗೆಯವರು, ಶಾಮಿಯಾನ ಬಾಡಿಗೆ ಕೊಡುವವರು, ಮಂಗಳವಾದ್ಯದವರು ಪ್ರಿಂಟಿಂಗ್ ಪ್ರೆಸ್ ಮಾಲೀಕರು ಹೂವಿನ ಅಲಂಕಾರದವರು, ಹೂವು ಹಣ್ಣು ಮಾರಾಟಗಾರರು, ಅರ್ಚಕರು, ಟ್ಯಾಕ್ಸಿ ಓಡಿಸುವವರಿಗೆ ಒಂದಿಷ್ಟು ಸಂಪಾದನೆಯ ದಾರಿ ದೊರಕಿದಂತಾಗಿದೆ. ನಿರ್ವಹಣೆಗೂ ಕಷ್ಟಪಡುತ್ತಿದ್ದ ಕಲ್ಯಾಣ ಮಂಟಪ, ಸಭಾಭವನಗಳ ನಿರ್ವಾಹಕರು ಕೂಡ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಿ ಸಹಜ ಸ್ಥಿತಿಗೆ ಬರುವ ನಿರೀಕ್ಷೆ ಹೊಂದಿದ್ದಾರೆ.
ಕೋವಿಡ್-೧೯ ಸೋಂಕಿನ ಪ್ರಮಾಣ ಕಡಿಮೆ ಆಗಿದೆಯೇ ಹೊರತು ರೋಗದ ಭೀತಿ ಇನ್ನೂ ದೂರವಾಗಿಲ್ಲ. ಹಾಗಾಗಿ ಮದುವೆ ಮತ್ತಿತರ ಸಮಾರಂಭಗಳಲ್ಲಿ ಸಂಭ್ರಮದ ಜತೆಗೆ ಮುನ್ನೆಚ್ಚರಿಕೆಯ ಅಗತ್ಯ ಎನ್ನುತ್ತಾರೆ ವೈದ್ಯರು.
ತಜ್ಞರ ಶಿಫಾರಸಿನ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೆ ತಂದಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವುದರ ಜತೆಗೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಮಾಡುವ ಮೂಲಕ ಸುರಕ್ಷಿತೆ ಕಾಪಾಡಿಕೊಳ್ಳಬೇಕು ಎನ್ನುವ ಸಲಹೆ ನೀಡುತ್ತಾರೆ ವೈದ್ಯರು.