ಕೊರೊನಾ ಆರ್ಭಟ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಗೆ ಕನ್ನಡ ಭೂಮಿ ಆಗ್ರಹ

ಕಲಬುರಗಿ:ಎ.25: ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ 2 ರೂಪಾಂತರ ಸೋಂಕು ಬಹು ಬೇಗ ಹರಡುತ್ತಿದೆ. ಇದರಿಂದ ದಿನ ನಿತ್ಯ ಸಾವುಗಳು ಸಂಭವಿಸುತ್ತಿದ್ದು, ಸಕಾಲಕ್ಕೆ ಚಿಕಿತ್ಸೆ ನೀಡಿ ಮರಣ ಸಂಖ್ಯೆ ತಡೆಗಟ್ಟಬೇಕು ಮತ್ತು ಆರೋಗ್ಯ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಬೇಕು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ಸರ್ಕಾರಕ್ಕೆ ಹಾಗೂ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.

ರಾಜ್ಯವು ಸೇರಿದಂತೆ ಜಿಲ್ಲಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚು ಪತ್ತೆಯಾಗುತ್ತಿವೆ.ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಕೊರೊನಾ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರಕದೆ ಸಾವು ಸಂಭವಿಸುತ್ತಿವೆ.ಇನ್ನು ಹಲವಾರು ರೋಗಿಗಳಿಗೆ ಹಾಸಿಗೆ, ಆಮ್ಲಜನಕ ಸಿಗದೆ ಪ್ರಾಣಬಿಟ್ಟ ಸಂಖ್ಯೆಗಳು ಹೆಚ್ಚುತ್ತಿವೆ.ರೆಂಡೆಸಿವಿರ್ ಔಷಧಿ ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ. ಇನ್ನೋಂದೆಡೆ ಸೋಂಕಿತರಿಗೆ ಸರಿಯಾದ ಉಪಚಾರ ಮಾಡುತ್ತಿಲ್ಲ.ಜಿಲ್ಲಾಂದ್ಯಂತ ಸೋಂಕು ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ.ಹಾಸಿಗೆ ಪಡೆಯಲು ಜನರು .ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ.ಕೂಡಲೇ ಜಿಲ್ಲಾಡಳಿತ ಕಲಬುರಗಿ ನಗರದಲ್ಲಿ 10 ಸಾವಿರ ಹಾಸಿಗೆ ಸಾಮರ್ಥ್ಯದ ತಾತ್ಕಾಲಿಕ ಶೆಡ್ ಆಸ್ಪತ್ರೆ ನಿರ್ಮಾಣ ಮಾಡಬೇಕು.

ಈ ಬಾರಿ ಯುವಕರು,ವಯಸ್ಕರು ಹಾಗೂ ಸಕ್ಕರೆ ಕಾಯಿಲೆ,ಅಧೀಕ ರಕ್ತದೊತ್ತಡ ಹೀಗೆ ಹಲವಾರು ಸೋಂಕಿತ ರೋಗಿಗಳಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ.ತುರ್ತು ಸಂದರ್ಭದಲ್ಲಿ ಕೂಡ ಸೋಂಕಿತರನ್ನು ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಸಾವುಗಳು ಸಂಭವಿಸುತ್ತಿವೆ.ಸರಕಾರಿ ಆಸ್ಪತ್ರೆಗಳಲ್ಲಿ ಪರಿಸ್ಥಿತಿ ಹೀಗಾದರೆ ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೆಪದಲ್ಲಿ ಸುಲಿಗೆ ಮಾಡಲಾಗುತ್ತಿದೆ.ಇಲ್ಲಿ ಕೇಂದ್ರ ಸರ್ಕಾರ ನೀಡಿರುವ ಕೊವೀಡ ಚಿಕಿತ್ಸೆ ದರಪಟ್ಟಿ ಗಾಳಿಗೆ ತೂರಿ ಮನಬಂದಂತೆ ಹಣ ಪಡೆಯುತ್ತಿದ್ದಾರೆ.ಜಿಲ್ಲಾಡಳಿತ ಹಾಗೂ ಸರಕಾರ ಕಣ್ಣು ಮುಚ್ಚಿಕೊಂಡು ಕುಳಿತಿದೆ.ಕೊರೊನಾ 2 ನೇ ವೈರಸ್ ದಿಂದ ಜನರು ತತ್ತರಿಸಿ ಹೋಗಿದ್ದಾರೆ.ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಚಿಕಿತ್ಸೆ ಪಡೆಯಲು ಜನರು ಹೊಲ, ಮನೆಗಳನ್ನು ಮಾರಿಕೊಳ್ಳುತ್ತಿದ್ದಾರೆ.ಕಲವೋಂದು ಪ್ರಕರಣಗಳಲ್ಲಿ ಹಣ ಸುರಿದರೂ ಜೀವ ಉಳಿಸಿಕೊಳ್ಳದೆ ನೋವು ಅನುಭವಿಸುತ್ತಿದ್ದಾರೆ.ಇದಕ್ಕೇಲ್ಲಾ ಸರ್ಕಾರದ ವಿಫಲ ನೀತಿ ಹಾಗೂ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ನಿರ್ಲಕ್ಷ್ಯ ಧೋರಣೆಯೇ ಕಾರಣ.ಇನ್ನಾದರೂ ಜಿಲ್ಲಾಧಿಕಾರಿಗಳು ಸಕಾಲಕ್ಕೆ ಚಿಕಿತ್ಸೆ ಕೊಡಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.