ಕೊರೊನಾ ಆತಂಕ : ಚುನಾವಣಾ ಸಿಬ್ಬಂದಿಗೆ ಪಿಪಿಇ ಕಿಟ್ – ಶೇ.75ಕ್ಕೂ ಅಧಿಕ ಮತದಾನ

ಈಶಾನ್ಯ ಶಿಕ್ಷಕರ ಕ್ಷೇತ್ರ : ಶಾಂತಿಯುತ ಕೆಲವೆಡೆ ಮಂದ – ಬಿರುಸು ಮತದಾನ

 • ರಾಯಚೂರು.ಅ.28- ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಜಿಲ್ಲೆಯಾದ್ಯಂತ ಅತ್ಯಂತ ಉರುಪಿನಿಂದ ಮತದಾನ ನಡೆಯಿತು.
  ಕೊರೊನಾ ಮಹಾಮಾರಿಯ ಭೀತಿಯ ಮಧ್ಯೆ ಈ ಚುನಾವಣೆಯನ್ನು ಎಲ್ಲೆಡೆ ಮುಂಜಾಗ್ರತಾ ಕ್ರಮಗಳೊಂದಿಗೆ ನಿರ್ವಹಿಸಲಾಯಿತು. ಕೊರೊನಾ ಆತಂಕ ಮತ್ತು ಚುನಾವಣೆಯ ಅಕ್ರಮ ಮುಕ್ತವಾಗಿ ಅತ್ಯಂತ ಶಾಂತಿ ಸುವ್ಯವಸ್ಥೆಯೊಂದಿಗೆ ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆ ಮತದಾನ ನಡೆಯಿತು. ಒಟ್ಟು 3528 ಮತದಾರರು ಜಿಲ್ಲೆಯಲ್ಲಿದ್ದು, 2423 ಪುರುಷರು ಮತ್ತು 1104 ಮಹಿಳಾ ಮತದಾರರನ್ನು ಈ ಕ್ಷೇತ್ರ ಹೊಂದಿದೆ. ಮತದಾನಕ್ಕಾಗಿ ಒಟ್ಟು ಐವರು ಈ ಕ್ಷೇತ್ರಕ್ಕೆ ಸ್ಪರ್ಧಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ಹಾಲಿ ವಿಧಾನ ಪರಿಷತ್ ಸದಸ್ಯರಾದ ಶರಣಪ್ಪ ಮಟ್ಟೂರು, ಬಿಜೆಪಿಯಿಂದ ಶಶಿಲ್ ಜೀ ನಮೋಶಿ, ಜಾದಳ ಪಕ್ಷದಿಂದ ತಿಮ್ಮಯ್ಯ ಪುರ್ಲೆ, ಕನ್ನಡ ಚಳುವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ ಹಾಗೂ ಪಕ್ಷೇತರರಾಗಿ ಡಾ.ಚಂದ್ರಕಾಂತ ಸಿಂಗೆ ಅವರು ಕಣದಲ್ಲಿದ್ದರು.
  ಕೊರೊನಾ ಭೀತಿ ಮತದಾನದ ಮೇಲೆ ಯಾವುದೇ ಪರಿಣಾಮ ಬೀರದಿರಲೆಂಬ ಉದ್ದೇಶದಿಂದ ಚುನಾವಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು. ಜಿಲ್ಲೆಯಲ್ಲಿ ಒಟ್ಟು 17 ಕೇಂದ್ರಗಳನ್ನು ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರಾಯಚೂರು 5, ಲಿಂಗಸೂಗೂರು-ದೇವದುರ್ಗ ತಲಾ 4, ಸಿಂಧನೂರು 1 ಮತ್ತು ಮಾನ್ವಿ 3 ಮತ ಕೇಂದ್ರಗಳನ್ನು ತೆರೆಯಲಾಗಿತ್ತು. 7 ಸೂಕ್ಷ್ಮ, 2 ಅತಿಸೂಕ್ಷ್ಮ ಮತಗಟ್ಟೆಗಳು ಸೇರಿದಂತೆ ಎಲ್ಲೆಡೆಯೂ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
  ಮತದಾನಕ್ಕಾಗಿ ಆಗಮಿಸುವವರಿಗೆ ಕೊರೊನಾದ ಯಾವುದೇ ಸೋಂಕು ಹರಡದಂತೆ ತಡೆಯಲು ಅನೇಕ ಕಡೆ ಪಿಪಿಇ ಕಿಟ್ ವ್ಯವಸ್ಥೆ ಮಾಡಲಾಗಿತ್ತು.
  ಅಲ್ಲದೇ, ಮತದಾನಕ್ಕಾಗಿ ಬರುವವರಿಗೆ ಕನಿಷ್ಟ ದೂರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಮುಂಜಾನೆ ಮತದಾನ ನಿಧಾನಕ್ಕೆ ನಡೆದರು, ಮಧ್ಯಾಹ್ನದ ವೇಳೆಗೆ ಮತದಾನದ ಪ್ರಮಾಣ ತೀವ್ರಗೊಂಡು 12 ಗಂಟೆಗೆ ಜಿಲ್ಲೆಯಲ್ಲಿ ಶೇ.41 ರಷ್ಟು ಮತದಾನ ಪೂರ್ಣಗೊಂಡಿತು. ರಾಜಕೀಯ ಪಕ್ಷಗಳು ಮತಗಟ್ಟೆಗಳ ಅಕ್ಕಪಕ್ಕದಲ್ಲಿ ಟೆಂಟ್ ಹಾಕಿ ಕುಳಿತುಕೊಂಡಿದ್ದರು. ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳ ಬಗ್ಗೆ ವರದಿಯಾಗಿಲ್ಲ. ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಆರ್.ವೆಂಕಟೇಶ ಕುಮಾರ ಅನೇಕ ಮತಗಟ್ಟೆಗಳಿಗೆ ಭೇಟಿ ನೀಡಿ, ಅಲ್ಲಿಯ ಸ್ಥಿತಿ ಗತಿ ಪರಿಶೀಲಿಸಿದರು.
  ವಿಕಲಚೇತನರು ಮತಗಟ್ಟೆಗೆ ಬಂದರೇ ಅವರ ಮತದಾನಕ್ಕೆ ಯಾವುದೇ ತೊಂದರೆಯಾಗದಂತೆ ವೀಲ್ ಚೇರ್ ಸಹ ವ್ಯವಸ್ಥೆ ಮಾಡಲಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ ಮತದಾನಕ್ಕೆ ಹೆಚ್ಚಿನ ಶಿಕ್ಷಕರು ಗೈರು ಆಗಬಹುದೆಂದು ಅಂದಾಜು ಮಾಡಲಾಗಿತ್ತು. ಆದರೆ, ಆಯಾ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ಮತ್ತು ಮತದಾನಕ್ಕೆ ಹೆಚ್ಚಿನ ಜನರನ್ನು ಕರೆತರುವ ಪ್ರಯತ್ನದ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಶೇ.69 ರಷ್ಟು ಮತದಾನ ಪೂರ್ಣಗೊಂ‌ಡಿತು. ಈ ಮತದಾನದ ತೀವ್ರತೆ ಗಮನಿಸಿದರೇ, ಶೇ.75 ಕ್ಕೂ ಅಧಿಕ ಮತದಾನ ನಡೆಯುವ ನಿರೀಕ್ಷೆ ಹೊಂದಲಾಗಿದೆ. ಹಿನ್ನೆಲೆಯಲ್ಲಿ ಮಧ್ಯಾಹ್ನದವರೆಗೂ ಎಲ್ಲಿಯೂ ಸಹ ಯಾವುದೇ ಅಹಿತಕರ ಘಟನೆಯ ಮಾಹಿತಿ ದೊರೆಯಲಿಲ್ಲ.
  ಮತದಾನ ಕೇಂದ್ರದಿಂದ ಎಲ್ಲರೂ ನಿರ್ದಿಷ್ಟ ಅಡಿಗಳವರೆಗೂ ನಿಷೇಧವೇರಿದ್ದರಿಂದ ರಾಜಕೀಯ ಪಕ್ಷಗಳು ನಿಷೇಧಿತ ಪ್ರದೇಶದಿಂದಲೇ ದೂರ ಉಳಿದು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ನಿನ್ನೆ ರಾತ್ರಿ ಕೆಲವೆಡೆ ಪ್ರಮುಖ ಅಭ್ಯರ್ಥಿಗಳು ಮತದಾನಕ್ಕೆ 500 ರೂ. ಹಣ ಹಂಚಿಕೆ ಮಾಡಿದ್ದರು ಎನ್ನುವ ಮಾಹಿತಿ ಇದೆ. ಸುಶಿಕ್ಷಿತ ಈ ಕ್ಷೇತ್ರದಲ್ಲಿ ಈ ಚುನಾವಣೆಯಲ್ಲಿಯೂ ನೋಟೀಗೆ ಓಟು ನಡೆದಿರುವುದು ಗಮನಾರ್ಹವಾಗಿದೆ. ಕೆಲವೆಡೆ ಶಿಕ್ಷಕರನ್ನು ಮತಗಟ್ಟೆಗೆ ಕರೆತರಲು ವಾಹನ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಾ ಮತಗಟ್ಟೆಗಳಲ್ಲೂ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.