ಕೊರೊನಾ ಅಬ್ಬರ ಇಳಿಮುಖ

ನವದೆಹಲಿ, ಅ. ೨೬. ದೇಶದಲ್ಲಿ ಕೊರೋನಾ ಮಹಾಮಾರಿಯ ಅಬ್ಬರ ಇಳಿಮುಖವಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುವಂತೆ ಆಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ೫೦ ಸಾವಿರಕ್ಕಿಂತ ಕಡಿಮೆ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಪತ್ತೆಯಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಬೆಳಗ್ಗೆ ನೀಡಿರುವ ಮಾಹಿತಿ ಪ್ರಕಾರ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಕೇವಲ ೪೫ ಸಾವಿರದ ೧೪೯ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ ೭೯ ಲಕ್ಷದ ೯ ಸಾವಿರದ ೯೬೦ ಕೆ ಏರಿಕೆಯಾಗಿದೆ.

ಮಹಾಮಾರಿ ಸೋಂಕಿಗೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೪೮೦ ದುರ್ದೈವಿಗಳು ಬಲಿಯಾಗಿದ್ದು, ಜುಲೈನಿಂದ ಈಚೆಗೆ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಸಾವು ಸಂಭವಿಸಿರುವುದು ಇದೇ ಮೊದಲಾಗಿದೆ.

ಇದುವರೆಗೂ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಒಂದು ಲಕ್ಷದ ಹತ್ತೊಂಬತ್ತು ಸಾವಿರದ ೧೪. ತಲುಪಿದೆ. ಇದೇ ಅವಧಿಯಲ್ಲಿ ೫೯ ಸಾವಿರದ ೧೦೫ ರೋಗಿಗಳು ಚೇತರಿಕೆ ಯಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.

ಇದರೊಂದಿಗೆ ದೇಶದಲ್ಲಿ ಇದುವರೆಗೂ ಗುಣಮುಖರಾದ ಅದೃಷ್ಟವಂತರ ಸಂಖ್ಯೆ ೭೧ ಲಕ್ಷದ ೩೭ ಸಾವಿರದ ೨೨೯ಕ್ಕೆ ತಲುಪಿದೆ
ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯು ಇಳಿಮುಖವಾಗುತ್ತಿದ್ದು ಪ್ರಸ್ತುತ ೬ ಲಕ್ಷದ ೫೩ ಸಾವಿರದ ೨೧೭ ಪ್ರಕರಣಗಳು ದಾಖಲಾಗಿದ್ದು ಸಂಬಂಧಿತ ರೋಗಿಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ೧೪ ಸಾವಿರದ ೪೩೭ ಸಕ್ರಿಯ ಪ್ರಕರಣಗಳು ಕಡಿಮೆಯಾಗಿದ್ದು ಇಷ್ಟು ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಗೆ ತೆರಳಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲಿ ಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಸೋಂಕು ಜಾಡು ಪತ್ತೆ ಮಾಡುವುದು, ಸೋಂಕಿರುವುದು ಖಚಿತವಾದ ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿ ಸೂಕ್ತ ಚಿಕಿತ್ಸೆ ಕೊಡಿಸುವ ಕಾರ್ಯಾಚರಣೆ ಇಂದಾಗಿ ಇದು ಸಾಧ್ಯವಾಗಿದೆ.

ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖ ಆಗುತ್ತಿರುವುದು ಶುಭಸೂಚಕವಾಗಿದೆ ಎಂದರೂ ತಪ್ಪಾಗಲಾರದು. ದೆಹಲಿಯಲ್ಲಿ ಇತ್ತೀಚಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಇಳಿಮುಖ ಆಗುತ್ತಿದ್ದುದು ಕಂಡುಬಂದಿತ್ತು. ಆದರೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ರಾಷ್ಟ್ರರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ನಡುವೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ವತಿಯಿಂದ ನಿನ್ನೆವರೆಗೂ ೧೦ ಕೋಟಿ ೩೪ ಲಕ್ಷದ ೬೨ ಸಾವಿರದ ೭೭೮ ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದೆ.

ಮತ್ತೊಂದೆಡೆ ಕೋರೋ ನಾ ಸೋಂಕಿನಿಂದ ಆಸ್ಪತ್ರೆಗೆ ಸೇರಿದ್ದ ಸಮಾಜವಾದಿ ಪಕ್ಷದ ಮಾಜಿ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ಅವರನ್ನು ಅವರ ಪುತ್ರ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತಿತರರು ಬರಮಾಡಿಕೊಂಡರು.

ಕಳೆದೆರಡು ದಿನಗಳಿಂದ ಅಮೆರಿಕದಲ್ಲೂ ಹೊಸ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಅಲ್ಲಿನ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗುವಂತೆ ಮಾಡಿದೆ. ಪರಿಸ್ಥಿತಿ ಹೀಗಿದ್ದರೂ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ.

ಅಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲು ಡೊನಾಲ್ಡ್ ಟ್ರಂಪ್ ಹೆಣಗಾಡುತ್ತಿದ್ದಾರೆ, ಶತಾಯಗತಾಯ ಅವರನ್ನು ಸೋಲಿಸಿ ಅಧಿಕಾರಕ್ಕೆ ಬರಬೇಕೆಂದು ಪ್ರತಿಸ್ಪರ್ಧಿ ಜೋ ಬಿಡೆನ್ ಅವರು ಸರ್ವ ಪ್ರಯತ್ನ ಮಾಡುತ್ತಿದ್ದಾರೆ.