ಕೊರೊನಾ ಅಬ್ಬರ ; ಅದ್ದೂರಿ ಮದುವೆಗೆ ದೆಹಲಿ ಬ್ರೇಕ್

ನವದೆಹಲಿ ನವೆಂಬರ್ ೧೯. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತೀವ್ರ ಆತಂಕಕ್ಕೆ ಸಿಲುಕಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ, ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಮದುವೆ ಸಮಾರಂಭಗಳಿಗೆ ಕೇವಲ ೫೦ ಜನ ಮಾತ್ರ ಭಾಗವಹಿಸಲು ಅವಕಾಶ ನೀಡಿ ಆದೇಶ ಹೊರಡಿಸಿದೆ.
ಈ ಮೊದಲು ಮದುವೆಯ ಸಮಾರಂಭಗಳಲ್ಲಿ ಸುಮಾರು ೨೦೦ ಮಂದಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಇತ್ತೀಚೆಗೆ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಸಂಖ್ಯೆಯನ್ನು ಐವತ್ತಕ್ಕೆ ಸೀಮಿತಗೊಳಿಸಿ ಸರ್ಕಾರ ಹೊಸ ಆದೇಶ ಹೊರಡಿಸಿದೆ.
ದೆಹಲಿಯಲ್ಲಿ ಬುಧವಾರ ಏಳು ಸಾವಿರದ ೪೮೬ ಹೊಸ ಸೋಂಪು ಪ್ರಕರಣಗಳು ದಾಖಲಾಗಿದ್ದು, ಒಂದೇ ದಿನದ ಅವಧಿಯಲ್ಲಿ ೧೩೧ ಸೋಂಕಿತರು ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ೫ ಲಕ್ಷ ದಾಟಿದೆ . ಇದುವರೆಗೂ ಏಳು ಸಾವಿರದ ೯೪೩ ಜನರು ಸಾವನ್ನಪ್ಪಿದ್ದಾರೆ.
ಹಿಂದಿನ ದಿನ ೬೨ ಸಾವಿರಕ್ಕೂ ಹೆಚ್ಚು ಸೋಂಕು ಪರೀಕ್ಷೆಗಳನ್ನು ನಡೆಸಲಾಗಿದ್ದು ಪಾಸಿಟಿವಿಟಿ ದರ ಶೇಕಡ ಹೆಚ್ಚಾಗಿದೆ. ಸಾಲು ಸಾಲು ಹಬ್ಬಗಳು ಹಾಗೂ ದೆಹಲಿಯಲ್ಲಿ ಮಾಲಿನ್ಯ ಹೆಚ್ಚುತ್ತಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತದೆ ಎಂದು ದೆಹಲಿಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.
ನವೆಂಬರ್ ೧೧ರಂದು ಒಂದೇ ದಿನದ ಅವಧಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಅಂದರೆ ಎಂಟು ಸಾವಿರದ ೫೯೩ ಪ್ರಕರಣಗಳು ದಾಖಲಾಗಿದ್ದವು. ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ ೪೨ ಸಾವಿರದಿಂದ ೪೦ ಸಾವಿರದ೪೫೮ ಕ್ಕೆ ತಲುಪಿದೆ.
ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ ರಾಷ್ಟ್ರರಾಜಧಾನಿಯಲ್ಲಿ ೫ ಲಕ್ಷದ ೩ ಸಾವಿರದ ೮೪ ಪ್ರಕರಣಗಳು ದಾಖಲಾಗಿವೆ. ಸಾಂಕ್ರಾಮಿಕ ರೋಗದ ತೀವ್ರತೆ ಹೆಚ್ಚು ಆಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಮಾರುಕಟ್ಟೆಗಳಲ್ಲಿ ಲಾಕ್ ಡೌನ್ ಜಾರಿಮಾಡಲು ಅಧಿಕಾರಿಗಳು ಚಿಂತನೆ ನಡೆಸಿದ್ದರು.
ದೇಶದ ಇತರ ಕಡೆಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದ ರೆ, ದೆಹಲಿಯಲ್ಲಿ ಮಾತ್ರ ಸೋಂಕಿತರ ಸಂಖ್ಯೆ ಏರುಮುಖದಲ್ಲಿ ಸಾಗುತ್ತಿರುವುದು ನಗರವಾಸಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗಳಿಗೆ ಮುಗಿಬಿದ್ದಿದ್ದು ಇದರ ಜೊತೆಗೆ ವಾಯುಮಾಲಿನ್ಯ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಜನರು ಕಡ್ಡಾಯವಾಗಿ ಮಾಸಿಕಗಳನ್ನು ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆದು ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ.