ಕೊರೊನಾ ಅಪಾಯ ತಪ್ಪಲ್ಲ: ಬಿಎಸ್‌ವೈ


ಬೆಂಗಳೂರು, ಡಿ. ೩೦- ರಾಜ್ಯದಲ್ಲಿ ರೂಪಾಂತರ ಕೊರೊನಾ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಯಥಾವತ್ತಾಗಿ ಜಾರಿಗೊಳಿಸಲಾಗುವುದು. ಅಗತ್ಯಬಿದ್ದರೆ ಮಾತ್ರ ಮಾರ್ಗಸೂಚಿ ಬದಲಾವಣೆ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಅಪಾಯ ಇನ್ನು ತಗ್ಗಿಲ್ಲ. ಹೊಸ ವರ್ಷಕ್ಕೆ ಕಾಲಿಡುತ್ತಿರುವ ಈ ಹೊತ್ತಿನಲ್ಲಿ ಸಾಂಕ್ರಾಮಿಕದ ಬಗ್ಗೆ ಕಿಂಚಿತ್ತೂ ನಿರ್ಲಕ್ಷ್ಯ ಬೇಡ ಎಂದರು.
ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಪಾಲಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸಹಕರಿಸಿ ಎಂದು ಮುಖ್ಯಮಂತ್ರಿಗಳು ಜನರಲ್ಲಿ ಮನವಿ ಮಾಡಿದರು. ರೂಪಾಂತರ ವೈರಸ್ ದೇಶದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರಸರ್ಕಾರ ಮಾರ್ಗಸೂಚಿಯನ್ನು ಯಥಾವತ್ ಜಾರಿಗೊಳಿಸಲಾಗುವುದು. ಅಗತ್ಯವಿದ್ದರೆ ಮಾತ್ರ ಮಾರ್ಗಸೂಚಿ ಬದಲಾವಣೆ ಮಾಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ಕಳೆದ ಎರಡು ತಿಂಗಳಿಂದ ಬ್ರಿಟನ್ ಸೇರಿ ವಿದೇಶದಿಂದ ಆಗಮಿಸುವವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ವಿದೇಶದಿಂದ ಬಂದ ಕೆಲವರು ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಈ ರೀತಿ ಮಾಡುವುದು ಬೇಡ. ಕೋವಿಡ್ ಪರೀಕ್ಷೆಗೆ ಒಳಗಾಗಿ ಸರ್ಕಾರದ ಜತೆ ಸಹಕರಿಸಬೇಕು ಎಂದು ಅವರು ಹೇಳಿದರು.