ಕೊರೊನಾ ಅನಾಥರ ರಕ್ಷಣೆ ನಮ್ಮ ಹೊಣೆ

ಬೆಂಗಳೂರು,ಜೂ. ೩- ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡು ದುಃಖದಲ್ಲಿರುವ ಮಕ್ಕಳ ಸಂಕಷ್ಟದಲ್ಲಿ ಭಾಗಿಯಾಗಿ ಅವರ ನೆರವಿಗೆ ನಿಲ್ಲುವುದು ನಮ್ಮ ಕರ್ತವ್ಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳು ಮತ್ತು ಅವರ ಪಾಲನೆ ಮಾಡುತ್ತಿರುವ ಪಾಲಕರ ಜತೆಗೆ ಇಂದು ವೀಡಿಯೊ ಸಂವಾದ ನಡೆಸಿದ ಅವರು, ಈ ಮಕ್ಕಳ ಜತೆ ಸರ್ಕಾರವಿದೆ. ಅವರ ನೆರವಿಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.
ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಪಾಲನೆ ಮಾಡುತ್ತಿರುವ ಪಾಲಕರಿಗೆ ಸಾಂತ್ವನ ಹೇಳಿ ಅವರಿಗೆ ಧೈರ್ಯ ತುಂಬಿದ ಅವರು, ಇಂತಹ ಮಕ್ಕಳಿಗೆ ಸರ್ಕಾರ ನೀಡುತ್ತಿರುವ ಸವಲತ್ತು ಸೌಲಭ್ಯಗಳ ಮಾಹಿತಿಯನ್ನು ನೀಡಿದರು.
ಸಚಿವೆ ಶಶಿಕಲಾ ಜೊಲ್ಲೆ ಅವರು ೩ ಗಂಟೆಗೂ ಹೆಚ್ಚು ಕಾಲ ವಿವಿಧ ಜಿಲ್ಲೆಗಳ ಪೋಷಕರನ್ನು ಕಳೆದುಕೊಂಡಿರುವ ೧೯ ಮಕ್ಕಳ ಜತೆಗೂ ಸಚಿವೆ ಜೊಲ್ಲೆ ಅವರು ಮಾತುಕತೆ ನಡೆಸಿ ಪ್ರತಿಯೊಬ್ಬ ಮಗುವಿನ ಜೊತೆಯೂ ವೈಯಕ್ತಿಕವಾಗಿ ಮಾತನಾಡಿ, ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಕಷ್ಟಗಳನ್ನು ಆಲಿಸಿದರು.
ನಿಮ್ಮ ನೆರವಿಗೆ ಸರ್ಕಾರವಿದೆ. ಈ ಕಷ್ಟದ ಸಂದರ್ಭದಲ್ಲಿ ದೃತಿಗೆಡದೆ ಜೀವನದ ಸವಾಲುಗಳನ್ನು ಎದುರಿಸಿ ಸಮಾಜದಲ್ಲಿ ಗಣ್ಯ ವ್ಯಕ್ತಗಳಾಗಿ ಬೆಳೆಯುವಂತೆಯು ಸಚಿವೆ ಜೊಲ್ಲೆ ಅವರು ಮಕ್ಕಳಿಗೆ ಕಿವಿಮಾತು ಹೇಳಿದರು.
ಮಕ್ಕಳ ಕಷ್ಟಗಳನ್ನು ಆಲಿಸುವಾಗ ಭಾವುಕರಾದ ಅವರು, ಮಕ್ಕಳ ನೋವು ಕಂಡು ಮನಸ್ಸು ಭಾರವಾಯಿತು. ಇಂತಹ ಮಕ್ಕಳಿಗೆ ಪೋಷಕರು ಇಲ್ಲ ಎಂಬ ಕೊರತೆ ಉಂಟಾಗದಂತೆ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದರು.
ಇಂತಹ ಮಕ್ಕಳಿಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗಾಗಲೇ ಬಾಲಸೇವಾ ಯೋಜನೆಯನ್ನು ಘೋಷಿಸಿದ್ದಾರೆ, ಈ ಯೋಜನೆಯಡಿ ಸಿಗಬೇಕಾದ ಸೌಲಭ್ಯಗಳನು ಅತಿ ಶೀಘ್ರವಾಗಿ ಎಲ್ಲರಿಗೂ ತಲುಪುವಂತೆ ಮಾಡುತ್ತೇವೆ ಎಂದರು.
ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಮಾಸಿಕ ೩,೫೦೦ ರೂ. ಮತ್ತು ೧೦ ವರ್ಷಧ ಮಕ್ಕಳ ಶಿಕ್ಷಣಕ್ಕೆ ಸರ್ಕಾರಿ ವಸತಿ ಶಾಲೆಗಳಲ್ಲಿ ವ್ಯವಸ್ಥೆ ಮಾಡುವುದು, ೨೧ ವರ್ಷ ಪೂರೈಸಿರುವ ಹೆಣ್ಣು ಮಕ್ಕಳಿಗೆ ೧ ಲಕ್ಷ ರೂ.ಗಳ ಸಹಾಯಧನವನ್ನು ಅವರ ಖಾತೆಗಳಿಗೆ ತಲುಪಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಈ ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಮಧ್ಯವರ್ತಿಗಳ ಹಾವಳಿಯಾಗದಂತೆ ಎಚ್ಚರವಹಿಸಲಾಗುವುದು ಎಂದು ಅವರು ಹೇಳಿದರು.
ಈ ವೀಡಿಯೊ ಸಂವಾದ ಸಂದರ್ಭದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕಿ ಪಲ್ಲವಿ ಅಕೃತಿ, ನೋಡೆಲ್ ಅಧಿಕಾರಿ ಮೋಹನ್‌ರಾಜ್, ವಿವಿಧ ಜಿಲ್ಲೆಗಳ ಡಿಸಿಪಿಓ ಹಾಗೂ ಸಿಡಿಪಿಓ ಉಪಸ್ಥಿತರಿದ್ದರು.