ಕೊರೊನಾದಿಂದ ಸಚಿವ ಪ್ರಭು ಚವ್ಹಾಣ್ ಗುಣಮುಖ: ವೈದ್ಯರಿಗೆ ಅಭಿನಂದನೆ

ಬೀದರ:ಸೆ.16: ಪಶು ಸಂಗೋಪನೆ, ಹಜ್, ವಕ್ಫ್ ಮತ್ತು ಬೀದರ್-ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಚಿಕಿತ್ಸೆ ನೀಡಿದ ವೈದ್ಯರು ಮತ್ತು ಸಿಬ್ಬಂದಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಕೋವಿಡ್ ಸೋಂಕು ದೃಢಪಟ್ಟ ಕೂಡಲೇ ಸರ್ಕಾರಿ ಆಸ್ಪತ್ರೆ ಔರಾದ್‍ಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆದಿರುತ್ತೇನೆ. ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಬ್ರಿಮ್ಸ್ ಬೀದರ್‍ನಲ್ಲಿ ವಿವಿಧ ಪರೀಕ್ಷೆಗಳನ್ನು ಹಾಗೂ ಮರು ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳಲಾಯಿತು. ಮರು ಪರೀಕ್ಷೆಯ ವರದಿ ನೆಗೇಟಿವ್ ಬಂದಿದೆ. ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಮತ್ತು ಬ್ರಿಮ್ಸ್ ವೈದ್ಯರು ನಿರಂತರ ಸಂಪರ್ಕದಲ್ಲಿದ್ದು, ಚಿಕಿತ್ಸೆ ನೀಡಿರುವುದರಿಂದ ಬೇಗ ಗುಣಮುಖನಾಗಲು ಸಾಧ್ಯವಾಗಿದೆ. ಸದ್ಯ ಅಶಕ್ತತೆ ಹೊರತುಪಡಿಸಿದರೆ ಬೇರೆ ರೋಗ ಲಕ್ಷಣಗಳಿಲ್ಲ. ಆದರೂ ವೈದ್ಯರ ಸಲಹೆಯಂತೆ ಮೂರು ವಾರಗಳವರೆಗೆ ಹೋಮ್ ಕ್ವಾರಂಟೈನ್‍ನಲ್ಲಿರುವುದಾಗಿ ತಿಳಿಸಿದ್ದಾರೆ.
ಜಿಲ್ಲೆಯ ಜನತೆಗೆ ಅಭಿನಂದನೆಗಳು: ಸಚಿವರು ಇಚ್ಛಾಪೂರ್ತಿ ಜಗದಂಬಾ ತಾಯಿಯ ಭಕ್ತರಾಗಿದ್ದು, ತಾಯಿಯ ಹಾಗೂ ತಮ್ಮ ಗುರುಗಳ ಆಶೀರ್ವಾದ ಮತ್ತು ಜಿಲ್ಲೆಯ ಸಮಸ್ತ ನಾಗರಿಕರ ಶುಭಹಾರೈಕೆಯಿಂದ ಕೋವಿಡ್ ಸೋಂಕು ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ. ತಮ್ಮ ಆರೋಗ್ಯಕ್ಕಾಗಿ ಹಾರೈಸಿದ ಕಾರ್ಯಕರ್ತರು, ಬಂಧುಗಳು, ಸ್ನೇಹಿತರು, ಹಿತೈಶಿಗಳು ಮತ್ತು ಅಭಿಮಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ರೋಗಿಗಳಿಗೆ ಸಲಹೆ: ಕೊರೊನಾ ಪೀಡಿತರು ಯಾರಾದರೂ ತಮ್ಮ ಸಂಪರ್ಕಕ್ಕೆ ಬಂದಲ್ಲಿ ಕೂಡಲೇ ತಪಾಸಣೆಗೆ ಒಳಗಾಗಬೇಕು. ಕೊರೊನಾ ಸೋಂಕಿತರು ಯಾವುದೇ ಕಾರಣಕ್ಕೂ ಭಯಭೀತರಾಗಬಾರದು. ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ಪಡೆಯುವುದರಿಂದ ಬೇಗ ಗುಣಮುಖರಾಗಲು ಸಾಧ್ಯವಿದೆ. ಸೋಂಕು ಇರುವುದು ಖಚಿತವಾದಲ್ಲಿ ವಿಳಂಬ ಮಾಡದೇ ತಕ್ಷಣ ಚಿಕಿತ್ಸೆ ಆರಂಭಿಸಬೇಕು. ಬೀದರ ಬ್ರಿಮ್ಸ್ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ರೋಗಿಯ ಚಿಕಿತ್ಸೆಗೆ ಬ್ರಿಮ್ಸ್ ಆಸ್ಪತ್ರೆಯಲ್ಲಿ ಸಕಲ ಸೌಲಭ್ಯಗಳು ಇವೆ. ನುರಿತ ವೈದ್ಯರಿಂದ ಚಿಕಿತ್ಸೆ ಲಭ್ಯವಿದೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ ನಿಸ್ಸಂಕೋಚವಾಗಿ ಚಿಕಿತ್ಸೆ ಪಡೆಯಬಹುದು ಎಂದು ಸಚಿವರು ಮನವಿ ಮಾಡಿದ್ದಾರೆ.
ಆರೋಗ್ಯಾಧಿಕಾರಿಗಳಿಗೆ ಸೂಚನೆ: ಕೊರೊನಾ ಸೋಂಕು ನಿಯಂತ್ರಣದಲ್ಲಿ ವೈದ್ಯರ ಪಾತ್ರ ಅಮೋಘವಾಗಿರುತ್ತದೆ. ಬೀದರ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ತರಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಬ್ರಿಮ್ಸ್ ವೈದ್ಯರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಇದನ್ನು ಹೀಗೆಯೇ ಮುಂದುವರೆಸಿ ಜಿಲ್ಲೆಯನ್ನು ಕೊರೊನಾದಿಂದ ಮುಕ್ತವಾಗಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.