ಕೊರೊನಾದಿಂದ ಮೃತಪಟ್ಟವರ ಲೆಕ್ಕ ಅನುಮಾನಕ್ಕೆಡೆ:ಖಂಡ್ರೆ

ಬೆಂಗಳೂರು, ಏ.29-ರಾಜ್ಯ ಸರ್ಕಾರ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆಯನ್ನು ಮರೆ ಮಾಚಿ, ಸುಳ್ಳು ಅಂಕಿ ಸಂಖ್ಯೆ ನೀಡಿದರೆ ಅದರಿಂದ ರಾಜ್ಯಕ್ಕೇ ಅನ್ಯಾಯವಾಗುತ್ತದೆ, ಕೇಂದ್ರ ಸರ್ಕಾರ ಹಂಚಿಕೆ ಮಾಡುವ ಆಕ್ಸಿಜನ್ ಮತ್ತು ರೆಮ್ಡಿಸಿವೀರ್, ಟೊಸಿಲಿಜುಮಾಬ್, ಫೆವಿಪಿರವಿರ್ ಖೋಟಾ ಪ್ರಮಾಣ ಕಡಿಮೆ ಮಾಡುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.
ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಯ ಅಧಿಕಾರಿಗಳು ಕೋವಿಡ್ 2ನೇ ಅಲೆಯನ್ನು ಎದುರಿಸಲು ಸೂಕ್ತ ಪೂರ್ವಸಿದ್ಧತೆ ಮಾಡಿಕೊಳ್ಳದೆ ತಾವೇ ಮಾಡಿರುವ ಲೋಪವನ್ನು ಮರೆ ಮಾಚಲು, ಸೋಂಕಿನ ಸಂಖ್ಯೆ ಮತ್ತು ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಿ ವರದಿ ನೀಡುತ್ತಿದ್ದಾರೆ. ನಿಖರ ಮಾಹಿತಿಯನ್ನು ನೀಡಿದರೆ ಜನತೆ ಭಯಭೀತರಾಗುತ್ತಾರೆ ಎಂಬ ಸಬೂಬು ಹೇಳಲಾಗುತ್ತಿದೆ ಎಂದು ಅವರು ದೂರಿದ್ದಾರೆ.
ಆದರೆ ಸತ್ಯ ತಿಳಿದರೆ ಜನ ಭೀತಿಗೊಳ್ಳುವ ಬದಲಾಗಿ ಜಾಗೃತರಾಗಿ ತಮ್ಮ ಜೀವವನ್ನು ತಾವು ಕಾಪಾಡಿಕೊಳ್ಳಲು ಮನೆಯಲ್ಲೇ ಉಳಿಯುತ್ತಾರೆ, ಲಸಿಕೆ ಪಡೆಯುತ್ತಾರೆ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುತ್ತಾರೆ ಆ ಮೂಲಕ ಸೋಂಕು ತಾಗದಂತೆ ಎಚ್ಚರವಹಿಸಲು ಮುಂದಾಗುತ್ತಾರೆ ಎಂದು ಖಂಡ್ರೆ ಹೇಳಿದ್ದಾರೆ.
ಆರೋಗ್ಯ ಇಲಾಖೆ ಸಾವಿನ ಸಂಖ್ಯೆಯಲ್ಲಿ ಸುಳ್ಳು ಹೇಳುತ್ತಿದೆ ಎಂಬುದಕ್ಕೆ ಪುಷ್ಟಿ ನೀಡಿರುವ ಅವರು, ಬೀದರ್ ನ ಕೋವಿಡ್ ಆಸ್ಪತ್ರೆ ಬ್ರಿಮ್ಸ್ ಒಂದರಲ್ಲೇ 5 ದಿನಗಳ ಅಂತರದಲ್ಲಿ 98 ಸೋಂಕಿತರು ಸಾವಿಗೀಡಾಗಿದ್ದಾರೆ. ಆದರೆ ಆರೋಗ್ಯ ಇಲಾಖೆ ಕೇವಲ 18 ಜನರು ಮಾತ್ರ 5 ದಿನದಲ್ಲಿ ಸಾವಿಗೀಡಾಗಿದ್ದಾರೆ ಎಂದು ಹೇಳಿದೆ ಎಂದು ತಿಳಿಸಿದ್ದಾರೆ.
ತಮಗೆ ಲಭ್ಯವಿರುವ ಅಧಿಕೃತ ಅಂಕಿ ಅಂಶ ನೀಡಿರುವ ಖಂಡ್ರೆ, ಏ.22ರಂದು 13 ಮಂದಿ ಕೋವಿಡ್ ನಿಂದ ಸಾವಿಗೀಡಾಗಿದ್ದರೆ 3 ಜನರು ಸತ್ತಿದ್ದಾರೆ ಎಂದು ವರದಿ ನೀಡಲಾಗಿದೆ.
23ರಂದು 18ಜನರು ಕೋವಿಡ್ ಗೆ ಬಲಿಯಾಗಿದ್ದರೆ, ಇಬ್ಬರು ಮಾತ್ರ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.
24ರಂದು 18 ಜನರು ಅಸುನೀಗಿದ್ದರೆ ಯಾವುದೇ ಸಾವು ಸಂಭವಿಸಿಲ್ಲ ಎಂದು ವರದಿ ನೀಡಿದೆ. 27ರಂದು 16 ಸೋಂಕಿತರು, 28ರಂದು 33 ಸೋಂಕಿತರು ಮೃತಪಟ್ಟಿದ್ದರೆ, ಅನುಕ್ರಮವಾಗಿ 5 ಮತ್ತು 6 ಮಂದಿ ಮಾತ್ರ ಸಾವಿಗೀಡಾಗಿದ್ದಾರೆ ಎಂದು ತಿಳಿಸಲಾಗಿದೆ. ಇದು ನಿಜಕ್ಕೂ ಅಪಾಯಕಾರಿ ಎಂದು ತಿಳಿಸಿದ್ದಾರೆ.
ಬ್ರಿಮ್ಸ್ ನಲ್ಲಿ 480ಕ್ಕೂ ಹೆಚ್ಚು ಜನರು ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿದ್ದು, ಕಳೆದ 10 ದಿನಗಳಿಂದ ಸರಾಸರಿ 20 ಜನರು ಸಾವಿಗೀಡಾಗುತ್ತಿದ್ದಾರೆ. ನಿತ್ಯ ದಾಖಲಾಗುತ್ತಿರುವ ಹೊಸ ಸೋಂಕಿತರು, ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾದವರ ಅಂಕಿ ಸಂಖ್ಯೆ ತಾಳೆ ಹಾಕಿದರೆ ಸತ್ಯಾಂಶ ತಿಳಿಯುತ್ತದೆ. ಸ್ವತಃ ವೈದ್ಯರೂ ಆಗಿರುವ ಆರೋಗ್ಯ ಸಚಿವರು ಇತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಈ ಪ್ರಮಾಣದಲ್ಲಿ ಸಾವು ಹೆಚ್ಚಳವಾಗಲು ರೆಮಿಡಿಸಿವೀರ್ ಚುಚ್ಚುಮದ್ದಿನ ಕೊರತೆ ಮತ್ತು ಆಕ್ಸಿಜನ್ ಕೊರತೆ ಕಾರಣವಾಗಿದೆ. ಈ ಲೋಪ ಮುಚ್ಚಿಕೊಳ್ಳಲು ಸಾವಿನ ಸಂಖ್ಯೆಯನ್ನು ತಗ್ಗಿಸಿ ಆರೋಗ್ಯ ಇಲಾಖೆ ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಕೂಡಲೇ ಈ ಬಗ್ಗೆ ನೈಜ ಅಂಕಿ ಅಂಶ ಒದಗಿಸಲು ಮತ್ತು ಸಾವಿನ ಸಂಖ್ಯೆ ತಡೆಯಲು ಅಗತ್ಯ ಆಕ್ಸಿಜನ್ ಮತ್ತು ಔಷಧ ಪೂರೈಕೆಗೆ ಕ್ರಮವಹಿಸಿ ಎಂದು ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.