ಕೊರೊನಾದಿಂದ ಗುಣಮುಖರಾದವರ ನಿಗಾಕ್ಕೆ ತಜ್ಞರ ತಂಡ ರಚನೆ: ಡಿಸಿ

ಮಂಗಳೂರು, ಜೂ.೨- ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಕೊರೊನಾ ರೋಗಿಗಳ ಆರೋಗ್ಯದ ಬಗ್ಗೆ ನಿಗಾ ಇಡಲು ಜಿಲ್ಲೆಯ ೮ ವೈದ್ಯಕೀಯ ಮಹಾವಿದ್ಯಾಲಯಗಳ ಕಮ್ಯೂನಿಟಿ ಮೆಡಿಸಿನ್ ವಿಭಾಗದ ತಜ್ಞರ ತಂಡವನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಡಾ. ರಾಜೇಂದ್ರ ರಚಿಸಿದ್ದಾರೆ.

ಪ್ರಸ್ತುತ ಜಿಲ್ಲೆಯಲ್ಲಿ ಪ್ರತೀ ದಿನ ಸುಮಾರು ೮೦೦ ರಿಂದ ೯೦೦ ರಷ್ಟು ಕೋವಿಡ್ ಪ್ರಕರಣಗಳು ವರದಿ ಆಗುತ್ತಿದ್ದು ಅದರಲ್ಲಿ ಶೇಕಡಾ ೫ ರಿಂದ ೧೦ ರಷ್ಟು ರೋಗಿಗಳು ಜಿಲ್ಲೆಯ ವಿವಿಧ ಸರಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಮತ್ತು ವೈದ್ಯಕೀಯ ವಿದ್ಯಾಲಯದ ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಾರೆ. ಕೋವಿಡ್ ಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ರೋಗಿಗಳು ಬ್ಲಾಕ್ ಫಂಗಸ್ ಸೋಂಕಿಗೆ ಒಳಗಾಗುವುದನ್ನು ತಡೆಗಟ್ಟಲು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ದಿನಾಂಕದಿಂದ ನಾಲ್ಕು ವಾರಗಳ ಕಾಲ ಅವರ ಆರೋಗ್ಯದ ಬಗ್ಗೆ ನಿಗಾ ವಹಿಸುವುದು ಅತಿ ಅಗತ್ಯವಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ತಂಡವು ರೋಗಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿ ಖಚಿತ ಅಥವಾ ಸಂಶಯಾತ್ಮಕ ಪ್ರಕರಣ ಕಂಡುಬಂದಲ್ಲಿ ಪೂರ್ಣ ಮಾಹಿತಿಯನ್ನು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳ ಕಚೇರಿಗೆ ಇ-ಮೇಲ್ ಮೂಲಕ ತಕ್ಷಣ ತಿಳಿಸಬೇಕು ಅವರು ಕ್ರೋಡಿಕೃತ ವರದಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅವರಿಗೆ ದಿನಂಪ್ರತಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.