ಕೊರೊನಾದಿಂದ ಕಂಗೆಟ್ಟ ನೇಕಾರರು

ಮಹಾಲಿಂಗೇಶ ಯಂಡಿಗೇರಿ
ಗುಳೇದಗುಡ್ಡ ಮೇ.20- ಬಾಗಲಕೋಟೆ ಜಿಲ್ಲೆಯಾದ್ಯಂತ ಇರುವ ಗುಳೇದಗುಡ್ಡ, ಕಮತಗಿ, ಅಮೀನಗಡ, ಸೂಳೇಭಾವಿ, ಇಲಕಲ್ಲ, ಕೆರೂರ, ತೇರದಾಳ, ರಬಕವಿ-ಬನಹಟ್ಟಿ, ಮಹಾಲಿಂಗಪುರ, ಕೊಂಕಣಕೊಪ್ಪ, ಬೇಲೂರು, ಜಾಲಿಹಾಳ, ಕೆರೂರ, ಹೆಬ್ಬಳ್ಳಿ, ಗೋವಿನಕೊಪ್ಪ, ಹಲಗತ್ತಿ, ಬೆಳಗಾವಿ ಜಿಲ್ಲೆಯ ರಾಮದುರ್ಗ, ಸೂರೇಬಾನ ಈ ಊರುಗಳು ನೇಕಾರಿಕೆಯಿಂದ ಕೂಡಿವೆ. ಇಲ್ಲಿನ ನೇಕಾರರ ದೈನಂದಿನ ಸಮಸ್ಯೆಗಳು ಹೇಳತೀರದು. ಪ್ರಸಕ್ತ ಕೋರೊನಾದ 2ನೇ ಅಲೆಯಿಂದ ಸರ್ಕಾರ ಹೇರಿರುವ ಲಾಕ್‍ಡೌನ್‍ದ ಪರಿಣಾಮ ನೇಕಾರಿಕೆ ಉದ್ಯೋಗ ಕೂಡಾ ಮಕಾಡೆ ಮಲಗಿಬಿಟ್ಟಿದೆ. ಇದರಿಂದ ಅನೇಕ ನೇಕಾರರು ತಮ್ಮ ಆರ್ಥಿಕತೆಯ ಸಮಸ್ಯೆಗಳ ಸುಳಿಗೆ ಸಿಲುಕಿಕೊಂಡಿದ್ದಾರೆ. ಮೊದಲೇ ನೇಕಾರರ ಉದ್ಯೋಗ ಅವನತಿ ಅಂಚಿನಲ್ಲಿ ಸಾಗಿದೆ. ಪರಿಸ್ಥಿತಿ ಹೀಗಿರುವಾಗ ನೇಕಾರರಿಗೆ ತಮ್ಮ ದೈನಂದಿನ ಸಮಸ್ಯೆಗೆ ಅಂಟಿದ ವರವೋ ಶಾಪವೋ ಗೊತ್ತಿಲ್ಲ. ಇಂದು ಸಹ ನೇಕಾರರಿಗೆ ಬೆಂಬಿಡಿದೇ ಕಾಡುತ್ತಿರುವ ಸಮಸ್ಯೆಗಳ ಸಾಲಿನಲ್ಲಿ ಕೋವಿಡ್-19 ಕೋರೋನಾ ವೈರಸ್ 2ನೇ ಅಲೆ ಬರಸಿಡಿಲಿನಂತೆ ಅಪ್ಪಳಿಸಿ ನೇಕಾರರ ಬದುಕನ್ನೇ ತಲ್ಲಣಗೊಳಿಸಿದೆ. ಪರಿಣಾಮ ಮಗ್ಗಗಳ ಸದ್ದು ಇಂದು ಅಕ್ಷರಶಃ ಚಟಕ್ ಪಟಕ್ ಎನ್ನದೇ ಸ್ತಬ್ಧಗೊಂಡಿವೆ.
ಕಳೆದ ಒಂದು ತಿಂಗಳುಗಳಿಂದ ಸರ್ಕಾರ ಹೇರಿರುವ ಲಾಕ್‍ಡೌನ್‍ದಿಂದ ನೇಕಾರರು ಈ ಮೊದಲು ನೇಯ್ದಿಟ್ಟ ಸೀರೇ, ಖಣ ಇವುಗಳಿಗೆ ಸೂಕ್ತ ಮಾರುಕಟ್ಟೆಯೂ ಇಲ್ಲ. ಹೀಗಾಗಿ ನೇಕಾರರು ಮಾತ್ರವಲ್ಲ ಅವರನ್ನು ಅವಲಂಬಿತ ಉದ್ದಿಮೆದಾರರು, ಮಧ್ಯವರ್ತಿಗಳು ಕಚ್ಚಾ ವಸ್ತು ಪೂರೈಕೆದಾರರೂ ಸಾಗಾಣಿಕೆದಾರರು ಕೆಲಸವಿಲ್ಲದೇ ಕಂಗಾಲಾಗಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ನೇಕಾರರಿಗೆ ಸೂಕ್ತ ಮಾರುಕಟ್ಟೆ ಒದಗಿಸಿಕೊಟ್ಟರೆ ಮಾತ್ರ ನೇಕಾರರ ಉದ್ಯಮ ಪುನರ್ ಉತ್ಪತ್ತಿಗೊಳ್ಳುತ್ತದೆ. ಇಲ್ಲವಾದಲ್ಲಿ ಜಾಗತೀಕರಣದ ಪರಿಣಾಮದಿಂದಾಗಿ ನೇಕಾರರ ಅಸ್ತಿಪಂಜರದ ಜೊತೆ ಅವರ ಉತ್ಪಾದನೆಗಳನ್ನು ಸಹ ವಸ್ತು ಸಂಗ್ರಹಾಲಯದಲ್ಲಿ ಮುಂದಿನ ಪೀಳಿಗೆ ನೋಡುವ ದಿನಗಳು ದೂರವಿಲ್ಲ.
ಕಳೆದ ವರ್ಷ ರಾಜ್ಯ ಸರ್ಕಾರ ನೇಕಾರ ಸಮ್ಮಾನ್ ಎಂಬ ಯೋಜನೆಯಡಿ ವಾರ್ಷಿಕ 2 ಸಾವಿರ ಹಾಗೂ ಸಾಲಮನ್ನಾ ಮಾಡಿದ್ದು ಸ್ವಾಗತಾರ್ಹ. ಆದರೆ ಅದು ಇದುವರೆಗೂ ಸಮರ್ಪಕವಾಗಿ ಬಳಕೆಯಾಗದಿರುವುದು ವಿಷಾದದ ಸಂಗತಿ. ಈ ಯೋಜನೆÉಯಡಿ ನೀಡುತ್ತಿರುವ 2 ಸಾವಿರ ರೂ.ಗಳು ಸಾಲುವುದಿಲ್ಲ. ಇದನ್ನು 5 ಸಾವಿರವರೆಗೆ ಹೆಚ್ಚಿಸಬೇಕು. ಮತ್ತು ಸಾಲಮನ್ನಾಗೆ ಇರುವ ಮಾರ್ಗಸೂಚಿಗಳನ್ನು ಸಹ ಸರಳೀಕರಣವಾಗುವಂತೆ ಮಾಡಬೇಕು ಅಲ್ಲದೇ ಈಗಿರುವ ಪರಿಸ್ಥಿಯಲ್ಲಿ ಕನಿಷ್ಠ ಮೂರು ತಿಂಗಳವರೆಗೆ ಒಂದು ತಿಂಗಳಿಗೆ 5 ಸಾವಿರ ರೂ.ಗಳನ್ನು ಸರ್ಕಾರ ನೇಕಾರರಿಗೆ ವಿಶೇಷ ಪ್ಯಾಕೇಜ್‍ನ್ನು ಘೋಷಿಸಬೇಕು ಎಂದು ಹಲವಾರು ನೇಕಾರರು ನಮ್ಮ ಪತ್ರಿಕೆಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ನೇಕಾರ ಸಮ್ಮಾನ ಯೋಜನೆಯಡಿಯಲ್ಲಿ ಒಂದು ವರ್ಷಕ್ಕೆ ಕೊಡಮಾಡುವ 2ಸಾವಿರ ರೂ ನೇಕಾರರ ಕುಟುಂಬ ನಿರ್ವಹನೆಗೆ ಸಾಲುವುದಿಲ್ಲ. ಇದು ಕನಿಷ್ಠ 5ಸಾವಿರ ರೂ.ಗಳವರೆಗೆ ಕೊಡಬೇಕು. ಇದು ಕೈಮಗ್ಗ ಹಾಗೂ ಪಾವರಲೂಮ್ ಮಗ್ಗ ಎಂಬ ತಾರತಮ್ಯವೆನ್ನದೇ ಸಮಗ್ರ ನೇಕಾರರಿಗೆ ಅನ್ವಯಿಸಬೇಕು. ಈಗ ಕೋರೊನಾದಿಂದ ತತ್ತರಿಸಿದ ನೇಕಾರರ ಜನತೆಗೆ ಪ್ರಸ್ತುತ ಅವಧಿಯಲ್ಲಿ ಎರಡು ಮೂರು ತಿಂಗಳು ಮಟ್ಟಿಗಾದರೂ, ಒಂದು ತಿಂಗಳಿಗೆ ಕನಿಷ್ಠ 5 ಸಾವಿರ ರೂ.ಗಳ ವಿಶೇಷ ಪ್ಯಾಕೇಜ್ ಕೊಡಬೇಕು. ಇದರಿಂದ ಪಾವರಲೂಮ್ ಹಾಗೂ ಕೈಮಗ್ಗ ನೇಕಾರರಿಗೆ ಅನುಕೂಲಗುತ್ತದೆ. ಇದುವರೆಗೆ ಸರ್ಕಾರದಿಂದ ನೇಕಾರರಿಗೆ ಯಾವುದೇ ವಿಶೇಷ ಪ್ಯಾಕೇಜ ಬಿಜೆಪಿ ಸರ್ಕಾರ ಮಾಡಿಲ್ಲ. ಈ ಹಿಂದೆ ನೇಕಾರರಿಗೆ ಇದ್ದ ಎಲ್ಲ ಸ್ಕೀಮ್‍ಗಳ ಬಂದಾಗಿವೆ. ಬಿಜೆಪಿ ಸರ್ಕಾರ ಕಳೆದ ವರ್ಷ ಘೋಷಣೆ ಮಾಡಿದ ಸಾಲಮನ್ನಾ ಯೋಜನೆಯು ಇದುವರೆಗೂ ಸಮರ್ಪಕವಾಗಿ ಬಳಕೆಯಾಗಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿಯೋ ಅಥವಾ ಅವರ ಇಚ್ಚಾಶಕ್ತಿಯೋ ಗೊತ್ತಿಲ್ಲ.
ಬಾಗಲಕೋಟೆ ಜಿಲ್ಲೆಯಲ್ಲಿ ಸುಮಾರು 30 ಸಾವಿರದಷ್ಟು ಕೈಮಗ್ಗ ಹಾಗೂ ಪಾವರಲೂಮ್ ಮಗ್ಗಗಳನ್ನೊಳಗೊಂಡು, ರಾಜ್ಯಾದ್ಯಂತ ಅಧಿಕ ಸಂಖ್ಯೆಯಲ್ಲಿ ಸಮಗ್ರ ನೇಕಾರರಿದ್ದು, ಇವರಿಗೆ ಈಗ ಸರ್ಕಾರ ಸಂಪೂರ್ಣವಾಗಿ ಮಣ್ಣು ಕೊಟ್ಟಿದೆ. ಜವಳಿ ಸಚಿವ ಶ್ರೀಮಂತ ಪಾಟೀಲ ಅವರು, ಇದುವರಗೆ ಸಹ ನೇಕಾರರ ಬಗ್ಗೆ ಚಕಾರ ಶಬ್ದ ಕೂಡಾ ಎತ್ತಿಲ್ಲ. ನಿಷ್ಕ್ರೀಯ ಜವಳಿ ಮಂತ್ರಿಯಾಗಿದ್ದಾರೆ. ನೇಕಾರರ ಬಗ್ಗೆ ಒಂದು ಮಿಟಿಂಗ್ ಸಹ ಮಾಡಿಲ್ಲ. ಅತೀ ಹೆಚ್ಚು ನೇಕಾರರ ಸಾಂದ್ರತೆ ಇರುವ ಜಿಲ್ಲೆ ಬಾಗಲಕೋಟೆ ಜಿಲ್ಲೆಗೆ ನಾವು ಸಮಾರು 4-5 ಬಾರಿ ಜವಳಿ ಸಚಿವರನ್ನು ಆಹ್ಬಾನಿಸಿದರೂ ಸಹ ಇದುವರೆಗೂ ಒಮ್ಮೆಯೂ ನಮ್ಮ ಜಿಲ್ಲೆಗೆ ಬಂದಿಲ್ಲ. ಇದು ನೇಕಾರರ ದುರ್ದೈವದ ಸಂಗತಿ. ನೇಕಾರರೆಂದರೆ ಯಾರು ಅಂತ ಪ್ರಶ್ನಿಸುವ ಶ್ರೀಮಂತ ಪಾಟೀಲ ಅವರು ಯಾವ ಪುರುಷಾರ್ಥಕ್ಕೆ ಈ ಜವಳಿ ಮಂತ್ರಿಗಿರಿಯನ್ನು ಅಲಂಕರಿಸಿದ್ದಾರೆಯೋ ಎಂಬುದು ಗೊತ್ತಿಲ್ಲ.
ಈ ಹಿಂದೆ ಒಂದು ಲಕ್ಷದವರೆಗೆ ನೇಕಾರರು ತಯಾರಿಸಿದಂತಹ ಸೀರೆಗಳನ್ನು ಸರ್ಕಾರದಿಂದ ಖರೀದಿ ಮಾಡುತ್ತೇವೆ ಎಂದಿದ್ದರೂ. ಇದುವರೆಗೆ ಒಂದು ಸೀರೆಯನ್ನು ಸಹ ಸರ್ಕಾರದಿಂದ ಖರೀದಿ ಮಾಡಿಲ್ಲ. ಇದು ಸುಳ್ಳಿನ ಸರ್ಕಾರವಾಗಿದೆ. ಕರೋನಾ ಕಂಗೆಟ್ಟ ನೇಕಾರರಿಗೆ ಈಗ ಕನಿಷ್ಠ ತುರ್ತಾಗಿ ಮೂರು ತಿಂಗಳುವರೆಗೆ 5 ಸಾವಿರ ರೂ.ಗಳನ್ನು ನೇಕಾರರ ಖಾತೆಗೆ ಹಾಕಬೇಕು. ಇದರಿಂದ ನೇಕಾರರು ಕೊಂಚ ನಿರಾಳವಾಗಿ ಜೀವನ ಸಾಗಿಸಬಹುದು.

  • ರವೀಂದ್ರ ಪಿ. ಕಲಬುರ್ಗಿ, ಕೆಎಚ್‍ಡಿಸಿ ಮಾಜಿ ಅಧ್ಯಕ್ಷರು, ಸೂಳೇಭಾವಿ.