ಕೊರೊನಾಗೆ 9 ಮಂದಿ ಬಲಿ: 1748 ಜನರಿಗೆ ಸೋಂಕು

ತುಮಕೂರು, ಏ. 30- ಕಲ್ಪತರುನಾಡಿನಲ್ಲಿ ಕೊರೊನಾ ಮಹಾಮಾರಿಯ ಮರಣ ಮೃದಂಗ ಮುಂದುವರೆದಿದ್ದು, 9 ಮಂದಿಯನ್ನು ಬಲಿ ತೆಗೆದುಕೊಂಡು 1748 ಮಂದಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಯ ಆರ್ಭಟ ದಿನದಿಂದ ಹೆಚ್ಚಾಗುತ್ತಿದ್ದು, ಇಂದು ಒಂದೇ ದಿನ 1748 ಮಂದಿಗೆ ಸೋಂಕು ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 44,775ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಇಂದು ಒಂದೇ ದಿನ 9 ಮಂದಿ ಸೋಂಕಿನಿಂದ ಮೃತಪಟ್ಟಿರುವುದು ಜನರಲ್ಲಿ ತೀವ್ರ ಭಯ ಬೀತಿ ಹುಟ್ಟಿಸಿದೆ.
ತುಮಕೂರು ತಾಲ್ಲೂಕು ಯಲ್ಲಾಪುರ ಗ್ರಾಮದ 55 ವರ್ಷದ ಪುರುಷ, ಮಧುಗಿರಿ ತಾಲ್ಲೂಕು ಹನುಮಂತಪುರದ 60 ವರ್ಷದ ವ್ಯಕ್ತಿ, ಪಾವಗಡ ತಾಲ್ಲೂಕು ಪೋತಗಾನಹಳ್ಳಿಯ 65 ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ.
ಮಧುಗಿರಿ ತಾಲ್ಲೂಕು ಮೇದರಹಟ್ಟಿ ಗ್ರಾಮದ 27 ವರ್ಷದ ಮಹಿಳೆ, ಪಾವಗಡ ತಾಲ್ಲೂಕು ಕೆಂಚಮ್ಮನಹಳ್ಳಿ ಗ್ರಾಮದ 65 ವರ್ಷದ ಮಹಿಳೆ, ಸಿರಾದ ಜ್ಯೋತಿನಗರದ 54 ವರ್ಷದ ಪುರುಷ, ಕೊರಟಗೆರೆ ತಾಲ್ಲೂಕು ತೊಗರಿಘಟ್ಟ ಗ್ರಾಮದ 65 ವರ್ಷದ ಪುರುಷ, ತುಮಕೂರಿನ ಮಾರುತಿನಗರದ 41 ವರ್ಷದ ವ್ಯಕ್ತಿ, ಶಾಂತಿನಗರದ 67 ವರ್ಷದ ವೃದ್ಧ ಮಹಿಳೆ ಕೊರೊನಾ ಸೋಂಕಿನಿಂದ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ ಇಂದು ಸಾವನ್ನಪ್ಪಿರುವ 9 ಮಂದಿ ಸೇರಿ ಈವರೆಗೆ ಸೋಂಕಿನಿಂದ ಸತ್ತವರ ಸಂಖ್ಯೆ 530ಕ್ಕೆ ಏರಿದೆ.
ಇಂದು ಪತ್ತೆಯಾಗಿರುವ 1748 ಸೋಂಕಿತರ ಪೈಕಿ ತುಮಕೂರು ತಾಲ್ಲೂಕಿನಲ್ಲಿ 974 ಮಂದಿಗೆ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿರುವ ತಾಲ್ಲೂಕಾಗಿದೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 99, ಗುಬ್ಬಿ ತಾಲ್ಲೂಕಿನಲ್ಲಿ 61, ಕೊರಟಗೆರೆ 56, ಕುಣಿಗಲ್ 63, ಮಧುಗಿರಿ 48, ಪಾವಗಡ 24, ಸಿರಾ 70, ತಿಪಟೂರು 182, ತುರುವೇಕೆರೆ 171 ಮಂದಿಯಲ್ಲಿ ಕೊರೊನಾ ಮಹಾಮಾರಿ ವಕ್ಕರಿಸಿದೆ.
ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆದ 850 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 32,373 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಸದ್ಯ 11,872 ಮಂದಿ ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಐಸಿಯುನಲ್ಲಿ 101 ಮಂದಿ ದಾಖಲಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.