ಕೊರೊನಾಗೆ ೮೨ ಸಾವಿರ ಮಂದಿ ಬಲಿ: ೯೦ ಸಾವಿರ ಜನರಿಗೆ ಸೋಂಕು

ನವದೆಹಲಿ. ಸೆ. ೧೬- ದೇಶದಲ್ಲಿ ಕೊರೊನಾ ಮಹಾಮಾರಿಯ ಅಬ್ಬರ ಮುಂದುವರೆದಿದ್ದು , ಕಳೆದ ೨೪ ಗಂಟೆಗಳ ಅವಧಿಯಲ್ಲಿ ಮತ್ತೆ ೯೦ ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಹೊಸದಾಗಿ ಪತ್ತೆಯಾಗಿದ್ದು ಜನರಲ್ಲಿನ ಆತಂಕ ಮತ್ತಷ್ಟು ಹೆಚ್ಚಿಸಿದೆ.
ದೇಶದಲ್ಲಿ ಈಗಾಗಲೇ ಸೋಂಕಿತರ ಸಂಖ್ಯೆ ೫೦ಲಕ್ಷ ದಾಟಿದ್ದು, ಇದರ ಭೀಕರತೆ ಮತ್ತಷ್ಟು ಹೆಚ್ಚಾಗುತ್ತಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೯೦ ಸಾವಿರದ ೧೨೩ ಹೊಸ ಪ್ರಕರಣಗಳು ಪತ್ತೆಯಾಗಿದ್ದು ದೇಶದಲ್ಲಿ ಇದುವರೆಗೂ ದಾಖಲಾದ ಒಟ್ಟಾರೆ ಸೋಂಕಿತರ ಸಂಖ್ಯೆ ೫೦ ಲಕ್ಷದ ೨೦ ಸಾವಿರದ ೩೬೦ ದಾಟಿದೆ.
ಈ ನಡುವೆ ಸೋಂಕಿಗೆ ಬಲಿಯಾಗುತ್ತಿರುವವರ ಜನರ ಸಂಖ್ಯೆಯೂ ಹೆಚ್ಚಾಗುತ್ತಿದ್ದು ಕಳೆದ ೨೪ ಗಂಟೆಗಳ ಅವಧಿಯಲ್ಲಿ ಒಂದು ಸಾವಿರದ ೨೯೦ ಮಂದಿ ಸಾವನ್ನಪ್ಪಿರುವುದು ಶೋಚನೀಯ ಸಂಗತಿಯಾಗಿದೆ. ಇದರಿಂದಾಗಿ ಇದುವರೆಗೂ ಮೃತಪಟ್ಟವರ ಸಂಖ್ಯೆ ೮೨ ಸಾವಿರದ ೬೬ ಕ್ಕೆ ತಲುಪಿದೆ.
ಇನ್ನೊಂದೆಡೆ ಗುಣಮುಖ ಪ್ರಮಾಣ ಏರಿಕೆಯಾಗುತ್ತಿದ್ದು ಇದುವರೆಗೂ ಸುಮಾರು ೪೦ ಲಕ್ಷದಷ್ಟು ಜನರು ಸೋಂಕಿನಿಂದ ಆಸ್ಪತ್ರೆಗಳಿಗೆ ಸೇರಿ ವೈದ್ಯರು ನೀಡಿದ ಚಿಕಿತ್ಸೆಯಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಇದುವರೆಗೂ ೩೯ ಲಕ್ಷ, ನಲವತ್ತೆರಡು ಸಾವಿರದ ೩೬೧ ಮಂದಿ ಚೇತರಿಕೆ ಕಂಡಿದ್ದಾರೆ.
ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಪ್ರಕರಣಗಳು ಅಧಿಕ ಪ್ರಮಾಣದಲ್ಲಿ ದಾಖಲಾಗಿರುವುದು ವೈದ್ಯರ ಪರಿಶ್ರಮಕ್ಕೆ ಸವಾಲಾಗಿದೆ. ಇದುವರೆಗೂ ೯ ಲಕ್ಷದ ೯೫ ಸಾವಿರದ ೯೩೩ ಸಕ್ರಿಯ ಪ್ರಕರಣಗಳು ದಾಖಲಾಗಿವೆ.
ಇಡೀ ವಿಶ್ವದಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳು ಅಮೆರಿಕದಲ್ಲಿ ಮಾತ್ರ ದಾಖಲಾಗಿವೆ. ಅದಾದ ನಂತರ ಭಾರತದಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳು
ಪತ್ತೆಯಾಗಿದ್ದು ಅಮೆರಿಕದ ನಂತರ ಭಾರತ ಎರಡನೇ ಸ್ಥಾನದಲ್ಲಿ ಮುಂದುವರೆದಿದೆ.
ಅಮೆರಿಕದಲ್ಲಿ ೬೦ ಲಕ್ಷ ೭೦ ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿದ್ದರೆ ಭಾರತದಲ್ಲಿ ೫೦ ಲಕ್ಷದ ಗಡಿದಾಟಿ ಮುಂದುವರೆದಿರುವುದು ಜನರನ್ನು ಬೆಚ್ಚಿಬೀಳಿಸಿದೆ.
ಕಳೆದೊಂದು ವಾರದಿಂದ ಭಾರತದಲ್ಲಿ ೯೦ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಸತತವಾಗಿ ಪ್ರತಿನಿತ್ಯ ಆಗುತ್ತಿರುವುದು ಮಹಾಮಾರಿಯ ಕಬಂದಬಾಹುಗಳು ವ್ಯಾಪಕವಾಗಿ ಹರಡುತ್ತಿರುವ ಸೂಚನೆಗಳು ಕಂಡು ಬರುತ್ತಿವೆ. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ ಆಂಧ್ರಪ್ರದೇಶ
ದೆಹಲಿ ಮತ್ತಿತರ ಕೆಲವೇ ರಾಜ್ಯಗಳಲ್ಲಿ ಸೋಂಕು ಸೋಂಕು ಪ್ರಕರಣಗಳು ಅಧಿಕ ಪ್ರಮಾಣದಲ್ಲಿ ದಾಖಲಾಗುತ್ತಿವೆ. ಮಹಾರಾಷ್ಟ್ರ ಒಂದರಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಪ್ರತಿನಿತ್ಯ ಸುಮಾರು ೨೦ ಸಾವಿರ ಹೊಸ ಪ್ರಕರಣಗಳು ದಾಖಲಾಗುತ್ತಿರುವುದು ಜನರನ್ನು ಚಿಂತೆಗೀಡುಮಾಡಿದೆ.

ಕರ್ನಾಟಕದಲ್ಲೂ ಪ್ರತಿನಿತ್ಯ ೯೦೦೦ ದಷ್ಟು ಸೋಂಕು ಪ್ರಕರಣಗಳು ಪತ್ತೆ ಆಗುತ್ತಿರುವುದು ರಾಜ್ಯದಲ್ಲಿ ಭೀಕರತೆ ವ್ಯಾಪಕ ಗೊಳ್ಳುತ್ತಿರುವ ಸೂಚನೆಗಳು ಸ್ಪಷ್ಟವಾಗಿವೆ.

ಚೀನಾದಲ್ಲಿ ಮೊದಲ ಬಾರಿಗೆ ೯ ತಿಂಗಳ ಹಿಂದೆ ಸೋಂಕು ಪತ್ತೆಯಾದ ನಂತರ ಅಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೂ, ಅಮೆರಿಕ , ಬ್ರೆಜಿಲ್ ಮತ್ತು ಭಾರತದಲ್ಲಿ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದು ಜನರಲ್ಲಿನ ಆತಂಕಕ್ಕೆ ಕಾರಣವಾಗಿದೆ.

ಸಮಾಧಾನಕರ ವಿಚಾರವೆಂದರೆ ಭಾರತದಲ್ಲಿ ಮಹಾಮಾರಿ ಸೋಂಕಿನಿಂದ ಸಾವನ್ನಪ್ಪುತ್ತಿರುವ ಜನರ ಸಂಖ್ಯೆ ದಿನೇದಿನೇ ಇಳಿಮುಖವಾಗುತ್ತಿದೆ. ಪ್ರಸ್ತುತ ಮೃತರ ಪ್ರಮಾಣ ಶೇಕಡ ೧.೬೪ ರಷ್ಟಿದೆ.