ಕೊರೊನಾಗೆ ಹೋಮಿಯೊ ಚಿಕಿತ್ಸೆ: ಸುಪ್ರೀಂತೀರ್ಪು

ಬೆಂಗಳೂರು,ಏ.೨೦-ಕೋವಿಡ್-೧೯ ಹಿನ್ನೆಲೆಯಲ್ಲಿ ಅಂಗೀಕೃತ ಸಂಸ್ಥೆಗಳಿಂದ ಮಾನ್ಯತೆ ಪಡೆದ ಹೋಮಿಯೋಪತಿ ತಜ್ಞರು ಚಿಕಿತ್ಸೆ ನೀಡಬಹುದೆಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ರೋಗ ನಿರೋಧಕ, ರೋಗಶಮನ ಮತ್ತು ಆರೋಗ್ಯ ಪರಿಸ್ಥಿತಿ ಸುಧಾರಣೆ ನಿಟ್ಟಿನಲ್ಲಿ ಔಷಧ ಸೂಚಿಸಬಹುದೆಂದು ತೀರ್ಪಿನಲ್ಲಿ ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ. ಜಾಹೀರಾತು ನೀಡುವುದಕ್ಕೆ ಕಾನೂನು ನಿಷೇಧ ವಿಧಿಸಿರುವುದರಿಂದ ಕೋವಿಡ್-೧೯ ಗುಣಪಡಿಸುವುದಕ್ಕೆ ತಾವು ಸಮರ್ಥರೆಂದು ಹೋಮಿಯೋಪತಿ ವೈದ್ಯರು ಜಾಹೀರಾತು ನೀಡುವುದಕ್ಕೆ ಅವಕಾಶವಿಲ್ಲ ಎಂದೂ ಸಹ ನ್ಯಾಯಾಲಯ ಹೇಳಿದೆ.
ಆಯಂಷ್ ಸಚಿವಾಲಯದ ಸಲಹೆ ಮತ್ತು ಮಾರ್ಗಸೂಚಿಯ ಪ್ರಕಾರ ಕೋವಿಡ್-೧೯ ನಿಗ್ರಹ ಮತ್ತು ಶಮನಕ್ಕಾಗಿ ಹೋಮಿಯೋಪತಿ ಚಿಕಿತ್ಸೆಯ ನೆರವು ಪಡೆಯಬಹುದಾಗಿದೆ.ಕಳೆದ ಮಾರ್ಚ್ ನಲ್ಲಿ ಆಯುಷ್ ಸಚಿವಾಲಯ ಹೊರಡಿಸಿರುವ ಸಲಹೆ ಮತ್ರು ಮಾರ್ಗದರ್ಶಿ ಸೂತ್ರಗಳನ್ನು ಹೋಮಿಯೋಪತಿ ತಜ್ಞರು ಅನುಸರಿಸಬೇಕೆಂದು ನ್ಯಾಯಾಲಯ ಸೂಚಿಸಿದೆ.
ಇಡೀ ಜಗತ್ತು ಕೋವಿಡ್-೧೯ ಕ್ಕೆ ಸೂಕ್ತ ಔಷಧ ಮತ್ತು ಲಸಿಕೆಯ ಸಂಶೋಧನೆಯಲ್ಲಿ ನಿರತವಾಗಿರುವಾಗ ಹೋಮಿಯೋಪತಿ ತಜ್ಞರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಯಾವುದೇ ಅಭಿಪ್ರಾಯೋಕ್ತಿ ನೀಡಲು ಇದು ಸೂಕ್ತ ಸಂದರ್ಭವಲ್ಲ.ಹೋಮಿಯೋಪತಿ ಚಿಕಿತ್ಸೆ ಕಾಯಿಲೆಯನ್ನು ಗುಣಪಡಿಸುವುದಿಲ್ಲ. ಅದು ರೋಗಿಗಳನ್ನು ಗುಣಪಡಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ,ಆರ್.ಎಸ್.ರೆಡ್ಡಿ ಮತ್ತು ಎಂ.ಆರ್.ಷಾ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.