ಕೊರೊನಾಗೆ ಹೆದರಿ ಬಾವಗಿ ಗ್ರಾಮ ಸ್ವಯಂ ಲಾಕ್ ಡೌನ್

ಬೀದರ:ಏ.26: ಕಳೆದ ಕೆಲವು ದಿನಗಳಿಂದ ಬೀದರ್ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳಿಂದ ಜನರು ಆತಂಕಕ್ಕೊಳಗಾಗಿದ್ದು, ಬೀದರ್ ತಾಲೂಕಿನ ಬಾವಗಿ ಗ್ರಾಮಸ್ಥರು ಸ್ವಯಂ ಲಾಕ್‌ಡೌನ್ ಜಾರಿಗೊಳಿಸಿದ್ದಾರೆ.

ರಾಜ್ಯ ಸರ್ಕಾರ ಲಾಕ್‌ಡೌನ್ ಮಾಡಲು ಮೀನಮೇಷ ಏಣಿಸುತ್ತಿರುವಾಗಲೇ ಬಾವಗಿ ಗ್ರಾಮಸ್ಥರ ನಿರ್ಣಯ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಸರ್ಕಾರ ಈ ಹಿಂದೆ ಮಾಡಿದ ಲಾಕ್‌ಡೌನ್ ಮಾದರಿಯಲ್ಲೇ ಬಾವಗಿಯಲ್ಲಿ ಕಳೆದ ಏ.೧೯ರಿಂದ ಸ್ವಯಂ ದಿಗ್ಭಂಧನ ವಿಧಿಸಲಾಗಿದೆ.

ಗ್ರಾಮದಲ್ಲಿ ಡಂಗೂರ ಸಾರಿ ಗ್ರಾಮಸ್ಥರಿಗೆ ಲಾಕ್‌ಡೌನ್ ಕುರಿತು ತಿಳಿವಳಿಕೆ ನೀಡಲಾಗಿದೆ. ಅಗತ್ಯ ಬಿದ್ದರೆ ಮಾತ್ರ ಮನೆಯಿಂದ ಹೊರಬರಬೇಕು. ಕಡ್ಡಾಯ ಮಾಸ್ಕ್ ಧರಿಸಿ ಮನೆಯಿಂದ ಹೊರಬೇಕು ಎಂದು ಸೂಚಿಸಲಾಗಿದೆ.

ಗ್ರಾಮದಲ್ಲಿರುವ ದಿನಸಿ ಅಂಗಡಿಗಳಿಗೂ ಸಮಯ ನಿಗದಿಗೊಳಿಸಲಾಗಿದೆ.ಬೆಳಿಗ್ಗೆ ೬ರಿಂದ ೮ ಗಂಟೆ ಹಾಗೂ ಸಾಯಂಕಾಲ ೬ರಿಂದ ೮ಗಂಟೆವರೆಗೆ ಮಾತ್ರ ತೆರೆದಿಡಬೇಕು. ಗ್ರಾಮಸ್ಥರು ಇದೇ ಸಮಯದಲ್ಲಿ ಸಾಮಾನುಗಳು ಖರೀದಿ ಮಾಡಬೇಕು ಎಂದು ನಿರ್ಧರಿಸಲಾಗಿದೆ.
ಅನಗತ್ಯವಾಗಿ ಗ್ರಾಮದಲ್ಲಿ ಸುತ್ತಾಡುವುದು ಹಾಗೂ ಹರಟೆ ಹೊಡೆಯುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮದ ಮುಖಂಡರು ಸೇರಿ ಈ ನಿರ್ಣಯ ತೆಗೆದುಕೊಂಡಿದ್ದಾರೆ.ಗ್ರಾಮದ ಪ್ರಮುಖರ ನಿರ್ಣಯಕ್ಕೆ ಗ್ರಾಮಸ್ಥರು ಸಹಕರಿಸುತ್ತಿದ್ದು, ಸದ್ಯ ಪರಿಸ್ಥಿತಿ ಶಾಂತವಾಗಿದೆ. ಕೆಲವು ಸೋಂಕು ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನ ಲಕ್ಷಣಗಳು ಕಂಡುಬಂದ ತಕ್ಷಣ ಆಸ್ಪತ್ರೆಗೆ ಹೋಗುವಂತೆ ಗ್ರಾಮಸ್ಥರಿಗೆ ತಿಳಿಸಲಾಗುತ್ತಿದೆ. ಪರಿಸ್ಥಿತಿ ಸುಧಾರಿಸುವವರೆಗೆ ಈ ನಿಯಮ ಮುಂದುವರೆಯಲಿದೆ ಎಂದು ಗ್ರಾಮದ ಪ್ರಮುಖ ಶಿವಕುಮಾರ್ ಬಾವಗಿ ತಿಳಿಸಿದ್ದಾರೆ.