ಕೊರೊನಾಗೆ ಸಿಂಹಿಣಿ ಬಲಿ 9 ಸಿಂಹಗಳಿಗೆ ಸೋಂಕು

ಚೆನ್ನೈ,ಜೂ.4-ಮಹಾಮಾರಿ ಕೊರೊನಾ ಮನುಷ್ಯರನ್ನಷ್ಟೇ ಅಲ್ಲ ಪ್ರಾಣಿಗಳ ಜೀವ ಹಿಂಡುತ್ತಿದ್ದು ಅರಿಗ್ನಾರ್​ ಅಣ್ಣ ಮೃಗಾಲಯದಲ್ಲಿನ‌ ​ಸಿಂಹವೊಂದು ಕೊರೊನಾಗೆ ಬಲಿಯಾಗಿದ್ದು, 9 ಸಿಂಹಗಳಿಗೆ ಕೊರೊನಾ ದೃಢಪಟ್ಟಿದೆ.
ಸಿಂಹ ಸಾವನ್ನಪ್ಪಿರುವ ಬಗ್ಗೆ ಮೃಗಾಲಯವು ಪ್ರಕಟಣೆ ಹೊರಡಿಸಿದ್ದು, ಮೇ 26 ರಂದು ಸಫಾರಿ ಪಾರ್ಕ್​ ಪ್ರದೇಶದಲ್ಲಿ ಇರಿಸಲಾಗಿದ್ದ ಐದು ಸಿಂಹಗಳಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಮೊದಲಿಗೆ ಹಸಿವು ಕಡಿಮೆಯಾಗುವುದು, ಕೆಮ್ಮು ಕಂಡು ಬಂದಿದೆ. ಹೀಗಾಗಿ ಮೃಗಾಲಯದ ಪಶು ವೈದ್ಯಕೀಯ ತಂಡವು ಸಿಂಹಗಳಿಗೆ ಚಿಕಿತ್ಸೆ ನೀಡಲು ಆರಂಭಿಲಾಯಿತು.
9 ವರ್ಷದ ನೀಲಾ ಎಂಬ ಸಿಂಹಿಣಿಗೆ ಅನಾರೋಗ್ಯ ಬಿಗಡಾಯಿಸಿದ್ದು, ಜೂನ್ 3 ರಂದು ಕೊನೆಯುಸಿರೆಳೆದಿದೆ. ಆದರೆ, ಆ ಸಿಂಹಿಣಿಗೆ ಕೊರೊನಾದ ಯಾವುದೇ ಲಕ್ಷಣಗಳಿರಲಿಲ್ಲ ಎಂದು ತಿಳಿದು ಬಂದಿದೆ.
ಸಿಂಹಗಳ ರಕ್ತದ ಮಾದರಿಗಳನ್ನು ಮಧ್ಯಪ್ರದೇಶದ ಭೋಪಾಲ್​ನಗರದ ಎನ್‌ಐಎಚ್‌ಎಸ್‌ಎಡಿಗೆ ಕಳುಹಿಸಲಾಗಿದೆ. ಲ್ಯಾಬ್ ವರದಿಗಳ ಪ್ರಕಾರ, ಕಳುಹಿಸಿದ 11 ರಲ್ಲಿ 9 ಸಿಂಹಗಳಿಗೆ ಕೋವಿಡ್ ದೃಢಪಟ್ಟಿದೆ.
ಮೃತ ಸಿಂಹಿಣಿಯ ಮಾದರಿಗಳನ್ನು ಸಂಗ್ರಹಿಸಿ ಹೈದರಾಬಾದ್​ನ ಸೆಲ್ಯುಲಾರ್ ಮತ್ತು ಆಣ್ವಿಕಾದ ಜೀವಶಾಸ್ತ್ರ ಕೇಂದ್ರಕ್ಕೂ ಕಳುಹಿಸಲಾಗಿದೆ. ಪಾಸಿಟಿವ್ ಬಂದಿರುವ ಅಷ್ಟೂ ಸಿಂಹಗಳಿಗೆ ಪ್ರತ್ಯೇಕವಾಗಿರಿಸಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.