ಕೊರೊನಾಗೆ ಕಡಿವಾಣ ಮೋದಿ ಪಣ

ನವದೆಹಲಿ, ಏ. ೨೫- ದೇಶ ಕೊರೊನಾ ೨ನೇ ಅಲೆಯಿಂದ ತತ್ತರಿಸಿರುವ ಈ ಸಂಕಷ್ಟದ ಸಮಯದಲ್ಲಿ ಕೊರೊನಾವನ್ನು ಎದುರಿಸಲು ಸಕಾರಾತ್ಮಕ ಮನೋಭಾವ ಬಹಳ ಮುಖ್ಯವಾಗಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕೋವಿಡ್-೧೯ ವಿರುದ್ಧ ಪ್ರಸ್ತುತ ಆರೋಗ್ಯ ಕಾರ್ಯಕರ್ತರು, ವೈದ್ಯರು ದೊಡ್ಡ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟ ಮುಂದುವರೆಯಲಿದ್ದು, ಸರ್ಕಾರ ಸಮರ್ಪಣೆಯಿಂದ ಕೊರೊನಾ ವಿರುದ್ಧದ ಹೋರಾಟದಲ್ಲಿ ನಿರತವಾಗಿದೆ ಎಂದು ಹೇಳಿದರು.
ನೋವು ಸಹಿಸುವ ನಮ್ಮ ಸಾಮರ್ಥ್ಯ ಮತ್ತು ತಾಳ್ಮೆಯನ್ನು ಕೋವಿಡ್ ಪರೀಕ್ಷಿಸುತ್ತಿದೆ. ಇಂತಹ ಸಂದರ್ಭದಲ್ಲಿ ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ನಮ್ಮಲ್ಲಿ ಹಲವು ಜನ ಆಪ್ತರು ಅಕಾಲಿಕವಾಗಿ ಅಗಲಿದ್ದಾರೆ. ನಮ್ಮ ಮನೋಬಲ ಹೆಚ್ಚಿದ್ದರೂ ೨ನೇ ಅಲೆಯು ದೇಶವನ್ನು ಅಲುಗಾಡಿಸಿದೆ ಎಂದರು.
ಕಳೆದ ೧ ವರ್ಷದಲ್ಲಿ ಕೊರೊನಾ ಸಾಂಕ್ರಾಮಿಕವನ್ನು ಎದುರಿಸುವ ಹಲವು ರೀತಿಯ ಅನುಭವಗಳನ್ನು ಬಳಸಿಕೊಂಡು ೨ನೇ ಅಲೆಯನ್ನು ಎದುರಿಸಲು ದೃಢವಾದ ಹೋರಾಟ ನಡೆದಿದೆ. ಕೋವಿಡ್-೧೯ ಮೊದಲ ಅಲೆಯನ್ನು ಯಶಸ್ವಿಯಾಗಿ ಎದುರಿಸಿದ ಬಳಿಕ ದೇಶದ ಮನೋಬಲ ಹೆಚ್ಚಿಸಿತು. ಆದರೆ ೨ನೇ ಅಲೆ ಅಬ್ಬರ ದೇಶವನ್ನೆ ನಡುಗಿಸಿದೆ. ಈ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಔಷಧ ವಲಯ, ಆಮ್ಲಜನಕ ಉತ್ಪಾದನೆ ಸೇರಿದಂತೆ ಹಲವು ತಜ್ಞರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದರು.
ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದ ೭೬ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಧೈರ್ಯದ ಪರೀಕ್ಷೆ ಮಾಡುತ್ತಿದೆ. ವೈರಸ್ ವಿರುದ್ಧ ದೃಢ ಹೋರಾಟ ನಡೆದಿದೆ. ಜನ ತಮ್ಮವರನ್ನು ಕಳೆದುಕೊಳ್ಳುತ್ತಿರುವುದು ನೋವು ತಂದಿದೆ ಎಂದರು.
ಈ ಕಷ್ಟದ ಸಮಯವನ್ನು ಎದುರಿಸಲು ಪ್ರತಿಯೊಬ್ಬ ದೇಶವಾಸಿಯೂ ಸಕಾರಾತ್ಮಕ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಸಕಾರಾತ್ಮಕ ಮನೋಭಾವದಿಂದ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಕೋವಿಡ್ ವಿರುದ್ಧ ಎಲ್ಲರೂ ಒಗ್ಗೂಡಿ ಹೋರಾಡಿ ಸಾಂಕ್ರಾಮಿಕವನ್ನು ಹಿಮ್ಮೆಟ್ಟಿಸೋಣ ಎಂದು ಅವರು ಕರೆ ನೀಡಿದರು.
ಪ್ರಸ್ತುತ ಕೋವಿಡ್-೧೯ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರ ಸಂಪೂರ್ಣ ಸಮರ್ಪಿತ ಭಾವದಿಂದ ಕೆಲಸ ಮಾಡುತ್ತಿದೆ. ರಾಜ್ಯಗಳಿಗೆ ಅಗತ್ಯ ನೆರವು, ಮಾರ್ಗದರ್ಶನ ನೀಡುತ್ತಿದೆ ಎಂದರು.
ಕೋವಿಡ್ ವಿರುದ್ಧದ ಈ ಯುದ್ಧದಲ್ಲಿ ಆಂಬ್ಯುಲೆನ್ಸ್ ಚಾಲಕರ ದೊಡ್ಡ ಕೊಡುಗೆಯೂ ಇದೆ. ಆಂಬ್ಯುಲೆನ್ಸ್ ಚಾಲಕರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ಅನೇಕ ವೈದ್ಯರು ಕೊರೊನಾ ರೋಗಿಗಳಿಗೆ ಆನ್‌ಲೈನ್ ಸಮಾಲೋಚನೆಗಳನ್ನು ನೀಡಲು ತಂತ್ರಜ್ಞಾನವನ್ನು ಬಳಸುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.
ಉಚಿತ ಲಸಿಕೆ ಮುಂದುವರಿಕೆ
ದೇಶದಲ್ಲಿ ೪೫ ವರ್ಷ ಮೇಲ್ಪಟ್ಟವರಿಗೆ ಕೇಂದ್ರದ ಉಚಿತ ಲಸಿಕಾ ಯೋಜನೆ ಮುಂದುವರೆಯಲಿದೆ. ಮೇ ೧ ರಿಂದ ೧೮ ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುತ್ತದೆ ಎಂದರು.
ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಯಾವುದೇ ಊಹಾಪೋಹ, ವದಂತಿಗಳನ್ನು ನಂಬುವುದು ಬೇಡ. ವಿಶ್ವಾಸಾರ್ಹ ಸುದ್ದಿಗಳನ್ನು ನಂಬಿ ಎಂದು ದೇಶವಾಸಿಗಳಿಗೆ ಅವರು ಮನವಿ ಮಾಡಿದರು.
ದೇಶದಲ್ಲಿ ಕೊರೊನಾ ಲಸಿಕೆಯ ಮಹತ್ವ ಎಲ್ಲರಿಗೂ ಗೊತ್ತಾಗುತ್ತಿದೆ. ಪ್ರತಿಯೊಬ್ಬರೂ ಲಸಿಕೆಯ ಮೂಲಕ ಕೊರೊನಾ ಹೋರಾಟಕ್ಕೆ ಸಿದ್ದರಾಗಬೇಕು ಎಂದು ಅವರು ಹೇಳಿದರು.
ರಾಜ್ಯ ಸರ್ಕಾರಗಳು ಲಸಿಕಾ ಸೌಲಭ್ಯವನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕು. ಲಸಿಕೆಯನ್ನು ಜನರಿಗೆ ಮುಟ್ಟಿಸುವ ಕೆಲಸ ತ್ವರಿತಗತಿಯಲ್ಲಿ ಆಗಬೇಕಿದೆ ಎಂದರು.
ದೇಶದ ಕಾರ್ಪೋರೇಟ್ ವಲಯವೂ ತಮ್ಮ ಉದ್ಯೋಗಿಗಳಿಗೆ ಲಸಿಕೆ ನೀಡುವ ಮೂಲಕ ಲಸಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಎಂದ ಅವರು, ಭವಿಷ್ಯದಲ್ಲಿ ೪೫ ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡಿಕೆ ನಿಲ್ಲುವುದಿಲ್ಲ ಎಂದರು.
ಕಳೆದ ವರ್ಷ ಚಪ್ಪಾಳೆ ತಟ್ಟಿ, ದೀಪ ಬೆಳಗಿಸಿ ಜಾಗಟೆ ಭಾರಿಸಿ ಕೊರೊನಾ ತಡೆಗೆ ನಡೆದ ಜಾಗೃತಿ ಕಾರ್ಯಕ್ರಮಗಳನ್ನು ಶ್ಲಾಘಿಸಿದ ಅವರು, ಈ ಕಾರ್ಯಕ್ರಮಗಳು ಕೊರೊನಾ ಯೋಧರ ಹೃದಯ ಮುಟ್ಟಿತು ಎಂದರು.
ಪ್ರಸ್ತುತ ಭಾರತದಲ್ಲಿ ಕೋವಿಡ್-೧೯ ವಿರುದ್ಧ ದೊಡ್ಡ ಹೋರಾಟ ನಡೆದಿದೆ. ಕೊರೊನಾ ತಡೆಗೆ ಲಸಿಕಾ ಅಭಿಯಾನ ದೊಡ್ಡ ಮಟ್ಟದಲ್ಲಿ ನಡೆದಿರುವುದನ್ನು ಮನ್ ಕೀ ಬಾತ್‌ನಲ್ಲಿ ಶ್ಲಾಘಿಸಿ, ಕೊರೊನಾ ತಡೆಗೆ ಔಷಧಿಯೂ ಇದೆ, ಕಟ್ಟುನಿಟ್ಟಿನ ಕ್ರಮಗಳೂ ಜಾರಿಯಲ್ಲಿವೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಸಮರ್ಪಿತಗೊಂಡಿರುವ ಕೊರೊನಾ ವಾರಿಯರ್ಸ್‌ಗಳ ಜತೆ ಸಂವಾದ ನಡೆಸಿದ್ದು, ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯ ಶುಶ್ರೂಷಕಿ ಸುರೇಖಾ ಅವರ ಜತೆ ಪ್ರಧಾನಿ ಮೋದಿ ಇಂದು ಮಾತನಾಡಿದರು.
ಪ್ರಧಾನಿಯವರ ಜತೆಗಿನ ಮಾತುಕತೆ ಸಂದರ್ಭದಲ್ಲಿ ಶುಶ್ರೂಷಕಿ ಸುರೇಖಾ ಅವರು, ಯಾರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡರೂ ಅವರು ಐಸೋಲೇಟ್ ಆಗಬೇಕು. ಕೋವಿಡ್ ಲಸಿಕೆ ಪಡೆಯಲು ಯಾರೂ ಹೆದರಬಾರದು ಎಂದು ಹೇಳಿದರು.
ಹಾಗೆಯೇ ಮಾತುಮುಂದುವರೆಸಿದ ಸುರೇಖಾ ಅವರು, ಯಾವುದೇ ಲಸಿಕೆ ತಕ್ಷಣಕ್ಕೆ ಪರಿಣಾಮ ಬೀರದಿರಬಹುದು. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸೋಂಕನ್ನು ತಡೆಯುತ್ತದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಂಡು ಲಸಿಕೆ ಪಡೆಯಬೇಕು ಎಂದು ಹೇಳಿದ್ದು ಪ್ರಧಾನಿಯವರ ಮೆಚ್ಚುಗೆ ಪ್ರಶಂಸೆಗೆ ಕಾರಣವಾಯಿತು.