ಕೊರೊನಾಗೆ ಉ. ಪ್ರದೇಶದ ಇಬ್ಬರು ಬಿಜೆಪಿ ಶಾಸಕರು ಬಲಿ

ಲಕ್ನೋ, ಏ. ೨೪- ದೇಶಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್’ಗೆ, ಉತ್ತರ ಪ್ರದೇಶ ರಾಜ್ಯದಲ್ಲಿ
ಶುಕ್ರವಾರ ಒಂದೇ ದಿನ, ಬಿಜೆಪಿ ಪಕ್ಷದ ಇಬ್ಬರು ಶಾಸಕರು ಕೋವಿಡ್ ನಿಂದ ಮೃತಪಟ್ಟ ಘಟನೆ ವರದಿಯಾಗಿದೆ. ಸುರೇಶ್ ಶ್ರೀವಾತ್ಸವ್ ಹಾಗೂ ರಮೇಶ್ ಚಂದ್ರ ದಿವಾಕರ್ ಕೊರೊನಾ ಸೋಂಕಿನಿಂದ ಮೃತಪಟ್ಟ ಬಿಜೆಪಿ ಪಕ್ಷದ ಶಾಸಕರುಗಳೆಂದು ಗುರುತಿಸಲಾಗಿದೆ.
ಸುರೇಶ್ ಶ್ರೀವಾತ್ಸವ್ರವರು ರಾಜಧಾನಿ ಲಕ್ನೋದ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಇತ್ತೀಚೆಗೆ ಇವರು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇವರ ಪತ್ನಿ, ಪುತ್ರ ಕೂಡ ಸೊಂಕಿನಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಇವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುರೇಶ್ ಶ್ರೀವಾತ್ಸವ್ರವರು ಅಸುನೀಗಿದ್ದಾರೆ.
ಸುರೇಶ್ ಶ್ರೀವಾತ್ಸವ್ರವರು ತಳಮಟ್ಟದಿಂದ ಬೆಳೆದು ಬಂದ ನಾಯಕರಾಗಿದ್ದರು. ಬಿಜೆಪಿ ಪಕ್ಷದ ಬೂತ್, ಮಂಡಲ ಅಧ್ಯಕ್ಷರಾಗಿ ಪಕ್ಷದ ನಾನಾ ಹುದ್ದೆ ನಿರ್ವಹಿಸಿದ್ದ ಅವರು, ಶಾಸಕರಾಗಿ ಆಯ್ಕೆಯಾಗಿದ್ದರು. ಜೊತೆಗೆ ಮಂತ್ರಿಯೂ ಆಗಿದ್ದರು.
ಕೊರೊನಾಗೆ ಬಲಿಯಾದ ಮತ್ತೋರ್ವ ಶಾಸಕ ರಮೇಶ್ ಚಂದ್ರ ದಿವಾಕರ್ರವರು, ಜನಪದ್ ಔರೈಯಾ ಪ್ರದೇಶದ ಶಾಸಕರಾಗಿದ್ದರು. ಇವರು ಕೂಡ ಇತ್ತೀಚೆಗೆ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಮೀರತ್ನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ಶಾಸಕರಿಬ್ಬರ ನಿಧನವು ಉತ್ತರ ಪ್ರದೇಶ ಬಿಜೆಪಿ ಪಕ್ಷದಲ್ಲಿ ಶೋಕದ ವಾತಾವರಣ ಉಂಟು ಮಾಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಪಕ್ಷದ ವರಿಷ್ಠರು ಶಾಸಕರಿಬ್ಬರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.