ಕೊರೆದ ಬೋರವೆಲ್‍ಗಳಿಗೆ ವಿದ್ಯುತ್ ಕಲ್ಪಿಸಲು ಡಿಸಿ ಸೂಚನೆ

ಬಾಗಲಕೋಟೆ: ಮಾ27: ಗಂಗಾ ಕಲ್ಯಾಣ ಯೋಜನೆಯಡಿ ವಿವಿಧ ನಿಗಮದಿಂದ ಕೊರೆಯಿಸಲಾದ ಬೋರವೆಲ್‍ಗಳಿಗೆ ವಿದ್ಯುತ್ ಕಲ್ಪಿಸುವುದು ಬಾಕಿ ಉಳಿದಿದ್ದು, ತುರ್ತಾಗಿ ಬೋರವೆಲ್‍ಗಳ ಪಟ್ಟಿ ಪಡೆದು ವಿದ್ಯುದ್ದೀಕರಣಕ್ಕೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಜಾಗೃತಿ ನಿಯಂತ್ರಣ ಹಾಗೂ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸಂಬಂಧಿಸಿದ ಬಾಕಿ ಉಳಿದ 39 ಬೋರವೆಲ್‍ಗಳ ಪೈಕಿ 27ಕ್ಕೆ ವಿದ್ಯುತ್ ಕಲ್ಪಿಸಿದ್ದು, ಉಳಿದ 12 ಹಾಗೂ ಹೊಸದಾಗಿ ಕೊರೆಯಲಾದ 54 ಸೇರಿ ಒಟ್ಟು 66 ಬಾಕಿ ಉಳಿದಿರುತ್ತವೆ. ವಿವಿಧ ನಿಗಮದ ಅಧಿಕಾರಿಗಳು ವಿದ್ಯುದ್ದೀಕರಣಕ್ಕೆ ಬಾಕಿ ಹಾಗೂ ಹೊಸದಾಗಿ ಕೊರೆಯಿಸಲಾದ ಬೋರವೆಲ್‍ಗಳ ಪಟ್ಟಿ ಇದ್ದರೆ ತಕ್ಷಣ ಹೆಸ್ಕಾಂ ಅಧಿಕಾರಿಗಳು ಸಲ್ಲಿಸುವಂತೆ ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ನಗರಸಭೆ, ಪುರಸಭೆಗಳಲ್ಲಿ ಮೀಸಲಿರುವ ಎಸ್.ಎಫ್.ಸಿ ಅನುದಾನ ಸಂಪೂರ್ಣ ಬಳಕೆಯಾಗದಿರುವುದು ಕಂಡುಬಂದ ಹಿನ್ನಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಅಭಿಯಂತರ ಸಭೆ ಕೆರೆದು ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿ ಪೂರ್ಣಗೊಂಡ ಬಗ್ಗೆ ವರದಿ ಸಲ್ಲಿಸುವಂತೆ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ ಅವರಿಗೆ ಸೂಚಿಸಿದರು. ಪರಿಶಿಷ್ಟ ಜಾತಿಗೆ ಸಂಬಂಧಿಸಿದಂತೆ ಶೇ.67 ರಷ್ಟು ಪ್ರಗತಿಯಾದರೆ, ಪರಿಶಿಷ್ಟ ಪಂಗಡದಲ್ಲಿ ಶೇ.60 ರಷ್ಟು ಪ್ರಗತಿಯಾಗಿದ್ದು, ಮಾರ್ಚ ಅಂತ್ಯಕ್ಕೆ ಶೇ.100 ಸಾಧಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಗಣಪತಿ ಪಾಟೀಲ, ನಗರಸಭೆಯ ಪೌರಾಯುಕ್ತ ಮುನಿಷಾಮಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಜಾಗೃತಿ ಉಸ್ತುವಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.