ಕೊರೂನಾ ಮುಕ್ತಗೆ ಸಾರ್ವಜನಿಕರು ಜಾಗೃತರಾಗಬೇಕು

ಪಿರಿಯಾಪಟ್ಟಣ: ಮೇ.28: ಕೋವಿಡ್ ನಿಯಂತ್ರಣದ ಬಗ್ಗೆ ನಿರ್ಲಕ್ಷತನ ವಹಿಸದೆ ಕೊರೂನಾ ಮುಕ್ತಗೊಳಿಸಲು ಸಾರ್ವಜನಿಕರು ಜಾಗೃತರಾಗಬೇಕು ಎಂದು ಶಾಸಕ ಕೆ.ಮಹದೇವ್ ಸೂಚಿಸಿದರು.
ತಾಲೂಕಿನ ಚಿಟ್ಟೇನಹಳ್ಳಿ ಹುಣಸವಾಡಿ, ಆವರ್ತಿ, ದೊಡ್ಡಕಮರವಳ್ಳಿ, ಕೊಪ್ಪ ಗ್ರಾಮ ಪಂಚಾಯಿತಿಗಳಲ್ಲಿ ಕೂವಿಡ್ ನಿಯಂತ್ರಣದ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಕೊರೋನಾ ವೈರಸ್ ನಿಂದಾಗಿ ಇಂದು ರಾಜ್ಯಾದಾದ್ಯಂತ ಸಾರ್ವಜನಿಕರ ಜೀವ ಮತ್ತು ಜೀವನ ಸಂಕಷ್ಟಕ್ಕೆ ಒಳಗಾಗಿದೆ. ಇದನ್ನು ತಡೆಗಟ್ಟಲು ಸರ್ಕಾರ ಮತ್ತು ಹಲವು ಇಲಾಖೆಗಳು ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ. ಆದರೆ ಕೊರೋನಾ ಮುಕ್ತಗೊಳಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ. ವಿನಾಕಾರಣ ಅಲೆದಾಟವನ್ನು ನಿಲ್ಲಿಸಬೇಕು. ಸಾಧ್ಯವಾದಷ್ಟು ಮನೆಯಲ್ಲಿಯೇ ಇದ್ದು ಆರೋಗ್ಯ ರಕ್ಷಣೆ ಮಾಡಬೇಕು ಮತ್ತು ಆರೋಗ್ಯದಲ್ಲಿ ವ್ಯತ್ಯಾಸಗಳು ಕಂಡುಬಂದಲ್ಲಿ ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಈ ಕಾರಣಕ್ಕಾಗಿಯೇ ಪ್ರತಿ ಗ್ರಾಮಗಳಲ್ಲಿಯೂ ಅಂಗನವಾಡಿ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತೆಯರು ಪ್ರತಿ ಮನೆಮನೆಗೆ ತೆರಳಿ ಸರ್ವೇ ಕಾರ್ಯ ಮಾಡುತ್ತಿದ್ದಾರೆ. ಇವರ ಬಳಿ ಆರೋಗ್ಯದ ವ್ಯತ್ಯಾಸದ ಬಗ್ಗೆ ತಿಳಿಸಿದರೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆಯನ್ನು ಮಾಡುತ್ತಾರೆ.ಆದ್ದರಿಂದ ಸಾರ್ವಜನಿಕರು ಕೋವಿಡ್ ನಿಯಂತ್ರಣದ ಪಂಚ ಸೂತ್ರಗಳನ್ನು ಪಾಲಿಸುವುದರ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಕುಮಾರ್ ಮಾತನಾಡಿ ಸಾರ್ವಜನಿಕರು ಕೋವಿಡ್ ದುಷ್ಪರಿಣಾಮದ ಬಗ್ಗೆ ಉದಾಸೀನತೆಯಿಂದ ನಡೆದುಕೊಳ್ಳುತ್ತಿರುವುದು ಕೋರೋನಾ ವೈರಸ್ ಹರಡಲು ಕಾರಣವಾಗುತ್ತಿದೆ. ಆದ್ದರಿಂದ ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಐವತ್ತು ಸಾವಿರ ರೂಗಳ ಅನುದಾನವನ್ನು ಬಿಡುಗಡೆಗೊಳಿಸಿದೆ. ಈ ಅನುದಾನವನ್ನು ಕೋವಿಡ್ ನಿಯಂತ್ರಣಕ್ಕೆ ಬಳಸುವಂತೆ ಸೂಚಿಸಿದೆ. ಇದರಲ್ಲಿ ಔಷಧಿ ಖರದಿಸುವುದು,ಸರ್ವೆ ಕಾರ್ಯಕ್ಕೆ ತೆರಳುವ ವ್ಯಕ್ತಿಗಳಿಗೆ ಸುರಕ್ಷಾ ಪರಿಕರಗಳನ್ನು ಒದಗಿಸುವುದು ಮತ್ತು ಆರೋಗ್ಯ ತಪಾಸಣೆಯ ಪರಿಕರಗಳನ್ನು ನೀಡುವುದಕ್ಕೆ ಅನುದಾನವನ್ನು ಬಳಸಲಾಗುತ್ತಿದೆ. ಅಲ್ಲದೆ ಪ್ರತಿ ಗ್ರಾಮಗಳಲ್ಲಿಯೂ ಸ್ಯಾನಿಟಸ್ ಮಾಡಿಸಲು ಮತ್ತು ಸೋಂಕಿತರ ಪ್ರಾಥಮಿಕ ಸಂಪರ್ಕಗಳ ಪರೀಕ್ಷೆ ನಡೆಸುವುದು ಅತ್ಯಗತ್ಯವಾಗಿದೆ. ಈಗಾಗಲೇ ಶಾಸಕರ ಪರಿಶ್ರಮದಿಂದ 4,000 ವೈದ್ಯಕೀಯ ಕಿಟ್ಟುಗಳನ್ನು ಪಂಚಾಯತಿಗಳಿಗೆ ನೀಡಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕನು ಕೂಡ ಕೊರೋನ ಮುಕ್ತ ಸಮಾಜವನ್ನು ನಿರ್ಮಿಸಲು ಜಾಗೃತರಾಗಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಚಂದ್ರಮೌಳಿ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಶರತ್ ಬಾಬು, ತಾ ಪಂ ಸದಸ್ಯ ರಂಗಸ್ವಾಮಿ, ಗ್ರಾಪಂ ಅಧ್ಯಕ್ಷ ಮಹದೇವ,ರೇಣುಕಸ್ವಾಮಿ, ರಾಜಸ್ವ ನಿರೀಕ್ಷಕ ಪಾಂಡು, ಪ್ರದೀಪ್ ಸೇರಿದಂತ್ತೆ ಇತರರು ಹಾಜರಿದ್ದರು.