ಕೊರಮ ಸಮಾಜದ ಕಾಮಧೇನು ಕೈಕಾಡಿ ಮಹಾರಾಜರು : ಸಂಜುಕುಮಾರ ಬೇಲೂರ

ಬೀದರ: ಏ.19:ಕೊರಮ (ಕೊರವ)ರ ಸಮಾಜದ ಆರಾಧ್ಯ ದೈವ, ಸಮಾಜವನ್ನು ನಿಸ್ವಾರ್ಥದಿಂದ ಮುನ್ನಡೆಸಿದ ಕೀರ್ತಿ ಕೈಕಾಡಿ ಮಹಾರಾಜರಿಗೆ ಸಲ್ಲುತ್ತದೆ. ಮಹಾರಾಷ್ಟ್ರದ ಪಂಢರಾಪುರದವರಾದ ಪೂಜ್ಯ ಗುರುಗಳು ಮಹಾರಾಷ್ಟ್ರ ಮಾತ್ರವಲ್ಲ ಎಲ್ಲಾ ರಾಜ್ಯಗಳ ಕೊರಮ ಕೊರವ ಸಮಾಜದ ಜನತೆಗೆ ಬೆಳಕಾಗಿದ್ದರು ಎಂದು ಬೀದರ ಜಿಲ್ಲಾ ಕೊರಮ (ಕೊರವ)ರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಸಂಜೀವಕುಮಾರ ಬೇಲೂರ ತಿಳಿಸಿದರು.
ನಗರದ ಅಂಬೇಡ್ಕರ್ ವೃತ್ತದ ಸಮೀಪದಲ್ಲಿರುವ ಸವಿತಾ ಸಮಾಜದ ಸಭಾಂಗಣದಲ್ಲಿ ಬೀದರ ಜಿಲ್ಲಾ ಕೊರಮ (ಕೊರವ)ರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ ಪೂಜ್ಯ ಕೈಕಾಡಿ ಮಹಾರಾಜರ 116ನೇ ಜಯಂತಿ ಮತ್ತು ರಾಮನವಮಿ ಸಮಾರಂಭದಲ್ಲಿ ಮಾತನಾಡಿದರು.
ಕೈಕಾಡಿ ಮಹಾರಾಜರು ಸಮಾಜದ ಏಳ್ಗೆಗೆ ಶ್ರಮಿಸಿದ್ದರು. ಸಮಾಜದಲ್ಲಿ ಪರಸ್ಪರ ಸಹಬಾಳ್ವೆ, ಪ್ರೀತಿ ವಿಶ್ವಾಸದಿಂದ ಬದುಕುವಂತೆ ಮಾರ್ಗದರ್ಶನ ಮಾಡಿದ್ದರು. ನಮ್ಮ ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದರು. ಅಲ್ಲದೇ ರಘುಕುಲದ ದೈವ ಶ್ರೀರಾಮನು 14 ವರ್ಷಗಳ ಕಾಲ ವನವಾಸ ಅನುಭವಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರಲ್ಲದೆ ಬೀದರ ತಾಲೂಕಿನ ಮಂದಕನಳ್ಳಿ, ಔರಾದ ತಾಲೂಕಿನ ಬೇಲೂರ ಎನ್ ಗ್ರಾಮದಲ್ಲಿ ಕೈಕಾಡಿ ಮಹಾರಾಜರ ಜಯಂತಿ ಹಾಗೂ ಶ್ರೀರಾಮನವಮಿ ಪ್ರಯುಕ್ತ ಜನತೆಗೆ ವಿಶೇಷ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪ್ರತೀ ವರ್ಷ ಇದೇ ರೀತಿ ಕಾರ್ಯಕ್ರಮ ಮುಂದುವರೆಸಿಕೊಂಡು ಹೋಗಲಾಗುವುದು ಎಂದು ಸಂಜೀವಕುಮಾರ ಬೇಲೂರ ತಿಳಿಸಿದರು.
ಇದೇ ವೇಳೆ ಕೈಕಾಡಿ ಮಹಾರಾಜರ ಹಾಗೂ ಶ್ರೀರಾಮರ ಭಾವಚಿತ್ರಕ್ಕೆ ಲೋಕಸಭಾ ಚುನಾವಣೆ ಪ್ರಯುಕ್ತ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರಳವಾಗಿ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ಸಂಘದ ಅಧ್ಯಕ್ಷರಾದ ಸಂತೋಷ ಡಿ. ಕೊರವ, ಕಾರ್ಯಾಧ್ಯಕ್ಷ ನಾಗೇಶ ಕೈಕಾಡಿ, ಸದಸ್ಯರಾದ ಸಂತೋಷ ಜನವಾಡಾ, ಸಂಜೀವಕುಮಾರ ನೌಬಾದ, ಸಂಜೀವಕುಮಾರ ಮೆಹಕರ್, ತುಕಾರಾಮ ಜನವಾಡಾ, ವಿನಾಯಕ ಬೆಳ್ಳೂರ, ಸಚಿನ್ ದುಳಗೆ, ಸಂತೋಷ ಮರಕಲ್, ಅಶೋಕ ಕಪಲಾಪುರ, ಹರೀಶ ಮಂದಕನಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.