ಕೊರಬು ದ್ರಾಕ್ಷಿ ತೋಟಕ್ಕೆ ಜಿಲ್ಲಾಧಿಕಾರಿ ಭೇಟಿ

ಅಫಜಲಪುರ:ಫೆ.15: ರೈತರು ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಒತ್ತು ನೀಡಿದರೆ ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗುತ್ತದೆ. ಜೆ.ಎಂ.ಕೊರಬು ಅವರ ತೋಟದಲ್ಲಿ ಬೆಳೆದಿರುವ ದ್ರಾಕ್ಷಿ ಬೆಳೆ ಇತರ ರೈತರಿಗೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ತಿಳಿಸಿದರು.

ತಾಲೂಕಿನ ಮಾಶಾಳ ಗ್ರಾಮದ ಪ್ರಗತಿಪರ ರೈತರಾಗಿರುವ ಜೆ.ಎಂ.ಕೊರಬು ಅವರ ತೋಟಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲೇ ಈ ರೀತಿ ದ್ರಾಕ್ಷಿ ಬೆಳೆದಿರುವುದು ನಾನು ನೋಡಿಲ್ಲ. ಒಳ್ಳೆಯ ಸಾವಯುವ ಕೃಷಿಗೆ ಒತ್ತು ನೀಡಿ ವಿವಿಧ ಬಗೆಯ ದ್ರಾಕ್ಷಿಗಳನ್ನು ಬೆಳೆದಿದ್ದೀರಿ. ತೋಟಗಾರಿಕೆ ಇಲಾಖೆಯವರು ಈ ಭಾಗದಲ್ಲಿ ಸ್ವಲ್ಪ ಹೆಚ್ಚಿನ ಒಲವು ತೋರಿಸಿಲ್ಲ ಎಂದು ಕಾಣುತ್ತಿದೆ. ಮುಂದೆ ನಿಮ್ಮ ಜಮೀನಿಗೆ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಕಚೇರಿಯಿಂದ ಒಂದು ತಂಡ ರಚನೆ ಮಾಡಿ ಆಸಕ್ತಿ ಇರುವ ರೈತರಿಗೆ ಕಳುಹಿಸಲಾಗುವುದು. ಸಾಧ್ಯವಾದಷ್ಟು ರೈತರಿಗೆ ಮಾಹಿತಿ ನೀಡಿದರೆ ಬೇರೆ ರೈತರು ಸಹ ಇಂತಹ ದ್ರಾಕ್ಷಿ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿ ಜೆ.ಎಂ.ಕೊರಬು ಅವರ ಕೃಷಿ ಕಾಯಕಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಗತಿಪರ ರೈತ ಜೆ.ಎಂ.ಕೊರಬು ಮಾತನಾಡಿ, ಮಾಂಜರಿ ಕಿಸ್ ಮಿಸ್, ಮಾಂಜರಿ ನವೀನ್, ಮಾಂಜರಿ ಮೇಡಿಕಾ, ಮಾಂಜರಿ ಶಾಮಾ, ಮಾಣಿಕ್ ಚಂದ್ ಹೀಗೆ ಹಲವು ಹೊಸ ಮತ್ತು ಹಳೆಯ ತಳಿಯ ದ್ರಾಕ್ಷಿ ಬೆಳೆಗಳನ್ನು ಬೆಳೆಯಲಾಗಿದೆ. ಇದನ್ನು ಒಣ ದ್ರಾಕ್ಷಿ ಮಾಡಿ ವಿವಿಧ ನಗರ ಪ್ರದೇಶಗಳಿಗೆ ಮಾರಾಟಕ್ಕೆ ಕಳುಹಿಸಲಾಗುವುದು. ಇದರಿಂದ ರೈತರಿಗೆ ಸಾಕಷ್ಟು ಲಾಭ ಬರಲಿದೆ. ಆದರೆ ಇಲ್ಲಿನ ರೈತರು ಕಬ್ಬು, ಹತ್ತಿ, ತೊಗರಿ ಮಾತ್ರ ಹಾಕುತ್ತಾರೆ.ಇದರಿಂದ ಹೆಚ್ಚಿನ ಲಾಭ ಬರುವುದಿಲ್ಲ ಎಂದು ತಿಳಿಸಿದ ಅವರು ಜಿಲ್ಲಾಧಿಕಾರಿ ಕಚೇರಿಯಿಂದ ಬಂದ ರೈತರಿಗೆ ನಾನು ಖುದ್ದಾಗಿ ದ್ರಾಕ್ಷಿ ಬೆಳೆ ಬೆಳೆಯುವ ಕುರಿತು ಮಾಹಿತಿ ನೀಡುವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ಗಜಾನನ್ ಬಾಳೆ, ತಹಸೀಲ್ದಾರ್ ಸಂಜೀವಕುಮಾರ ದಾಸರ, ಪಿಎಸ್ ಐ ಮಹೆಬೂಬ ಅಲಿ ಸೇರಿದಂತೆ ಇನ್ನಿತರ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.