ಕೊರಟಗೆರೆ: ಶಾಂತಿಯುತ ಚುನಾವಣೆಗೆ ಸಕಲ ಸಿದ್ಧತೆ

ಕೊರಟಗೆರೆ, ಏ. ೩- ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಬಿಡುಗಡೆಗೊಳಿಸಿದ್ದು, ಕೊರಟಗೆರೆ ೧೩೪ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಚುನಾವಣೆಗೆ ತಾಲ್ಲೂಕು ಆಡಳಿತ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ ಎಂದು ಕ್ಷೇತ್ರ ಚುನಾವಣಾಧಿಕಾರಿ ಹಾಲಸಿದ್ದಪ್ಪ ಪೂಜೇರಿ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಚುನಾವಣಾ ಆಯೋಗ ಮೇ ೧೦ ರಂದು ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ನಿಗದಿಪಡಿಸಿದ್ದು ಮಾರ್ಚ್ ೨೯ ರಿಂದಲೇ ನೀತಿ ಸಂಹಿತೆ ಜಾರಿಯಾಗಿದೆ ಎಂದರು.
ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ತಾಲ್ಲೂಕು ಆಡಳಿತ ಸರ್ವ ಸಿದ್ದತೆಗಳನ್ನು ಮಾಡಿಕೊಂಡಿದೆ. ೯೯೯೯೭ ಪುರುಷ, ೯೯೯೪೯ ಮಹಿಳಾ ಮತ್ತು ತೃತೀಯ ಲಿಂಗಿಗಳು ೧೪ ಸೇರಿದಂತೆ ಒಟ್ಟು ೧೯೯೯೬೦ ಮಂದಿ ಮತದಾರರಿದ್ದಾರೆ. ಇದರಲ್ಲಿ ೨೩೩೨ ವಿಕಲ ಚೇತನ ಮತದಾರರು ಹಾಗೂ ೬೦೪೭ ಮಂದಿ ೮೦ ವರ್ಷಗಳಿಗಿಂತ ಮೇಲ್ಪಟ್ಟ ಹಿರಿಯ ಮತದಾರರಿದ್ದು, ಸುಲಲಿತ ಮತದಾನಕ್ಕಾಗಿ ಕ್ಷೇತ್ರದಲ್ಲಿ ೨೪೨ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಿಧಾನಸಭಾ ಕ್ಷೇತ್ರದಲ್ಲಿ ೧೩೨ ಮತಗಟ್ಟೆಗಳನ್ನು ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ೮೦ ವರ್ಷ ಮೇಲ್ಪಟ್ಟ ಹಿರಿಯ ಮತದಾರರು ಬಯಸಿದರೆ ಅವರು ತಮ್ಮ ಮನೆಯಿಂದಲೆ ಅಂಚೆ ಮತದಾನ ಮಾಡಲು ವ್ಯವಸ್ಥೆ ಮಾಡಲಾಗುವುದು. ವಿಕಲಚೇತನರು ಮತ್ತು ತೀವ್ರ ಅನಾರೋಗ್ಯ ಪೀಡಿತರಿಗೂ ಮನೆಯಿಂದಲೇ ಮತದಾನ ಮಾಡಲು ಅವಕಾಶವಿದೆ. ಅದರೆ ಇವರು ತಮ್ಮ ಮತಕೇಂದ್ರ ವ್ಯಾಪ್ತಿಯ ಬಿ.ಎಲ್.ಓ ಗಳ ಮೂಲಕ ೧೨ ಡಿ ಫಾರಂ ಮೂಲಕ ಒಪ್ಪಿಗೆ ಪತ್ರ ನೀಡಬೇಕು ಎಂದು ತಿಳಿಸಿದರು.
ಸಹಾಯಕ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಮುನಿಶಾಮಿರೆಡ್ಡಿ ಮಾಹಿತಿ ನೀಡಿ, ಚುನಾವಣಾ ಆಕ್ರಮಗಳನ್ನು ತಟೆಗಟ್ಟಲು ಹಾಗೂ ಶಾಂತಿಯುತವಾಗಿ ನಡೆಸಲು ತಾಲ್ಲೂಕಿನ ಪೋಲೇನಹಳ್ಳಿ, ಬೈರೇನಹಳ್ಳಿ ಕ್ರಾಸ್, ಹನುಮಂತಗಿರಿ, ಕಾಟೇನಹಳ್ಳಿ ಕ್ರಾಸ್, ಜೋನಿಗರಹಳ್ಳಿ ಕ್ರಾಸ್ ಸೇರುದಂತೆ ಒಟ್ಟು ೫ ತಪಾಸಣಾ ಕೇಂದ್ರಗಳನ್ನು ತೆರೆದಿದ್ದು ನಿತ್ಯ ೫ ಪಾಳಿಯಲ್ಲಿ ಚೆಕ್‌ಪೋಸ್ಟ್ ಸಿಬ್ಬಂದಿಗಳು ದಿನದ ೨೪ ಗಂಟೆಗಳು ಕರ್ತವ್ಯ ನಿರ್ವಹಸಲ್ಲಿದ್ದಾರೆ. ಮುಕ್ತ ಮತ್ತು ನ್ಯಾಯಯುತ ಚುನಾವಣೆಗಾಗಿ ೨೪೨ ಮತಗಟ್ಟೆಗಳನ್ನು ೧೮ ಸೆಕ್ಟರ್‌ಗಳಾಗಿ ವಿಭಜಿಸಲಾಗಿದ್ದು ಸೆಕ್ಟರ್ ಆಧಿಕಾರಿಗಳ ನೇಮಕ ಮಾಡಲಾಗಿದೆ. ಚುನಾವಣಾ ಆಕ್ರಮಗಳ ತಡೆಗಾಗಿ ಸಂಚಾರಿ ದಳ, ವೀಡಿಯೂಗ್ರಫಿ ತಂಡಗಳನ್ನು ರಚಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಚುನಾವಣಾ ಪ್ರಚಾರ ಮತ್ತು ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವವರ ವಿರುದ್ದ ನಿಗಾವಹಿಸಲು ವೀಡಿಯೂ ವಿಜಿಲೆನ್ಸ್ ತಂಡಗಳನ್ನು ರಚಿಸಲಾಗಿದೆ.
ನೀತಿ ಸಂಹಿತೆ ಮತ್ತು ಚುನಾವಣಾ ಕಟ್ಟುಪಾಡುಗಳು ಎಲ್ಲರಿಗೂ ಒಂದೇ ಆಗಿದ್ದು ಶಾಂತಿಯುತ ಮತದಾನಕ್ಕಾಗಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು. ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳು ಕಂಡು ಬಂದರೆ ಸಾರ್ವಜನಿಕರು ತಕ್ಷಣವೇ ದೂರು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ ೦೮೧೩೮-೨೩೨೧೫೩ ಗೆ ಕರೆ ಮಾಡಿ ಮಾಹಿತಿ ನೀಡಬೇಕು, ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದರು.
ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟಗೊಳಿಸಿ ನೀತಿ ಸಂಹಿತೆ ಜಾರಿಗೊಳಿಸಿದ್ದು, ಗೆಜೆಟ್ ನೋಟಿಫಿಕೇಷನ್ ೧೩ನೇ ಏಪ್ರಿಲ್ ರಂದು ಹೊರಡಿಸಲಾಗುತ್ತದೆ. ಏ.೨೦ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಏ. ೨೧ ನಾಮಪತ್ರಗಳ ಪರಿಶೀಲನೆ ನಡೆಯಲಿದೆ, ನಾಮಪತ್ರ ವಾಪಸ್ ಪಡೆಯಲು ಏ.೨೪ ಕೊನೆಯ ದಿನವಾಗಿದೆ. ಮೇ ೧೦ ರಂದು ಚುನಾವಣೆ ನಡೆಯಲಿದ್ದು, ಮೇ ೧೩ ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಮಾಹಿತಿ ನೀಡಿದರು.