ಕೊರಟಗೆರೆಯಲ್ಲಿ ನಾಳೆ ಬೃಹತ್ ಉದ್ಯೋಗ ಮೇಳ

ತುಮಕೂರು, ಮಾ. ೪- ಕೊರಟಗೆರೆ ವಿಧಾನಸಭಾ ಕ್ಷೇತ್ರದ ವಿದ್ಯಾವಂತ ನಿರುದ್ಯೋಗಿ ಯುವಜನರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಮಾ. ೫ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೪ ಗಂಟೆಯ ವರೆಗೆ ಬೃಹತ್ ಉದ್ಯೋಗ ಮೇಳವನ್ನು ಕೊರಟಗೆರೆ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ ಸಮಾಜ ಸೇವಕ ಕೆ.ಎಂ.ಮುನಿಯಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಮತ್ತು ಬೆಂಗಳೂರಿನ ವಿವಿಧೆಡೆಗಳಿಂದ ಸುಮಾರು ೫೦ಕ್ಕೂ ಹೆಚ್ಚು ಕಂಪೆನಿಗಳು ಉದ್ಯೋಗಾರ್ಥಿಗಳನ್ನು ಅರಿಸಿ ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುತಿದ್ದು, ಸ್ಕ್ರೀನಿಂಗ್ ನಂತರ ಆಯ್ಕೆಯಾಗುವ ಆರ್ಹ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ವಿತರಿಸಲಾಗುವುದು ಎಂದರು.
ಕೊರಟಗೆರೆ ತಾಲ್ಲೂಕು ಅಲ್ಲದೆ ಜಿಲ್ಲೆಯ ವಿವಿಧಡೆಗಳಿಂದ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಐಟಿಐ, ಡಿಪ್ಲೋಮಾ, ಬಿ.ಎಸ್ಸಿ, ಬಿಕಾಂ, ಎಂಬಿಎ, ಎಂ.ಕಾಂ, ಐಟಿಐ ಮತ್ತು ಬಿಇ ಕಲಿತವರು ಮೇಳದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ. ಮೇಳಕ್ಕೆ ಬರುವ ಸಂದರ್ಭದಲ್ಲಿ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲಾತಿಗಳ ಜತೆಗೆ, ಆಧಾರ್ ಕಾರ್ಡ್ ಹಾಗೂ ಭಾವಚಿತ್ರದೊಂದಿಗೆ ಹಾಜರಿರಬೇಕು ಎಂದರು. ಮಾ. ೫ ರಂದು ನಡೆಯುವ ಉದ್ಯೋಗ ಮೇಳವನ್ನು ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟಿಸುವರು. ಮಾಜಿ ಶಾಸಕ ಸುರೇಶಗೌಡ, ಸಂಸದ ಜಿ.ಎಸ್. ಬಸವರಾಜು, ಬೆಂಗಳೂರು ಗ್ರಾಮಾಂತರ ಜಿ.ಪಂ. ಮಾಜಿ ಅಧ್ಯಕ್ಷ ಮರಿಸ್ವಾಮಿ, ವಿವಿಧ ಮಠಾಧೀಶರು ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಟಿಕೆಟ್‌ಗಾಗಿ ನಾನು ಸೇರಿದಂತೆ ಐದು ಜನರು ಪೈಪೋಟಿ ನಡೆಸುತ್ತಿದ್ದು, ಕಳೆದ ಐದು ವರ್ಷಗಳಿಂದ ಕ್ಷೇತ್ರದಲ್ಲಿ ಹಗಲಿರುಳು ಕೆಲಸ ಮಾಡಿ ಪಕ್ಷ ಕಟ್ಟಿದ ನನಗೆ ಟಿಕೆಟ್ ದೊರೆಯಲಿದೆ ಎಂಬ ನಂಬಿಕೆ ಇದೆ. ಕೊರೊನಾ ಪೂರ್ವದಲ್ಲಿ ಮತ್ತು ಕೊರೊನಾ ನಂತರದಲ್ಲಿಯೂ ಜನರ ಕಷ್ಟ-ಸುಖಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿದ್ದು, ಜನರಲ್ಲಿ ಬಿಜೆಪಿ ಪಕ್ಷದ ಬಗ್ಗೆ ಒಳ್ಳೆಯ ಭಾವನೆ ಬಂದಿದೆ. ಹಾಗಾಗಿ ನನಗೆ ಟಿಕೇಟ್ ನೀಡಿದರೆ ಕೊರಟಗೆರೆಯಲ್ಲಿ ಈ ಬಾರಿ ಬಿಜೆಪಿ ಖಾತೆ ತೆರೆದು ಹೊಸ ಇತಿಹಾಸ ಬರೆಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಗೋವಿಂದರೆಡ್ಡಿ, ಪ್ರಕಾಶ್‌ಕುಮಾರ್, ದಿವ್ಯಾನಂದ, ಸಿದ್ದಲಿಂಗಪ್ಪ, ರವಿ, ಮಂಜಣ್ಣ, ಕೆ.ಎಂ. ಮುನಿಯಪ್ಪ ಪುತ್ರ ಚೇತನ್ ಉಪಸ್ಥಿತರಿದ್ದರು.