ಕೊಬ್ಬರಿ ಹೋರಿಯೊಂದಿಗೆ ರೈತ ಸಾವು

(ಸಂಜೆವಾಣಿ ವಾರ್ತೆ)
ಬ್ಯಾಡಗಿ,ಜು6 : ಹೊಲ ಉಳುಮೆ (ರಂಟಿ) ಮಾಡುವ ಸಂದರ್ಭದಲ್ಲಿ ಕೊಳವೆಭಾವಿಗೆ ಎಳೆದಿದ್ದ ಸರ್ವೀಸ್ ವೈರ್ ತಗುಲಿ ತನ್ನ ನೆಚ್ಚಿನ ಕೊಬ್ಬರಿ ಹೋರಿ (ಬ್ಯಾಡಗಿ ಕಿಂಗ್) ಜೀವ ಉಳಿಸಲು ಹೋಗಿ ಯುವ ರೈತನೊಬ್ಬ ತಾನೂ ಸಹ ಸಾವನ್ನಪ್ಪಿದ ಧಾರುಣ ಘಟನೆ ತಾಲ್ಲೂಕಿನ ಮಲ್ಲೂರ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಮೃತನನ್ನು ಮಲ್ಲೂರ ಗ್ರಾಮದ ಸಂತೋಷಗೌಡ ಪ್ರಭುಗೌಡ ಹೊಮ್ಮರಡಿ (22) ಎಂದು ಗುರ್ತಿಸಲಾಗಿದ್ದು, ಎಂದಿ ನಂತೆ ಎಲೆಕೋಸು (ಕ್ಯಾಬೀಜ್) ಬೆಳೆಗೆ ರಂಟಿ (ನೇಗಿಲು) ಮೂಲಕ ಸಾಲು ಮಾಡಲು ಹೋಗಿದ್ದ ಇದೇ ವೇಳೆ ಕೊಳವೆಭಾವಿ ಅಳವಡಿಸಿದ್ದ ಸರ್ವೀಸ್ ವೈರ್ ಕೈಗೆಟುಕುವಂತಿದ್ದು, ಅಲ್ಲದೇ ಅದರ ಮೇಲಿದ್ದ ಸೇಫ್ಟಿ ಕೋಟಿಂಗ್ ಸಹ ಕಿತ್ತುಹೋಗಿದೆ, ಅದರೆ ಅದನ್ನು ಗಮನಿಸದೇ ಸಂತೋಷಗೌಡ ನೆಲವನ್ನು ನೋಡುತ್ತಾ ಉಳುಮೆ ಮಾಡುತ್ತಿದ್ದಾನೆ, ಇದೇ ವೇಳೆ ಎತ್ತಿನ ಕೊಂಬಿಗೆ ಸರ್ವೀಸ್ ವೈರ್ ಸಿಕ್ಕು ಹಾಕಿಕೊಂಡಿದೆ, ಅದರಲ್ಲಿದ್ದ ವಿದ್ಯುತ್ ಹರಿದು ಎತ್ತು ಒದ್ದಾಡು ತ್ತಿರುವುದನ್ನು ನೋಡಲಾಗದ ಸಂತೋಷ್ ವೈರ್ ತಪ್ಪಿಸಲು ಮುಂದಾದಾಗ ದುರ್ಘಟನೆ ನಡೆದಿದೆ, ತೀವ್ರ ಸಂಕಷ್ಟ ದಿಂದ ಒದ್ದಾಡುತ್ತಿದ್ದ ಆತನನ್ನು ಅಕ್ಕಪಕ್ಕದವರು ಬಂದು ಆಸ್ಪತ್ರೆಗೆ ಸಾಗಿಸಲು ಮುಂದಾದರೂ ಸಹ ಮಾರ್ಗ ಮದ್ಯೆ ಸಾವನ್ನಪ್ಪಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಸಾವು ತಂದ ತಂದ ಹೋರಿ ಹುಚ್ಚು:ಸಂತೋಷಗೌಡನಿಗೆ ಕೊಬ್ಬರಿ ಹೋರಿ ಎಂದರೇ ಎಲ್ಲಿಲ್ಲದ ಹುಚ್ಚು ಹೀಗಾಗಿಯೇ ತನ್ನ ಎತ್ತಿಗೆ ಬ್ಯಾಡಗಿ ಕಿಂಗ್ ಎಂದು ನಾಮಕರಣ ಮಾಡಿದ್ದ ಸಾವನ್ನಪ್ಪಿದ ಹೋರಿ ಬಹಳಷ್ಟು ಸ್ಪರ್ಧೇಗಳಲ್ಲಿ ಬಹು ಮಾನ ಗಳಿಸಿತ್ತು ಎನ್ನಲಾಗಿದೆ, ತನ್ನ ನೆಚ್ಚಿನ ಹೋರಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ವೇಳೆ ಗಮನಿಸಿ ತಡೆಯಲಾಗದೇ ಏಕಾಏಕಿ ಕೊಂಬಿಗೆ ಸಿಕ್ಕಿದ್ದ ವೈರ್ ತಪ್ಪಿಸಲು ಮುಂದಾಗಿದ್ದಾನೆ, ಈ ವೇಳೆ ಹೊಲದಲ್ಲಿದ್ದ ಜನರೂ ಸಹ ಎತ್ತಿಗೆ ಕರೆಂಟ್ ಹೊಡೆದಿದೆ ಹೋಗಬೇಡ ಎಂದು ಕೂಗಿದರೂ ಸಹ ಕೇಳದ ಸಂತೋಷ್‍ಗೌಡ ಹೇಗಾದರೂ ಮಾಡಿ ಎತ್ತಿನ ಜೀವವನ್ನು ಉಳಿಸಲು ಮುಂದಾದಾಗ ತನಗೂ ಸಹ ಕರೆಂಟ್ ತಗುಲಿದೆ, ಜೊತೆಯಲ್ಲಿದ್ದ ಇನ್ನೊಂದು ಎತ್ತಿಗೂ ವಿದ್ಯುತ್ ಸಗಲು ಸಾವನ್ನಪ್ಪಿದೆ. ಘಟನೆ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಅಪಾರ ಜನಸ್ತೋಮ: ಕೊಬ್ಬರಿ ಹೋರಿಯಿಂದ (ಬ್ಯಾಡಗಿ ಕಿಂಗ್) ಅಪಾರ ಜನಪ್ರಿಯತೆ ಗಳಿಸಿದ್ದ ಸಂತೋಷಗೌಡನ ಅಂತ್ಯಕ್ರಿಯೆಯಲ್ಲಿ ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಯ ಕೊಬ್ಬರಿ ಹೋರಿಗಳ ಮಾಲೀಕರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು, ಮಳೆ ಲೆಕ್ಕಿಸದೇ ಅಚಿತಿಮಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರು ಯುವರೈತ ಸಂತೋಷಗೌಡನ ಧಾರುಣ ಸಾವಿಗೆ ಕಂಬನಿ ಮಿಡಿದರು. ಇನ್ನೂ ಏಕೈಕ ಪುತ್ರನನ್ನು ಕಳೆದುಕೊಂಡ ಪ್ರಭುಗೌಡ ಹೊಮ್ಮರಡಿ ದಂಪತಿಗಳು ಕಣ್ಣೀರ ಕಟ್ಟೆ ಒಡೆದಿತ್ತು..
ಸಂತಾಪ: ಸಂತೋಷಗೌಡನ ಸಾವಿಗೆ ಸಂಸದ ಶಿವಕುಮಾರ ಉದಾಸಿ ಸೇರಿದಂತೆ ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಸುರೇಶಗೌಡ ಪಾಟೀಲ, ಮುಖಂಡ ಎಸ್.ಆರ್.ಪಾಟೀಲ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಗಂಗಾಧರ ಎಲಿ ಸೇರಿದಂತೆ ರೈತ ಮುಖಂಡರು ಸಂತಾಪ ಸೂಚಿಸಿದ್ದಾರೆ.