ಕೊಬ್ಬರಿ ಬೆಳೆಗಾರರ ಸಮಸ್ಯೆ ಆಲಿಸದ ಸಚಿವರು:ಆಕ್ರೋಶ

ತಿಪಟೂರು, ಮಾ. ೪- ತಾಲ್ಲೂಕಿನಲ್ಲಿ ಸಚಿವ ಸಂಪುಟ ದರ್ಜೆಯ ಸಚಿವರಿದ್ದರೂ ೧೧ ದಿನಕ್ಕೆ ಕಾಲಿಟ್ಟಿರುವ ಕೊಬ್ಬರಿ ಬೆಳೆಗಾರರ ಪ್ರತಿಭಟನೆ ಸ್ಥಳಕ್ಕೆ ಸೌಜನ್ಯಕ್ಕಾದರೂ ಬಾರದೇ ಇರುವುದು ಸರ್ಕಾರಕ್ಕೆ ರೈತರ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ಮಾಜಿ ಶಾಸಕ ಕೆ.ಷಡಕ್ಷರಿ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಆಡಳಿತ ಸೌಧದ ಎದುರು ನಡೆಸುತ್ತಿರುವ ಕೊಬ್ಬರಿ ಬೆಳೆಗೆ ಬೆಂಬಲ ಬೆಲೆ ಸಿಗುವಂತೆ ನಡೆಯುತ್ತಿರುವ ಅನಿರ್ಧಿಷ್ಟಾವದಿ ಮುಷ್ಕರಕ್ಕೆ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿಕ್ಷಣ ಸಚಿವರು ಸಹ ರೈತರಾಗಿ, ವರ್ತಕರು ಆಗಿದ್ದು ಕೊಬ್ಬರಿ ಬೆಲೆಯು ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಜನರು ಜೀವನ ನಡೆಸುವುದು ಕಷ್ಟಕರವಾಗಿದೆ. ಇದನ್ನು ಅರಿತು ಅವರು ಸರ್ಕಾರದ ಬಜೆಟ್‌ನಲ್ಲಿ ಜವಾಬ್ದಾರಿಯುತವಾಗಿ ಕೊಬ್ಬರಿಗೆ ಬೆಂಬಲ ಬೆಲೆ ಘೋಷಿಸಬಹುದಿತ್ತು. ಇಲ್ಲವಾದಲ್ಲಿ ಅಲ್ಲಿಯೇ ಧರಣಿ ಮಾಡಿ ರೈತರ ಪರವಾಗಿ ಕೆಲಸ ಮಾಡಬೇಕಾಗಿತ್ತು ಅದನ್ನು ಮಾಡದ ಪರಿಣಾಮ ಕೊಬ್ಬರಿ ಬೆಲೆಯು ಕುಸಿಯಲು ಕಾರಣವಾಗಿದೆ ಎಂದರು.
ಜನರ ಪರವಾಗಿ ಆಡಳಿತ ನಡೆಸುವ ಸರ್ಕಾರ ರೈತರ ಬಗ್ಗೆ ಕಾಳಜಿ ಇಲ್ಲ. ಡಬಲ್ ಇಂಜಿನ್ ಸರ್ಕಾರವು ರೈತರಿಗೆ ಯಾವ ಅನುಕೂಲವನ್ನು ಮಾಡುವುದರಲ್ಲಿ ವಿಫಲವಾಗಿದೆ ಎಂದರು.
ತಾಲ್ಲೂಕಿನಲ್ಲಿ ನಡೆದ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ರೈತರು ಹಾಗೂ ಮುಖಂಡರು ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗುಜರಾತಿನ ಕೈಗಾರಿಕಾ ಉದ್ಯಮಿಗಳಿಗೆ ಕೋಟ್ಯಂತರ ರೂ. ನೀಡಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಧಾರಣೆ ಬಿದ್ದಂತಹ ಸ್ಥಿತಿಯಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ಕೊಂಡುಕೊಳ್ಳಬೇಕು ಎಂದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅದ್ಯಕ್ಷ ನ್ಯಾಕೇನಹಳ್ಳಿ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಂತರಾಜು, ನಗರಸಭಾ ಸದಸ್ಯ ಪ್ರಕಾಶ್, ತಾ.ಪಂ. ಮಾಜಿ ಸದಸ್ಯ ರವಿಕುಮಾರ್, ಸುರೇಶ್, ನಗರಸಭಾ ಮಾಜಿ ಸದಸ್ಯ ಸುಧಾಕರ್, ರೈತ ಸಂಘದ ಯೋಗನಂದಸ್ವಾಮಿ, ಸಿದ್ದಲಿಂಗಸ್ವಾಮಿ, ಮನೋಹರ್ ಪಟೇಲ್, ಜಯಚಂದ್ರಶರ್ಮಾ, ಕರವೇ ಅಧ್ಯಕ್ಷ ವಿಜಯಕುಮಾರ್, ಕಾಂತರಾಜು, ನಿಖಿಲ್‌ರಾಜಣ್ಣ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು