ಕೊಬ್ಬರಿ ಬೆಂಬಲ ಬೆಲೆ ಘೋಷಣೆಗೆ ಆಗ್ರಹ

ಕೊರಟಗೆರೆ, ಆ. ೧೯- ರಾಜ್ಯದಲ್ಲಿ ಕೊಬ್ಬರಿ ಬೆಲೆ ಪಾತಳಕ್ಕಿಳಿದಿದ್ದು ತೆಂಗು ಬೆಳೆಗಾರರು ಸಂಕಷ್ಟಕ್ಕಿಡಾಗಿದ್ದಾರೆ. ಸರ್ಕಾರ ತಕ್ಷಣ ತೆಂಗು ಬೆಳೆಗಾರರ ಕಷ್ಟ ಅರಿತು ಕ್ವಿಂಟಾಲ್ ಕೊಬ್ಬರಿಗೆ ೨೫ ಸಾವಿರ ಬೆಂಬಲೆ ಬೆಲೆ ನೀಡಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರವನ್ನು ಆಗ್ರಹಿಸಿದರು.
ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕ ಕ್ವಿಂಟಾಲ್ ಕೊಬ್ಬರಿಗೆ ೨೫ ಸಾವಿರ ರೂ. ಬೆಂಬಲ ಬೆಲೆಗೆ ಆಗ್ರಹಿಸಿ ಹಾಗೂ ಕೊರಟಗೆರೆ ತಾಲ್ಲೂಕಿನಲ್ಲಿ ಬಗರ್ ಹುಕ್ಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡುವುದು ಮತ್ತು ಸಾಗುವಳಿ ಪತ್ರ ನೀಡಿದ ರೈತರಿಗೆ ಖಾತೆ ಪಹಣಿ ನೀಡುವ ಬಗ್ಗೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚೆಗೆ ಟೊಮೋಟೊ ಬೆಲೆ
ಹೆಚ್ಚಾದಾಗ ಬೆಲೆ ನಿಯಂತ್ರಣಕ್ಕಾಗಿ ಬಾಂಗ್ಲಾ, ನೇಪಾಳ, ಮ್ಯಾನ್ಮಾರ್‌ನಿಂದ ಟಮೋಟೋ ಆಮದು ಮಾಡಿಕೊಳ್ಳುವ ಸರ್ಕಾರ ಇದೇ ರೀತಿ ಕಬ್ಬಿಣ, ಸಿಮೆಂಟ್, ಪೆಟ್ರೋಲ್ ಬೆಲೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಬೆಲೆ ನಿಯಂತ್ರಣಕ್ಕಾಗಿ ಏಕೆ ಆಮದು ಮಾಡಿಕೊಂಡು ಬೆಲೆ ನಿಯಂತ್ರಣ ಮಾಡಬಾರದು. ಕೇವಲ ರೈತರ ಉತ್ಪನ್ನ ಮಾತ್ರ ಏಕೆ ಕಡಿಮೆ ಬೆಲೆ ಮಾಡಲು ಗಮನಹರಿಸುತ್ತಾರೆ ಎಂದು ಪ್ರಶ್ನಿಸಿದರು.
ಕಳೆದ ೪೦ ವರ್ಷಗಳ ಹಿಂದೆಯೇ ಕೊಬ್ಬರಿ ಬೆಲೆ ೯೮೦೦ ರೂ.ಗಳಿತ್ತು. ಅದರೆ ಪ್ರಸ್ತುತ ೮೬೦೦ ರೂ.ಗಳಿಗೆ ಇಳಿದಿದೆ. ಇಂಥ ಸಂದರ್ಭದಲ್ಲಿ ನಾವು ರೈತ ಸಂಘದ ವತಿಯಿಂದ ಪಾದಯಾತ್ರೆ ಹಮ್ಮಿಕೊಂಡಿದ್ದಾಗ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ರಾಜ್ಯದ ಸಚಿವರುಗಳು ಸೇರಿದಂತೆ ಎಲ್ಲರೂ ರೈತರೊಂದಿಗೆ ಚರ್ಚಿಸಿ ಧಾರಣೆ ಆಯಾ ಕಾಲಕ್ಕೆ ಪರಿಷ್ಕರಣೆ ಆಗಬೇಕು ಎನ್ನುವ ರ್ತೀಮಾನ ಮಾಡಲಾಗಿತ್ತು. ಅಂದಿಗೆ ಕೊಬ್ಬರಿ ಬೆಲೆ ೧೮ ಸಾವಿರ ರೂ. ಇರಬೇಕು ಎಂದು ರಾಜ್ಯ ಕೃಷಿ ಬೆಲೆ ಆಯೋಗ ಶಿಫಾರಸ್ಸು ಮಾಡಿತ್ತು. ಕೇಂದ್ರ ಮತ್ತು ರಾಜ್ಯದ ಬೆಂಬಲ ಬೆಲೆ ಸೇರಿಯೂ ಕೊಬ್ಬರಿ ಬೆಲೆ ಸರ್ಕಾರದ ಧಾರಣೆ ೧೩ ಸಾವಿರ ಆಗುತ್ತದೆ ಎಂದರೆ ಈ ಸರ್ಕಾರಗಳು ರೈತರ ಹಿತ ಕಾಪಾಡುತ್ತವೆ ಎಂದರೆ ಸರ್ಕಾರವನ್ನು ನಂಬಬೇಕೆ. ಕೇವಲ ರೈತರು ದೇಶದ ಬೆನ್ನೆಲೆಬು ಎಂದರೆ ಸಾಲದು ಎಂದು ವ್ಯಂಗ್ಯವಾಡಿದರು.
೨೦೧೬ ರಲ್ಲಿನ ದರವನ್ನು ಇಲ್ಲಿಯವರೆಗೆ ಪರಿಷ್ಕರಿಸಿದರೆ, ಇಂದಿನ ಕೊಬ್ಬರಿ ದರ ಕನಿಷ್ಟ ೨೫ ಸಾವಿರ ರೂ. ದಾಟಬೇಕು. ಚುನಾವಣೆ ಸಂದರ್ಭದಲ್ಲಿ ರೈತರಿಗೆ ಕೈ ಮುಗಿದು ಮತ ಕೇಳುವ ಜನಪ್ರತಿನಿಧಿಗಳಾದ ಶಾಸಕರೆ ಹಾಗೂ ಸಂಸತ್ ಸದಸ್ಯರೆ ನೀವು ಕೇಂದ್ರದ ಮೇಲೆ ಒತ್ತಡ ತಂದು ಅಮದಾಗುತ್ತಿರುವ ಕೊಬ್ಬರಿ ಮೇಲೆ ಅಮದು ಶುಲ್ಕವನ್ನು ಹೆಚ್ಚಿಗೆ ಮಾಡಿಸಿದರೆ ಸಾಕು ಮುಕ್ತ ಮಾರುಕಟ್ಟೆಯಲ್ಲಿ ರೈತರಿಗೆ ಉತ್ತಮ ಬೆಲೆ ಬರಲು ಸಾಕಷ್ಟು ನೆರವು ಸಿಗಲಿದೆ. ಈ ನಿಟ್ಟಿನಲ್ಲಾದರೂ ಬದ್ದತೆ ತೋರಿಸಿ ಕೇಂದ್ರದ ಮೇಲೆ ಒತ್ತಡ ತರುವಂತೆ ಮನವಿ ಮಾಡಿದ ಅವರು, ತಕ್ಷಣ ಬೆಂಬಲ ಬೆಲೆ ನೀಡಿದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಜಿಲ್ಲಾ ರೈತರ ಸಂಘದ ಅಧ್ಯಕ್ಷ ಆನಂದ್‌ಪಟೇಲ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ೧೫ ವರ್ಷಗಳಿಂದ ನೀರಾವರಿ ಯೋಜನೆಯಾದ ಎತ್ತಿನಹೊಳೆ ಯೋಜನೆ ಪುರ್ಣಗೊಳಿಸದೆ ಕೇವಲ ಚುನಾವಣಾ ಗಿಮಿಕ್ ಮಾಡುತ್ತಾ ಚುನಾವಣೆಯಲ್ಲಿ ಮತ ಪಡೆದು ಅಧಿಕಾರ ಅನುಭವಿಸುತ್ತಿದ್ದೀರಿ. ಅದರೆ ನೀರಾವರಿ ಯೋಜನೆ ಮಾತ್ರ ಮುಂದುವರೆದಿಲ್ಲ. ಕೆರೆಗಳಿಗೆ ನೀರು ಹರಿಸಿಲ್ಲ. ನೀರಾವರಿ ಯೋಜನೆಗಳ ಹಣವನ್ನು ನೀರಾವರಿ ಯೋಜನೆಗೆ ಉಪಯೋಗಿಸದೆ ಬೇರೆ ಬೇರೆ ಕಾಮಗಾರಿಗಳಿಗೆ ಉಪಯೋಗ ಮಾಡುತ್ತಿದ್ದು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಡಾ.ಜಿ.ಪರಮೇಶ್ವರ್ ಗೃಹ ಸಚಿವರಾಗಿ, ಕೆ.ಎನ್. ರಾಜಣ್ಣ ಸಹಕಾರ ಸಚಿವರಾಗಿ, ಜಯಚಂದ್ರ ರವರು ಸಹ ಉನ್ನತ ಮಟ್ಟದ ಅದಿಕಾರದಲ್ಲಿದ್ದು ತಕ್ಷಣ ನೀರಾವರಿ ಯೋಜನೆಗೆ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ತಾಲ್ಲೂಕು ರೈತರ ಸಂಘದ ಅಧ್ಯಕ್ಷ ಸಿದ್ದರಾಜು ಮಾತನಾಡಿ, ಕೊರಟಗೆರೆ ತಾಲ್ಲೂಕಿನಲ್ಲಿ ಸಾವಿರಾರು ರೈತರು ಬಗರಹುಕುಂ ಸಾಗುವಳಿಗಾಗಿ ಅರ್ಜಿ ಸಲ್ಲಿಸಿ ಸುಮಾರು ವರ್ಷಗಳಿಂದ ಕಾಯುತ್ತಿದ್ದಾರೆ. ಅದರೆ ಸಾವಿರಾರು ಬಡ ರೈತರ ಸಮಸ್ಯೆ ಪರಿಹಾರವಾಗಿಲ್ಲ. ಸೂಕ್ತ ಕ್ರಮ ಕೈಗೊಂಡು ರೈತರಿಗೆ ಸಾಗುವಳಿ ಚೀಟಿ, ಪಹಣಿ ನೀಡಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಪ್ರಧಾನ ರಸ್ತೆಯಲ್ಲಿ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿ ಅವರಣಕ್ಕೆ ಬಂದು ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್, ಪ್ರಧಾನ ಕಾರ್ಯದರ್ಶಿ ಧನಂಜಯ ಆರಾಧ್ಯ, ತಾಲ್ಲೂಕು ರೈತ ಸಂಘದ ಪುಟ್ಟರಾಜು, ಲೋಕೇಶ್, ಪ್ರಸನ್ನಕುಮಾರ್, ದಾನಗಿರಿಯಪ್ಪ, ವೀರಣ್ಣ, ಧನಂಜಯ್, ಲಕ್ಷ್ಮೀನಾಯ್ಕ ಮತ್ತಿತರರು ಭಾಗವಹಿಸಿದ್ದರು.